More

    ವರ್ಷ ಕಳೆದರೂ ಯಾರ ವಿರುದ್ಧವೂ ಕ್ರಮವಾಗಿಲ್ಲ!

    ಧಾರವಾಡ: 2019ರ ಮಾ. 19ರಂದು ಇಲ್ಲಿನ ಕುಮಾರೇಶ್ವರ ನಗರದಲ್ಲಿ ಸಂಭವಿಸಿದ ಬೃಹತ್ ಕಟ್ಟಡ ಕುಸಿತ ಘಟನೆಗೆ ಮಾ. 19ಕ್ಕೆ ಬರೋಬ್ಬರಿ ಒಂದು ವರ್ಷ. 19 ಜನರ ಸಾವು, 57 ಜನರಿಗೆ ಗಾಯಕ್ಕೆ ಕಾರಣವಾದ ಕರಾಳ ಘಟನೆಯನ್ನು ನಗರದ ಜನರು ಮರೆಯಲು ಸಾಧ್ಯವಿಲ್ಲ.

    ಕುಸಿದ ಕಟ್ಟಡದ ಅವಶೇಷ ತೆರವಿಗೆ ಎಸ್​ಡಿಆರ್​ಎಫ್, ಎನ್​ಡಿಆರ್​ಎಫ್ ತಂಡಗಳಿಂದ ಸ್ಥಳೀಯರ ಸಹಕಾರದಲ್ಲಿ 9 ದಿನಗಳ ಕಾರ್ಯಾಚರಣೆ ನಡೆಸಲಾಗಿತ್ತು.

    ಭಾರಿ ಅನಾಹುತಕ್ಕೆ ಕಾರಣವಾದ ಘಟನೆಗೆ ಕಾರಣರಾದವರ ವಿರುದ್ಧ ಇದುವರೆಗೆ ಹೇಳಿಕೊಳ್ಳುವಂಥ ಕ್ರಮ ಮಾತ್ರ ಆಗಿಲ್ಲ. ಪಾಲಿಕೆ ಅಧಿಕಾರಿಗಳು ಸ್ಥಳದಲ್ಲಿದ್ದ ಅವಶೇಷಗಳ ಮಾದರಿ ಸಹ ಸಂಗ್ರಹಿಸಿದ್ದ ಪರೀಕ್ಷಾ ವರದಿ ಏನಾಯಿತು ಎಂಬುದನ್ನೂ ಬಹಿರಂಗಪಡಿಸುತ್ತಿಲ್ಲ.

    ಈ ಕಟ್ಟಡದಲ್ಲಿ ಮಳಿಕೆ ಖರೀದಿಸಿದವರು, ಬಾಡಿಗೆ ಪಡೆದವರಲ್ಲಿ ಕೆಲವರು ಮೃತಪಟ್ಟಿದ್ದರಿಂದ ಅವರ ಕುಟುಂಬಕ್ಕೆ ಆಧಾರವೇ ಇಲ್ಲದಂತಾಗಿದೆ. ಇತ್ತ ಹೂಡಿಕೆ ಮಾಡಿದ ಹಣವೂ ಇಲ್ಲ. ಅವರು ಕೊರಗಿನಲ್ಲೇ ಜೀವನ ಸಾಗಿಸುತ್ತಿದ್ದಾರೆ.

    ಮೃತಪಟ್ಟವರ ಕುಟುಂಬಕ್ಕೆ ಮಹಾನಗರ ಪಾಲಿಕೆ, ರಾಜ್ಯ ಸರ್ಕಾರ, ಪ್ರಧಾನಮಂತ್ರಿ ಪರಿಹಾರ ನಿಧಿ, ಮುಖ್ಯಮಂತ್ರಿ ನಿಧಿಯಿಂದ ಪರಿಹಾರ; ಗಾಯಗೊಂಡವರಿಗೆ ಚಿಕಿತ್ಸೆ ವೆಚ್ಚ ಹಾಗೂ ಪಾಲಿಕೆ ವತಿಯಿಂದ 1 ಲಕ್ಷ ರೂ. ಪರಿಹಾರ ನೀಡಲಾಗಿದೆ.

    ಕಟ್ಟಡದ ಪಾಲುದಾರರಾದ ಗಂಗಪ್ಪ ಶಿಂತ್ರಿ, ಬಸವರಾಜ ನಿಗದಿ, ರವಿ ಸಬರದ, ಮಹಾಬಳೇಶ್ವರ ಪುರದಗುಡಿ ಪೊಲೀಸರಿಗೆ ಶರಣಾಗಿದ್ದರು. ಆರ್ಕಿಟೆಕ್ಟ್ ವಿವೇಕ ಪವಾರ ಸೊಲ್ಲಾಪುರ ಬಳಿ ಬಂಧಿಸಲ್ಪಟ್ಟಿದ್ದರು. ಇವರೆಲ್ಲರಿಗೆ ಜಾಮೀನು ಸಿಕ್ಕಿದೆ.

    ಕಟ್ಟಡ ದುರಂತಕ್ಕೆ ಕಾರಣರಾದವರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದು ಹಿಂದಿನ ಸರ್ಕಾರ ಭರವಸೆ ನೀಡಿತ್ತು. ಇದುವರೆಗೆ ಏನೂ ಆಗಿಲ್ಲ. ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ವಿಚಾರಣೆ ನಡೆಸಿ ವರದಿ ಸಲ್ಲಿಸಿದ್ದಾರೆ. ಮುಂದೇನೂ ಕ್ರಮವಾಗಿಲ್ಲ.

    ನಿರ್ಲಕ್ಷ್ಯ್ಕೆ ಆಕ್ರೋಶ: ಧಾರವಾಡ: ಕುಮಾರೇಶ್ವರ ನಗರದ ಬಹುಮಹಡಿ ಕಟ್ಟಡ ದುರಂತ ಸಂಭವಿಸಿ ವರ್ಷ ಕಳೆದರೂ ಈವರೆಗೆ ರಾಜ್ಯ ಸರ್ಕಾರ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಏನೂ ಕ್ರಮ ಕೈಗೊಂಡಿಲ್ಲ ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಆರೋಪಿಸಿದ್ದಾರೆ.

    ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಂತ್ರಸ್ತ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುತ್ತಿವೆ. ಕಟ್ಟಡ ಕುಸಿದಾಗ ಸ್ಥಳಕ್ಕೆ ಆಗಮಿಸಿದ್ದ ಜನಪ್ರತಿನಿಧಿಗಳು, ಅಧಿವೇಶನಗಳಲ್ಲಿ ಈ ಬಗ್ಗೆ ಪ್ರಶ್ನಿಸಿಯೂ ಇಲ್ಲ. ಅವರಿಗೆ ಆಸಕ್ತಿ ಇಲ್ಲದಿರುವುದು ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.

    ಪರವಾನಗಿ ನೀಡಿದ ಮಹಾನಗರ ಪಾಲಿಕೆ, 2 ಗುಂಟೆ ಸರ್ಕಾರಿ ಖರಾಬ್ ಜಾಗ ಒತ್ತುವರಿಗೆ ಸಹಕರಿಸಿದ ಭೂ ಮಾಪನ ಇಲಾಖೆ ಹಾಗೂ ಇದರಲ್ಲಿ ಶಾಮೀಲಾದ ಸಂಬಂಧಿಸಿದ ವಿವಿಧ ಅಧಿಕಾರಿಗಳ ವಿರುದ್ಧ ಈವರೆಗೆ ಎಫ್​ಐಆರ್ ದಾಖಲಿಸದಿರುವುದು ಪ್ರಕರಣದ ದಿಕ್ಕು ತಪ್ಪಿಸಿದ್ದನ್ನು ತೋರಿಸುತ್ತದೆ ಎಂದು ದೂರಿದ್ದಾರೆ.

    ಮಂಡ್ಯ ಬಸ್ ದುರಂತದಲ್ಲಿ ಮಡಿದವರರಿಗೆ ಹತ್ತು ಲಕ್ಷ ರೂ. ಪರಿಹಾರ ನೀಡಿದ್ದ ರಾಜ್ಯ ಸರ್ಕಾರ, ಈ ಪ್ರಕರಣದಲ್ಲಿ ಸರ್ಕಾರದಿಂದ 3 ಲಕ್ಷ ರೂ., ಪ್ರಧಾನಮಂತ್ರಿ ಪರಿಹಾರ ನಿಧಿ ಅಡಿ 2 ಲಕ್ಷ ಹಾಗೂ ಮಹಾನಗರ ಪಾಲಿಕೆ 2 ಲಕ್ಷ ರೂ. ನೀಡಿದೆ. ಗಂಭೀರ ಸ್ವರೂಪದ ಗಾಯಾಳುಗಳಿಗೆ ಮಹಾನಗರ ಪಾಲಿಕೆ 1 ಲಕ್ಷ ರೂ. ಹಾಗೂ ಪ್ರಧಾನ ಮಂತ್ರಿ ಪರಿಹಾರ 50 ಸಾವಿರ ರೂ. ನೀಡಿದೆ. ಕಟ್ಟಡದಲ್ಲಿ ಮಳಿಗೆ ಖರೀದಿಸಿದ್ದ ಮಾಲೀಕರು ಹಾಗೂ ಬಾಡಿಗೆದಾರರು ಪೂರ್ತಿ ನಷ್ಟವಾಗಿ ಕಂಗಾಲಾಗಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡುವರು ಯಾರು ಎಂದು ಪ್ರಶ್ನಿಸಿದ್ದಾರೆ.

    ಮೃತರ ಕುಟುಂಬಕ್ಕೆ ಕನಿಷ್ಠ 10 ಲಕ್ಷ ರೂ. ಹಾಗೂ ಗಾಯಾಳುಗಳಿಗೆ 3ರಿಂದ 10 ಲಕ್ಷ ರೂ.ವರೆಗೆ ಪರಿಹಾರ ನೀಡಬೇಕು. ಕಟ್ಟಡ ಕುಸಿತದ ಪ್ರಕರಣಗಳ ನಿರ್ವಹಣೆ ಮತ್ತು ಪರಿಹಾರಕ್ಕೆ ಈಗಲಾದರೂ ಸರ್ಕಾರ ಸೂಕ್ತ ನಿಯಮಾವಳಿ ರೂಪಿಸಿ, ಈ ಪ್ರಕರಣಕ್ಕೆ ಗಂಭೀರ ಸ್ವರೂಪ ನೀಡಬೇಕು ಎಂದು ಆಗ್ರಹಿಸಿದ್ದಾರೆ.

    ಕಟ್ಟಡ ದುರಂತ ಸಂಭವಿಸಿದ ಪ್ರಕರಣದಲ್ಲಿ ಮೃತಪಟ್ಟವರ ಕುಟುಂಬದವರು, ಗಾಯಗೊಂಡವರು; ವಿವಿಧ ಸ್ತರದ ಅಧಿಕಾರಿಗಳು ಸೇರಿ ಅನೇಕರ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ತನಿಖೆಗೆ ಆದೇಶವಾದ ಸಂದರ್ಭದಲ್ಲಿ ಚುನಾವಣೆ ಸೇರಿ ಇನ್ನೂ ಅನೇಕ ಕಾರ್ಯಕ್ರಮಗಳು ಎದುರಾಗಿದ್ದವು. ಹೀಗಾಗಿ ಸ್ಪಲ್ಪ ವಿಳಂಬವಾಗಿತ್ತು. ನಂತರ 2-3 ತಿಂಗಳು ತನಿಖೆ ನಡೆಸಿ ಇತ್ತೀಚೆಗಷ್ಟೇ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗಿದೆ. | ದೀಪಾ ಚೋಳನ್ ಜಿಲ್ಲಾಧಿಕಾರಿ

    ಕಟ್ಟಡ ಅವಶೇಷಗಳ ತೆರವು ಕಾರ್ಯಾಚರಣೆಗೆ ತಗುಲಿರುವ ವೆಚ್ಚ, ಪಾಲಿಕೆ ವತಿಯಿಂದ ನೀಡಿದ ಪರಿಹಾರ ಮೊತ್ತ ಸೇರಿ ಎಲ್ಲ ಖರ್ಚನ್ನು ಕಟ್ಟಡ ಮಾಲೀಕರಿಂದಲೇ ಭರಿಸಲು ಕ್ರಮ ಕೈಗೊಳ್ಳಲಾಗಿದೆ. ಒಟ್ಟು ಮೊತ್ತವನ್ನು ಮಾಲೀಕರ ಆಸ್ತಿ ಕರಕ್ಕೆ ಸೇರಿಸಲಾಗಿದೆ. ಆ ಜಾಗದಲ್ಲಿ ಮತ್ತೆ ಕಟ್ಟಡ ನಿರ್ವಣಕ್ಕೆ ಪರವಾನಗಿ ಕೋರಿ ಯಾರಿಂದಲೂ ಅರ್ಜಿ ಸಲ್ಲಿಕೆ ಆಗಿಲ್ಲ. | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts