More

    ವನ್ಯಜೀವಿಧಾಮವಾಗಿಯೇ ಮುಂದುವರಿಯಲಿ ಕಪ್ಪತಗುಡ್ಡ



    ಗದಗ: ಮಾ.9 ರಂದು ಕರ್ನಾಟಕ ವನ್ಯಜೀವಿ ಮಂಡಳಿಯ ಸಭೆಯನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವುದಿಲ್ಲ. ಅದನ್ನು ವನ್ಯಜೀವಿಧಾಮವನ್ನಾಗಿ ಮುಂದುವರಿಸಬೇಕು ಎಂಬ ನಿರ್ಣಯ ಕೈಕೊಂಡು ಘೋಷಣೆ ಮಾಡಬೇಕೆಂದು ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ ಒತ್ತಾಯಿಸಿದ್ದಾರೆ.

    ಈ ಕುರಿತು ಪ್ರಕಟಣೆ ನೀಡಿರುವ ಅವರು, ಮಧ್ಯಕರ್ನಾಟಕದ ಜನರ ಜೀವನಾಡಿಯಂತಿರುವ ಕಪ್ಪತಗುಡ್ಡ ಪ್ರದೇಶದಲ್ಲಿ ಗಣಿಗಾರಿಕೆಗೆ ಅವಕಾಶ ಕಲ್ಪಿಸಲು ಕೆಲವು ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ ಎಂಬ ಮಾತುಗಳಿಗೆ ರೆಕ್ಕೆಪುಕ್ಕಗಳು ಮೂಡುತ್ತಿರುವುದು ದುರ್ದೈವದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕಪ್ಪತಗುಡ್ಡವನ್ನು ವನ್ಯಜೀವಿಧಾಮವನ್ನಾಗಿ ಅಭಿವೃದ್ಧಿಪಡಿಸುವುದರಿಂದ ಜನರನ್ನು ಒಕ್ಕಲೆಬ್ಬಿಸಲಾಗುವುದು ಎಂದು ಪ್ರಾಕೃತಿಕ ಸಂಪತ್ತನ್ನು ಲೂಟಿ ಮಾಡುವ ಉದ್ದೇಶ ಹೊಂದಿರುವ ಕೆಲವು ಗಣಿ ಕಂಪನಿಗಳು ಅಪಪ್ರಚಾರ ಮಾಡುತ್ತಿವೆ. ಈ ಕುರಿತು ಅನೇಕರಿಗೆ ಆಮಿಷಗಳನ್ನು ಒಡ್ಡುತ್ತಿವೆ. ಇಂತಹ ಕಂಪನಿಗಳಿಗೆ ಗಣಿಗಾರಿಕೆ ನಡೆಸುವುದಕ್ಕೆ ಸರ್ಕಾರ ಯಾವ ಕಾಲಕ್ಕೂ ಅವಕಾಶ ಕಲ್ಪಿಸಬಾರದು. ಈ ವಿಷಯದಲ್ಲಿ ಸರ್ಕಾರ ತಪ್ಪು ಹೆಜ್ಜೆ ಇರಿಸಿದರೆ ದೊಡ್ಡ ಹೋರಾಟವನ್ನೇ ಸಂಘಟಿಸಲಾಗುವುದು ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

    ಸಾವಿರಾರು ಪ್ರಕಾರದ ವನಸ್ಪತಿ ಸಸ್ಯಗಳು ಹಾಗು ಜೀವವೈವಿಧ್ಯಗಳಿಂದ ಕೂಡಿದ ಈ ಪ್ರದೇಶದಲ್ಲಿ ಗಣಿಗಾರಿಕೆಯನ್ನು ವಿರೋಧಿಸಿ ಅನೇಕ ಹೋರಾಟಗಳು ನಡೆದಿವೆ. ಗದಗ ತೋಂಟದಾರ್ಯಮಠದ ಜಗದ್ಗುರು ಡಾ. ಸಿದ್ಧಲಿಂಗ ಸ್ವಾಮೀಜಿ ನಡೆಸಿದ ಹೋರಾಟದ ಫಲವಾಗಿ ಸರ್ಕಾರವು ಕಪ್ಪತಗುಡ್ಡವನ್ನು ವನ್ಯಜೀವಿಧಾಮ ಮಾಡುವುದಾಗಿ ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಹಾಲಿ ಸರ್ಕಾರ ಕಪ್ಪತಗುಡ್ಡವನ್ನು ವನ್ಯಜೀವಿಧಾಮವಾಗಿ ಅಭಿವೃದ್ಧಿಪಡಿಸಬೇಕು. ಯಾವ ಕಾಲಕ್ಕೂ ಅಲ್ಲಿ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬಾರದೆಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.

    ಕಪ್ಪತಗುಡ್ಡವು 80 ಸಾವಿರ ಹೆಕ್ಟೇರ್ ಭೂಪ್ರದೇಶ ಹೊಂದಿದ್ದು, ಈ ಭಾಗದಲ್ಲಿ ಮಳೆಯನ್ನು ತರಿಸುವ ಏಕೈಕ ಸಂಪನ್ಮೂಲವಾಗಿದೆ. ಮಳೆ-ಬೆಳೆಗೆ ಕಾರಣವಾಗಿರುವ ಈ ಕಾಡಿನಿಂದಲೇ ಸಾವಿರಾರು ಗ್ರಾಮೀಣ ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಅಲ್ಲಿ ಗಣಿಗಾರಿಕೆ ನಡೆಸುವುದರಿಂದ ಆ ಕುಟುಂಬಗಳು ತೊಂದರೆಗೊಳಗಾಗುತ್ತವೆ. ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ವನಸ್ಪತಿ ಮತ್ತು ಜೀವವೈವಿಧ್ಯಕ್ಕೆ ಹಾನಿಯಾಗಲಿದೆ.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts