More

    ಲಾಕ್‌ಡೌನ್ ಸಂಕಷ್ಟದಲ್ಲಿರುವ ಬಡವರಿಗೆ ಉಜ್ವಲ ಗ್ಯಾಸ್ ಸಿಲಿಂಡರ್ ಹೊರೆ !

    ತುಮಕೂರು: ಲಾಕ್‌ಡೌನ್ ಸಮಯದಲ್ಲಿ ದೇಶಾದ್ಯಂತ ಸಂಕಷ್ಟದಲ್ಲಿರುವ ಬಡವರಿಗೆ ಉಜ್ವಲ ಗ್ಯಾಸ್ ಸಿಲಿಂಡರ್ ಹೊರೆಯಾಗಲಾರಂಭಿಸಿದ್ದು, ಕೇಂದ್ರ ಸರ್ಕಾರ ಘೋಷಿಸಿರುವ ಕಾರ್ಯಕ್ರಮಕ್ಕೆ ಏಜೆನ್ಸಿಗಳೇ ಕೊಕ್ಕೆ ಹಾಕುತ್ತಿವೆ.

    ಯೋಜನೆಯಲ್ಲಿ ಸಂಪರ್ಕ ಪಡೆದಿರುವ ಬಡಜನರಿಗೆ ಈ ಆರ್ಥಿಕ ವರ್ಷದಲ್ಲಿ ಉಚಿತವಾಗಿ ಮೂರು ಸಿಲಿಂಡರ್ ನೀಡುವ ಕೇಂದ್ರ ಸರ್ಕಾರದ ಘೋಷಣೆಗೆ ಗ್ಯಾಸ್ ಏಜೆನ್ಸಿಗಳೇ ಎಳ್ಳುನೀರು ಬಿಟ್ಟು ಬಡಜನರಿಗೆ ಬರೆ ಎಳೆಯಲು ಮಾರ್ಗಸೂಚಿ ಬದಲಾಯಿಸಿಕೊಂಡಿವೆ ಎಂಬ ಆರೋಪ ಕೇಳಿಬಂದಿದೆ.

    ಮಾರ್ಚ್ ಅಂತ್ಯದಲ್ಲಿ ಉಚಿತ ಸಿಲಿಂಡರ್ ವಿತರಿಸಲಾಗಿದ್ದು, ಆ ಸಿಲಿಂಡರ್ ಏಪ್ರಿಲ್ ಅಂತ್ಯದೊಳಗೆ ಖಾಲಿ ಮಾಡಿ ಮತ್ತೊಂದು ಸಿಲಿಂಡರ್ ಬುಕ್ ಮಾಡಿಕೊಂಡರಷ್ಟೇ ಉಚಿತ ಯೋಜನೆ ಇಲ್ಲದಿದ್ದರೆ ಹಣ ನೀಡಬೇಕು ಎಂಬ ಏಜೆನ್ಸಿಗಳ ನಿಯಮ ಗ್ರಾಹಕರ ನಿದ್ದೆಗೆಡಿಸಿದೆ.

    ಬಹುತೇಕ ಬಡ ಕುಟುಂಬದಲ್ಲಿ ಒಂದು ಸಿಲಿಂಡರ್ ಖಾಲಿಯಾಗಲು ಕನಿಷ್ಠ 3 ತಿಂಗಳು ಬೇಕು. ಅದಕ್ಕಿಂತ ಮುಂಚೆಯೇ ಸಿಲಿಂಡರ್ ಬುಕಿಂಗ್‌ಗೆ ಅವರಲ್ಲಿ ಖಾಲಿ ಸಿಲಿಂಡರ್ ಇರುವುದಿಲ್ಲ. ಹಾಗಾಗಿ, ಹೊಸ ಸಮಸ್ಯೆಯೊಂದು ಎದುರಾಗಿದೆ. ಸತತ ಮೂರು ತಿಂಗಳಲ್ಲಿ ಮೂರು ಸಿಲಿಂಡರ್ ಬಳಸುವ ಕುಟುಂಬಗಳು ಜಿಲ್ಲೆಯಲ್ಲಿ ಸಿಗುವುದು ಅಪರೂಪ. ಇದನ್ನೇ ನೆಪವಾಗಿಟ್ಟುಕೊಂಡು ಸರ್ಕಾರದ ‘ಉಚಿತ’ ಕಾರ್ಯಕ್ರಮವನ್ನು ಹಳ್ಳ ಹಿಡಿಸಲು ಏಜೆನ್ಸಿಗಳು ಮುಂದಾಗಿವೆ ಎಂಬ ದೂರುಗಳು ಕೇಳಿಬಂದಿದೆ.

    ಪಾವಗಡ ತಾಲೂಕು ವೈ.ಎನ್.ಹೊಸಕೋಟೆ ಸೇರಿ ಜಿಲ್ಲೆಯ ಬಹುತೇಕ ಏಜೆನ್ಸಿಗಳು ಗ್ರಾಹಕರಿಗೆ ಕರೆ ಮಾಡಿ ಸಿಲಿಂಡರ್ ಬುಕ್ಕಿಂಗ್‌ಗೆ ಒತ್ತಾಯಿಸುತ್ತಿವೆ. ಈಗ ಬುಕ್ ಮಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ಉಚಿತ ಸಿಲಿಂಡರ್ ಕಳೆದುಕೊಳ್ಳುವ ಆತಂಕ ಎದುರಾಗಲಿದೆ ಎಂಬ ಭಯ ಬಿತ್ತಲಾಗುತ್ತಿದೆ. ಕೇಂದ್ರ ಸರ್ಕಾರ ಘೋಷಿಸಿರುವಂತೆ ಉಚಿತವಾಗಿ ಮೂರು ಸಿಲಿಂಡರ್ ಪಡೆಯಲು 2021 ಮಾರ್ಚ್ ಅಂತ್ಯದವರೆಗೂ ಕಾಲಮಿತಿ ನೀಡಬೇಕು ಎಂದು ಯೋಜನೆಯ ಫಲಾನುಭವಿಗಳು ಜಿಲ್ಲಾಡಳಿತಕ್ಕೆ ಮೊರೆಇಟ್ಟಿದ್ದಾರೆ.

    ಉಜ್ವಲ ಗ್ಯಾಸ್ ಯೋಜನೆ ಆಹಾರ ಇಲಾಖೆಯ ನಿಯಂತ್ರಣದಲ್ಲಿರುವುದಿಲ್ಲ. ಅನಿಲ ಕಂಪನಿಗಳು ನೇರವಾಗಿ ಗ್ಯಾಸ್ ಏಜೆನ್ಸಿಗಳ ಮೂಲಕ ಜನರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಉಚಿತ ಗ್ಯಾಸ್ ವಿತರಿಸಬೇಕಿದೆ. ಏಪ್ರಿಲ್ ಅಂತ್ಯದೊಳಗೆ ಒಂದು ಸಿಲಿಂಡರ್ ಖಾಲಿ ಮಾಡಬೇಕು ಎನ್ನುತ್ತಿದ್ದಾರೆ ಎಂಬ ಗ್ರಾಹಕರ ದೂರಿನ ಬಗ್ಗೆ ಪರಿಶೀಲಿಸಲಾಗುವುದು.
    ಶ್ರೀನಿವಾಸಯ್ಯ ಜಂಟಿ ನಿರ್ದೇಶಕ, ಆಹಾರ ಇಲಾಖೆ.

    ಲಾಕ್‌ಡೌನ್ ಸಮಯದಲ್ಲಿ ಕೂಲಿ ಇಲ್ಲದೆ ಸಂಕಷ್ಟದಲ್ಲಿರುವ ಬಡ ಜನರಿಗೆ ಉಚಿತವಾಗಿ ಮೂರು ಸಿಲಿಂಡರ್ ನೀಡುವುದಾಗಿ ಸರ್ಕಾರ ತಿಳಿಸಿದೆ. ಆದರೆ, ಏಜೆನ್ಸಿಗಳು ತಿಂಗಳಿಗೆ ಒಂದು ಸಿಲಿಂಡರ್ ಖಾಲಿ ಮಾಡಬೇಕು ಎಂಬ ಷರತ್ತು ವಿಧಿಸಿರುವುದು ಅವೈಜ್ಞಾನಿಕ. ನಮ್ಮ ಮನೆಯಲ್ಲಿ ಮೂರು ತಿಂಗಳಿಗೆ ಒಂದು ಸಿಲಿಂಡರ್ ಖಾಲಿಯಾಗುವುದು.
    ಮಹಮದ್ ರಫೀಕ್ ವೈ.ಎನ್.ಹೊಸಕೋಟೆ, ಪಾವಗಡ ತಾಲೂಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts