More

    ಲಾಕ್​ಡೌನ್ ಬ್ರೇಕ್ ಮಾಡಿದರೆ ಕಠಿಣ ಕ್ರಮಕೈಗೊಳ್ಳಿ

    ಹಾವೇರಿ: ಕರೊನಾ ವೈರಸ್​ನ ಯಾವುದೇ ವಿಪತ್ತುಗಳನ್ನು ನಿಭಾಯಿಸಲು ವೈದ್ಯಕೀಯ ಸೌಲಭ್ಯಗಳೊಂದಿಗೆ ಸಿದ್ಧವಾಗಿರಬೇಕು. ಜತೆಗೆ ಜನರ ಆತಂಕ ನಿವಾರಿಸಲು ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾಡಳಿತಕ್ಕೆ ಕೃಷಿ ಸಚಿವ ಬಿ.ಸಿ. ಪಾಟೀಲ ಸೂಚಿಸಿದರು.

    ಜಿಲ್ಲಾಧಿಕಾರಿಗಳ ಕಚೇರಿ ಸಭಾಭವನದಲ್ಲಿ ಗುರುವಾರ ಕರೊನಾ ತಡೆ ಕುರಿತು ಅಧಿಕಾರಿಗಳ ಸಭೆ ನಡೆಸಿದ ಅವರು, ಸದ್ಯದ ಪರಿಸ್ಥಿತಿಯಲ್ಲಿ ಜಿಲ್ಲೆ ಕರೊನಾ ಸೋಂಕು ಬಾಧಿತವಾಗಿಲ್ಲ. ಆದರೂ ಯುದ್ಧೋಪಾದಿಯಲ್ಲಿ ಎಲ್ಲ ಮುಂಜಾಗ್ರತೆ ಕೈಗೊಳ್ಳಬೇಕು. ಜಿಲ್ಲಾಸ್ಪತ್ರೆ ಹಾಗೂ ತಾಲೂಕಾಸ್ಪತ್ರೆಗಳಲ್ಲಿ ಈಗಾಗಲೇ ಸಿದ್ಧಮಾಡಿಕೊಂಡಿರುವ ಐಸೋಲೇಷನ್ ವಾರ್ಡ್​ಗಳ ಜತೆಗೆ ಹೆಚ್ಚುವರಿಯಾಗಿ ಕೆರಿಮತ್ತಿಹಳ್ಳಿಯಲ್ಲಿರುವ ಹಳೆಯ ಎಸ್​ಪಿ ಕಚೇರಿಯನ್ನು ಸಿದ್ಧಮಾಡಿಕೊಳ್ಳಿ. ನಗರದ ಹೊರವಲಯಗಳಲ್ಲಿರುವ ಮುರಾರ್ಜಿ ಶಾಲೆ ಅಥವಾ ವಿದ್ಯಾರ್ಥಿ ನಿಲಯಗಳನ್ನು ಗುರುತಿಸಿ ಐಸೋಲೇಷನ್ ವಾರ್ಡ್​ಗಳನ್ನಾಗಿ ಪರಿವರ್ತಿಸಬೇಕು ಎಂದರು.

    ಸರ್ಕಾರಿ ವೈದ್ಯರೊಂದಿಗೆ ಖಾಸಗಿ ವೈದ್ಯರ ಸೇವೆ ಅವಶ್ಯಕತೆಯಿದೆ. ಇಂದಿನಿಂದಲೇ ಅರೇವೈದ್ಯಕೀಯ ಸಿಬ್ಬಂದಿಯನ್ನು ಹೊರಗುತ್ತಿಗೆ ಮೇಲೆ ತೆಗೆದುಕೊಳ್ಳಬೇಕು. ಖಾಸಗಿ ವೈದ್ಯರು ಹಾಗೂ ಅರೇವೈದ್ಯಕೀಯ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದ ಕರೊನಾ ಸೋಂಕಿತರ ಸೇವೆಗೆ ಮುಂದಾಗಬೇಕು ಎಂದರು.

    ವಿದೇಶದಿಂದ ಬಂದಿರುವ ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಿ ಯಾವುದೇ ಸೋಂಕಿಲ್ಲದಿದ್ದರೂ ಹೋಂ ಕ್ವಾರೆಂಟೈನ್ ನಿಗಾ ವಹಿಸಲಾಗಿದೆ. ಇವರು ಮನೆಯಿಂದ ಹೊರಬಂದು ಸುತ್ತಾಡದಂತೆ ಕಟ್ಟೆಚ್ಚರ ವಹಿಸಬೇಕು. ಸರದಿಯಂತೆ ಪೊಲೀಸರನ್ನು ನಿಯೋಜಿಸಿ ಕಾವಲು ಕಾಯಬೇಕು. ಹೋಂ ಕ್ವಾರೆಂಟೈನ್​ನಲ್ಲಿರುವ ಜಿಲ್ಲೆಯ 159ಜನರ ಪಟ್ಟಿಯನ್ನು ಮಾಧ್ಯಮದಲ್ಲಿ ಪ್ರಕಟಿಸಿ ಎಂದರು.

    ಮಾಸ್ಕ್​ಗಳು, ಸ್ಯಾನಿಟೈಸರ್, ವೆಂಟಿಲೇಟರ್, ಹಾಸಿಗೆ, ವೈದ್ಯಕೀಯ ಉಪಕರಣಗಳು ಸೇರಿ ಜಿಲ್ಲೆಗೆ ಅವಶ್ಯವಿರುವ ಎಲ್ಲ ವೈದ್ಯಕೀಯ ಉಪಕರಣಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿ. ಯಾವುದೇ ನಿರ್ಭಂದವಿಲ್ಲ. ಜಿಲ್ಲಾ ಹಂತದಲ್ಲೇ ಎಲ್ಲವನ್ನೂ ಖರೀದಿಸಲು ವಿಪತ್ತು ನಿಧಿಯಿಂದ ಅವಕಾಶ ಕಲ್ಪಿಸಲಾಗಿದೆ. ಅವಶ್ಯಕತೆಗೆ ತಕ್ಕಂತೆ ಖರೀದಿಸಿ ಎಂದರು.

    ಹಾಲು, ಹಣ್ಣು, ತರಕಾರಿ, ದಿನಬಳಕೆ ವಸ್ತುಗಳಿಗೆ ಯಾವುದೇ ಕೊರತೆಯಾಗುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಬೇರೆ ಜಿಲ್ಲೆ ಹಾಗೂ ತಾಲೂಕುಗಳಿಂದ ತರಕಾರಿ ಸೇರಿ ಆಹಾರ ಪದಾರ್ಥಗಳು, ದಿನಸಿಗಳನ್ನು ತರಲು ಅವಕಾಶ ಕಲ್ಪಿಸಿ ದಿನಬಳಕೆ ವಸ್ತಗಳನ್ನು ಸಾಗಣೆ ಮಾಡುವ ವಾಹನಗಳನ್ನು ಗುರುತಿಸಿ ಪರವಾನಗಿ ನೀಡಲಾಗುವುದು ಎಂದರು.

    ಜಿಲ್ಲೆ ಸೇರಿ ದೇಶದಾದ್ಯಂತ ಲಾಕ್​ಡೌನ್ ಇದ್ದರೂ ಕೆಲವರು ಉದ್ದೇಶಪೂರ್ವಕವಾಗಿ ಸುತ್ತಾಡುವುದು, ಬೈಕ್​ನಲ್ಲಿ ತಿರುಗಾಡುವುದು ವರದಿಗಳಾಗಿವೆ. ಇಂತಹವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು. ಸರ್ಕಾರಿ ವಾಹನಗಳು ಹಾಗೂ ಅಗತ್ಯ ಸೇವೆಗೆ ಅನುಮತಿ ಪಡೆದ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳಿಗೆ ಇಂಧನ ಪೂರೈಸದಂತೆ ಬಂಕ್​ಗಳಿಗೆ ಸೂಚನೆ ನೀಡಿ. ಪ್ರತಿ ಬಂಕ್​ಗಳಿಗೂ ಒಬ್ಬರು ಪೊಲೀಸರನ್ನು ನಿಯೋಜಿಸಿ ಎಂದರು.

    ರೇಷ್ಮೆ ಮಾರುಕಟ್ಟೆಗೆ ಹಾಗೂ ದೈನಂದಿನ ಸಾಮಗ್ರಿಗಳ ಸಾಗಣೆ ವಾಹನಗಳಿಗೆ ಅನುಮತಿ ನೀಡಲು ಆಯಾ ತಹಸೀಲ್ದಾರ್​ಗಳಿಗೆ ಅಧಿಕಾರ ನೀಡಬೇಕು. 2ತಿಂಗಳು ಆಹಾರ ಸಾಮಗ್ರಿಗಳನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಕ್ರಮ, ಸ್ವಯಂ ಸೇವಾ ಸಂಸ್ಥೆಗಳ ಸೇವೆ ಬಳಕೆ, ಯಾವುದೇ ನಿರ್ಭಂಧವಿಲ್ಲದೇ ವೈದ್ಯಕೀಯ ಸಿಬ್ಬಂದಿಗೆ, ಪೊಲೀಸರಿಗೆ ಹಾಗೂ ಪೌರ ಕಾರ್ವಿುಕರಿಗೆ ಸುರಕ್ಷಾ ಸೌಲಭ್ಯಗಳ ವಿತರಣೆಗೆ ಕ್ರಮವಹಿಸಬೇಕು ಎಂದರು.

    ಕರೊನಾ ವೈರಸ್ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಪೂರ್ವ ಸಿದ್ಧತೆಗಳ ಕುರಿತಂತೆ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ವಿವರಿಸಿದರು.

    ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಪೂಜಾರ, ಕರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಅಧಿಕಾರಿಗಳಿಗೆ ಸಲಹೆ ನೀಡಿದರು. ಎಸ್​ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

    ಸೇವೆ ನಿರತರಿಗೆ ಕೈಮುಗಿದ ಸಚಿವ

    ಹಾವೇರಿ: ಕರೊನಾ ವೈರಸ್ ಹರಡದಂತೆ ಹಗಲಿರುಳು ಶ್ರಮಿಸುತ್ತಿರುವ ವೈದ್ಯರಿಗೆ ಹಾಗೂ ಅರೇವೈದ್ಯಕೀಯ ಸಿಬ್ಬಂದಿಗೆ ಕೈಮುಗಿದು ಕೃಷಿ ಸಚಿವ ಬಿ.ಸಿ. ಪಾಟೀಲ ಕೃತಜ್ಞತೆ ಸಲ್ಲಿಸಿದರು.

    ಗುರುವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಅವರು ಮೂರನೇ ಮಹಡಿಯಲ್ಲಿ ಸಿದ್ಧವಾಗಿರುವ 10ಹಾಸಿಗೆಯ ವಿಶೇಷ ಐಸೋಲೇಷನ್ ಕೊಠಡಿ ಪರಿಶೀಲಿಸಿದರು. ಬಳಿಕ ಮಾತನಾಡಿ, ನಿಮ್ಮ ಸೇವೆ ಅನುಪಮವಾದದ್ದು. ಜೀವದ ಹಂಗು ತೊರೆದು ಹಗಲಿರುಳು ಕೆಲಸ ಮಾಡುತ್ತಿರುವ ನಿಮಗೆ ನನ್ನದೊಂದು ನಮಸ್ಕಾರ ಎಂದು ಕೈಮುಗಿದರು. ನಿಮ್ಮೊಂದಿಗೆ ನಾನಿದ್ದೇನೆ, ಸರ್ಕಾರವಿದೆ ಧೈರ್ಯವಾಗಿ ಕೆಲಸಮಾಡಿ. ನಿಮ್ಮ ಎಲ್ಲ ಕೆಲಸಗಳಿಗೆ ನಾವು, ಸಮಾಜ ಬೆಂಬಲವಾಗಿರುತ್ತದೆ ಎಂದರು.

    ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಕರೊನಾ ಟಾಸ್ಕಫೋರ್ಸ್ ಕಾರ್ಯಾಚರಣೆ, ವೈದ್ಯಕೀಯ ಸಿಬ್ಬಂದಿ ಸೇವಾ ನಿರ್ವಹಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚೆ ನಡೆಸಿದ್ದೆ. ಅದರಂತೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದೇನೆ. ವೈದ್ಯರು, ದಾದಿಯರು ಹಾಗೂ ಸ್ವಚ್ಛತಾ ಸಿಬ್ಬಂದಿ ಬಹಳ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಲಾಕ್​ಡೌನ್ ಇನ್ನಷ್ಟು ಪರಿಣಾಮಕಾರಿಯಾಗಬೇಕು. ಸರ್ಕಾರ ಮತ್ತು ಜಿಲ್ಲಾಡಳಿತದೊಂದಿಗೆ ಜನ ಸಹಕರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದು ಕೇವಲ ಪೊಲೀಸ್ ಹಾಗೂ ಅಧಿಕಾರಿಗಳ ಕೆಲಸ ಎಂದು ಭಾವಿಸಬಾರದು. ಮನೆಯಿಂದ ಹೊರಬರದ ರೀತಿಯಲ್ಲಿ ಜನರು ತಮ್ಮನ್ನು ತಾವು ನಿರ್ಬಂಧಿಸಬೇಕು. ಏಪ್ರಿಲ್ 15ರವರೆಗೆ ಲಾಕ್​ಡೌನ್​ಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts