More

    ಲೋಕಸಭಾ ಕ್ಷೇತ್ರಗಳಲ್ಲಿ 2221 ಮತಗಟ್ಟೆಗಳ ಸ್ಥಾಪನೆ:ಡಿಸಿ.ಸಿ. ಸತ್ಯಭಾಮಾ

    ಹಾಸನ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 17,36,610 ಮತದಾರರಿದ್ದು, ಇದರಲ್ಲಿ 8,63,727 ಪುರುಷ ಮತದಾರರು ಹಾಗೂ 8,72,840 ಮಹಿಳಾ ಮತದಾರರು ಮತ್ತು 43 ಇತರೆ ಮತದಾರರನ್ನು ಇದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮಾ ಅವರು ಮಾಹಿತಿ ನೀಡಿದರು.
    ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಸನ ಕ್ಷೇತ್ರದಿಂದ 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಪ್ರಿಲ್ 26ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿದ್ದು, 2221 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಚುನಾವಣಾ ಆಯೋಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರ ನೇಮಕ ಮಾಡಿದೆ. ಚುನಾವಣೆಗೆ ಸಂಬಂಧಿಸಿದಂತೆ ಸಿದ್ಧತೆಗಳು ನಡೆದಿದ್ದು, ಯಾವುದೇ ರೀತಿ ಸಮಸ್ಯೆ ಆಗದಂತೆ ಶಾಂತಿಯುತವಾಗಿ ಚುನಾವಣೆ ನಡೆಸಲು ಜಿಲ್ಲೆಯ ಜನರ ಸಹಕಾರ ಅತ್ಯಗತ್ಯವಾಗಿದೆ ಎಂದು ಮನವಿ ಮಾಡಿದರು.
    ಚುನಾವಣೆಯಲ್ಲಿ ಯಾವುದೇ ರೀತಿ ಅಕ್ರಮ ನಡೆಯದಂತೆ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಗಡಿಭಾಗದಲ್ಲಿ ಆಯಕಟ್ಟಿನ ಪ್ರದೇಶದ 31 ಚೆಕ್ ಪೋಸ್ಟ್‌ಗಳನ್ನು ನಿರ್ಮಿಸಲಾಗಿದೆ. ಜತೆಗೆ ಕಣ್ಗಾವಲು ಪಡೆಗಳನ್ನು ನೇಮಿಸಿದ್ದು ಇದರಲ್ಲಿ 114 ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನದ 24 ಗಂಟೆಯೂ ಮೂರು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ. ಮತದಾನ ಮಾಡುವ ವೇಳೆ ಮತದಾರರು ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ. ಒಂದು ವೇಳೆ ಗುರುತಿನ ಚೀಟಿ ಇಲ್ಲದಿದ್ದವರು ಪಾಸ್‌ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಒಟ್ಟು 11 ತರದ ಗುರುತಿನ ಚೀಟಿಗಳನ್ನು ತೋರಿಸಿ ಮತದಾನ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.
    ಜಿಲ್ಲೆಯ ಕೆಲ ಆಯ್ದ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮಾಡಲು ಉದ್ದೇಶಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸೂಕ್ಷ್ಮ ಮತಗಟ್ಟೆಗಳು ಹಾಗೂ ಒಂದಕ್ಕಿಂತ ಹೆಚ್ಚು ಮತಗಟ್ಟೆಗಳಿರುವ ಕೇಂದ್ರಗಳನ್ನು ಗುರುತಿಸಿದ್ದು, ಅವುಗಳಲ್ಲಿ 66 ಕ್ರಿಟಿಕಲ್ ಮತ್ತು 388 ಕ್ಲಸ್ಟರ್ ಮತಗಟ್ಟೆಗಳು ಎಂದು ಗುರುತಿಸುವ ಮೂಲಕ ಅಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

    1.32 ಕೋಟಿ ನಗದು ವಶ:
    ಜಿಲ್ಲೆಯಲ್ಲಿ ಈವರೆಗೂ 1,32,80,592 ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸರಿಯಾದ ದಾಖಲೆ ನೀಡಿದವರ ಹಣವನ್ನು ಹಿಂದುರಿಗಿಸಲಾಗಿದೆ. ಇದಲ್ಲದೆ ಇತ್ತೀಚೆಗೆ ನಗರದ ಮದ್ಯ ತಯಾರಿಕಾ ಘಟಕಕ್ಕೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಸುಮಾರು 9.76 ಕೋಟಿ ರೂ. ಮೌಲ್ಯದ ಮದ್ಯವನ್ನ ವಶಪಡಿಸಿಕೊಂಡಿದ್ದಾರೆ. ಇದಲ್ಲದೆ ಉಚಿತ ಉಡುಗೊರೆ ನೀಡುವ 12 ಬಂಡಲ್ ಸೀರೆಗಳು, ಶರ್ಟ್ ಮತ್ತು ಪ್ಯಾಂಟ್‌ಗಳ 6 ಬಂಡಲ್, 93 ಡ್ರೆಸ್ ಇತ್ಯಾದಿಗಳನ್ನ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಪೊಲೀಸರಿಂದ 70 ಪ್ರಕರಣ, ಎಫ್‌ಎಸ್‌ಟಿ ತಂಡದಿಂದ ಎಂಟು ಪ್ರಕರಣ ಹಾಗೂ ಅಬಕಾರಿ ಇಲಾಖೆಯಿಂದ 34 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

    ದೂರುಗಳ ಅಂಕಿ-ಅಂಶ:
    ಚುನಾವಣೆ ಸಂದರ್ಭದಲ್ಲಿ ಆಮಿಷ ಹಾಗೂ ಉಡುಗೊರೆಗಳನ್ನು ನೀಡುತ್ತಿರುವ ಬಗ್ಗೆ ಮತದಾರರು ಸಹಾಯವಾಣಿ ಸಂಖ್ಯೆ 1950 ಹಾಗೂ ಜಿ-ಮೇಲ್ ಮೂಲಕ ದೂರು ನೀಡಲು ಅವಕಾಶ ಮಾಡಿಕೊಟ್ಟಿದೆ. ಜತೆಗೆ ಸಿ-ವಿಜಿಲ್ ಆಪ್ ಮೂಲಕ ದೂರು ಸಲ್ಲಿಸಬಹುದಾಗಿದೆ. ಸಹಾಯವಾಣಿ ಸಂಖ್ಯೆಗೆ ಈವರೆಗೂ 499 ಕರೆಗಳು ಬಂದಿದ್ದು, ಎಲ್ಲವನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಲಾಗಿದೆ. ಅದೇ ರೀತಿ ಲ್ಯಾಂಡ್ ಲೈನ್ ನಂಬರಿಗೆ 18 ಕರೆಗಳು ಹಾಗೂ ಸಿ-ವಿಜಿಲ್ ಆಪ್‌ಗೆ 183, ಎನ್‌ಜಿಎಸ್‌ಪಿಗೆ 299, ಆಫ್‌ಲೈನ್‌ಗೆ 60 ಸೇರಿ ಒಟ್ಟು 1059 ದೂರುಗಳು ಬಂದಿವೆ ಎಂದು ಹೇಳಿದರು.

    3841 ಜನರಿಂದ ಮತದಾನ:
    ಮತದಾನದಿಂದ ಯಾರೂ ಕೂಡ ವಂಚಿತರಾಗಬಾರದು, ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಲ್ಲಿ 85 ವರ್ಷ ಮೇಲ್ಪಟ್ಟ ಮತದಾರರು ಜಿಲ್ಲೆಯಲ್ಲಿ 2636 ಜನರು ಹಾಗೂ ದಿವ್ಯಂಗ ಮತದಾರರು 1373 ಮತದಾರರು ನೊಂದಾಯಿಸಿಕೊಂಡಿದ್ದಾರೆ. ಏಪ್ರಿಲ್ 13ರಿಂದ 15 ರವರೆಗೆ ಮತದಾನ ಪ್ರಕ್ರಿಯೆ ನಡೆದಿದ್ದು ಇದರಲ್ಲಿ 3841 ಜನರು ಮತದಾನ ಮಾಡಿದ್ದಾರೆ. ನೋಂದಾಯಿಸಿಕೊಂಡವರಲ್ಲಿ ಕೆಲವರು ಮೃತಪಟ್ಟಿದ್ದಾರೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts