More

    ಲಾಕ್​ಡೌನ್ ಉಲ್ಲಂಘನೆಗೆ ಕಠಿಣ ಕ್ರಮ

    ಧಾರವಾಡ: ಲಾಕ್​ಡೌನ್ ಸಡಿಲಿಕೆಯಿಂದ ಜನ ಪರಸ್ಪರ ಅಂತರ ಕಾಯ್ದುಕೊಳ್ಳುತ್ತಿಲ್ಲ. ಮಾಸ್ಕ್ ಧರಿಸದೆ ಅನಗತ್ಯ ಓಡಾಡುವವರ ವಿರುದ್ಧ ಸಂಬಂಧಿಸಿದ ಅಧಿಕಾರಿಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ನಿಯಂತ್ರಣ ಚಟುವಟಿಕೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಕರೊನಾ ವೈರಸ್ ಗ್ರಾಮೀಣ ಭಾಗಕ್ಕೆ ವ್ಯಾಪಿಸಿದರೆ ಅದು ಸಮುದಾಯದಲ್ಲಿ ಹರಡುವ ಸಾಧ್ಯತೆ ಇದೆ. ಆದ್ದರಿಂದ ಹಾಟ್​ಸ್ಪಾಟ್ ಕಂಟೇನ್ಮೆಂಟ್ ವಲಯ, ಬಫರ್ ವಲಯಗಳಲ್ಲಿ ಸರ್ಕಾರದ ಆದೇಶಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದರು. ಆರೋಗ್ಯ ಇಲಾಖೆಯು ರಕ್ತ ಸಂಗ್ರಹಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕು. ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತ ಸಂಗ್ರಹ ಮಾಡಿ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಆಶಾ ಕಾರ್ಯಕರ್ತೆಯರು, ನರ್ಸ್​ಗಳು, ವೈದ್ಯರಿಗೆ ಆರೋಗ್ಯ ಸುರಕ್ಷತಾ ಕಿಟ್​ಗಳನ್ನು ವಿತರಿಸಬೇಕು ಎಂದು ಸಚಿವರು ಸೂಚಿಸಿದರು.

    ಜಿಲ್ಲಾಧಿಕಾರಿ ದೀಪಾ ಚೋಳನ್ ಮಾತನಾಡಿ, ಜಿಲ್ಲೆಯಲ್ಲಿ 1.60 ಲಕ್ಷ ದುರ್ಬಲ ಗುಂಪಿನ ಜನಸಂಖ್ಯೆ ಇದೆ. ಆಶಾ ಕಾರ್ಯಕರ್ತೆಯರು ಸಮೀಕ್ಷೆ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಯಲ್ಲಿ ಕೋವಿಡ್ ಆಸ್ಪತ್ರೆ ಸ್ಥಾಪಿಸಿದ್ದು ಅಲ್ಲಿ 95 ವೆಂಟಿಲೇಟರ್​ಗಳಿವೆ. ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ 87 ವೆಂಟಿಲೇಟರ್​ಗಳಿವೆ ಎಂದು ತಿಳಿಸಿದರು.

    ಪೊಲೀಸ್ ಆಯುಕ್ತ ಆರ್. ದೀಲಿಪ್ ಮಾತನಾಡಿ, ಅವಳಿ ನಗರದಲ್ಲಿ ಅನಗತ್ಯವಾಗಿ ಸುತ್ತಾಡುವವರ ಬೈಕ್ ವಶಪಡಿಸಿಕೊಂಡು ದಂಡ ವಸೂಲಿ ಮಾಡಲಾಗಿದೆ ಎಂದರು.

    ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ, ಜಿ.ಪಂ. ಸಿಇಒ ಡಾ. ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಕಿಮ್್ಸ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಇತರರು ಉಪಸ್ಥಿತರಿದ್ದರು.

    ಆರೋಗ್ಯ ಸಚಿವರಿಗೂ ಫಿವರ್ ಟೆಸ್ಟ್: ಸಭೆಯ ನಂತರ ಸಚಿವ ಬಿ. ಶ್ರೀರಾಮುಲು ಅವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಮೂಲ ಸೌಕರ್ಯ ಪರಿಶೀಲಿಸಿದರು. ಈ ವೇಳೆ ಸಿಬ್ಬಂದಿ ಸಚಿವರ ಫಿವರ್ ಟೆಸ್ಟ್ ಮಾಡುವ ಮೂಲಕ ಸ್ವಾಗತಿಸಿದರು. ಕೋವಿಡ್ 19 ಫಿವರ್ ಕ್ಲಿನಿಕ್​ಗೆ ಭೇಟಿ ನೀಡಿದ ಸಚಿವರು ವೈದ್ಯರು, ನರ್ಸ್​ಗಳು ಹಾಗೂ ಆರೋಗ್ಯ ಸಿಬ್ಬಂದಿಯೊಂದಿಗೆ ಅನೌಪಚಾರಿಕವಾಗಿ ಮಾತನಾಡಿ, ಅವರ ಸೇವೆಯನ್ನು ಪ್ರಶಂಸಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಕುಮಾರ ಮಾನಕರ ಇತರರಿದ್ದರು.

    ಸಾದಾ ಕಾಯಿಲೆಗಳಿಗೂ ಚಿಕಿತ್ಸೆ ನೀಡಿ : ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ರಾಜ್ಯದ ಖಾಸಗಿ ಆಸ್ಪತ್ರೆಗಳು ಇತರ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹಿಂಜರಿಯುತ್ತಿರುವ ಮಾತು ಕೇಳಿ ಬರುತ್ತಿದೆ. ಅಂಥ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಎಚ್ಚರಿಕೆ ನೀಡಿದರು.

    ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೊನಾ ಪರಿಹಾರ ಕ್ರಮಗಳ ಪರಿಶೀಲನಾ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಜಿಲ್ಲಾಡಳಿತಗಳು, ಪೊಲೀಸ್, ಆರೋಗ್ಯ ಇಲಾಖೆ, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ, ದೇಶದಿಂದ ಕರೊನಾ ತೊಲಗಿಸಲು ಸರ್ಕಾರ ಸನ್ನದ್ಧವಾಗಿದೆ. ಲಾಕ್​ಡೌನ್ ಸಡಿಲಿಕೆಯಾದ ನಂತರ ಜನರಲ್ಲಿ ಪರಸ್ಪರ ಅಂತರ ಕಡಿಮೆಯಾಗುತ್ತಿದ್ದು, ಸೋಂಕು ಹರಡುವಿಕೆ ತಡೆಗೆ ಸಹಕರಿಸಬೇಕು ಎಂದು ವಿನಂತಿಸಿದರು.

    ರಾಜ್ಯದಲ್ಲಿ ಇದುವರೆಗೆ 753 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 376 ಜನ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯಾದ್ಯಂತ ಪ್ರತಿದಿನ 7-8 ಸಾವಿರ ಕೋವಿಡ್ ತಪಾಸಣೆ ನಡೆಯುತ್ತಿದೆ. ಇನ್ನೊಂದು ವಾರದಲ್ಲಿ 10,000 ಜನರ ತಪಾಸಣೆ ಗುರಿ ಇದೆ. ರಾಜ್ಯದಲ್ಲಿ ಸದ್ಯ 32 ಕೋವಿಡ್ ತಪಾಸಣೆ ಪ್ರಯೋಗಾಲಯಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ ಹಲವು ಜಿಲ್ಲೆಗಳಿಂದ ಪ್ರಯೋಗಾಲಯಗಳ ಆರಂಭಕ್ಕೆ ಬೇಡಿಕೆ ಇದೆ. ಎಲ್ಲ ಜಿಲ್ಲೆಗಳಿಗೂ ಕೋವಿಡ್ ಪ್ರಯೋಗಾಲಯ ನಿರ್ವಣಕ್ಕೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಆಯುಷ್ ವೈದ್ಯರ ವೇತನ ತಾರತಮ್ಯವಾಗಿರುವ ದೂರುಗಳಿದ್ದು, ಸರ್ಕಾರ ಕೂಡಲೆ ಸರಿಪಡಿಸುವ ಕಾರ್ಯ ಮಾಡಲಿದೆ ಎಂದರು.

    ವಿದೇಶಗಳಿಂದ ಬರುವವರಿಗೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಮಾಡಲಾಗುವುದು. ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಸೆಂಟ್ರಲೈಸ್ಡ್ ಆಕ್ಸಿಜನ್

    ಸಿಸ್ಟ್ಂ ಅಳವಡಿಕೆಗೆ ಪ್ರಯತ್ನಿಸಲಾಗುವುದು. ಕೋವಿಡ್ ನಂತರದ ದಿನಗಳಲ್ಲಿ ಇದು ಸಹಾಯಕಾರಿಯಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts