More

    ಲಂಚಕ್ಕೆ ಬೇಡಿಕೆ ಇಟ್ಟರೆ ಗಮನಕ್ಕೆ ತನ್ನಿ

    ಸೋಮವಾರಪೇಟೆ: ಲಂಚ ಪಡೆಯುವುದು ತಪ್ಪು, ಕೊಡುವುದೂ ತಪ್ಪು. ಕಂದಾಯ ಇಲಾಖೆಯಲ್ಲಿ ನೌಕರು ಲಂಚಕ್ಕಾಗಿ ಬೇಡಿಕೆ ಇಟ್ಟರೆ ಕೂಡಲೇ ನನ್ನ ಗಮನಕ್ಕೆ ತಂದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಾಲೂಕು ತಹಸೀಲ್ದಾರ್ ಎಸ್.ಎನ್.ನರಗುಂದ ಕೃಷಿಕರಿಗೆ ಭರವಸೆ ನೀಡಿದರು.


    ಜಿಲ್ಲಾಡಳಿತ ಮತ್ತು ಸೋಮವಾರಪೇಟೆ ತಾಲೂಕು ಆಡಳಿತದ ವತಿಯಿಂದ ಗೆಜ್ಜೆಹಣಕೋಡು ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಸಾರ್ವಜನಿಕರ ಆರೋಪಕ್ಕೆ ಉತ್ತರಿಸಿದರು.


    ತಾಲೂಕು ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರೆ, ಪ್ರತಿ ಟೇಬಲ್‌ನಿಂದ ಕಡತ ವಿಲೇವಾರಿಯಾಗಬೇಕಾದರೆ ಅರ್ಜಿದಾರರು ನಿಲ್ಲಬೇಕು. ಕೆಲ ಟೇಬಲ್‌ಗಳಲ್ಲಿ ಹಣ ನೀಡದಿದ್ದರೆ ಅರ್ಜಿಗಳಿಗೆ ಮುಕ್ತಿ ಸಿಗುತ್ತಿಲ್ಲ. ಅನೇಕ ದುರಸ್ತು, ಪೋಡಿ, ಸರ್ವೇ ಕಡತಗಳು ವರ್ಷಾನುಗಟ್ಟಲೆ ಕಚೇರಿಯಲ್ಲೇ ಧೂಳು ತಿನ್ನುತ್ತಿವೆ. ತಹಸೀಲ್ದಾರ್ ಅವರು ಸಕಾಲದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಮಾಡಬೇಕು. ವಿಳಂಬ ಮಾಡಿರುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಾಫಿ ಬೆಳೆಗಾರ ಎಚ್.ಆರ್.ಸುರೇಶ್, ಖಾರವಾಗಿಯೇ ಪ್ರಶ್ನಿಸಿದರು.


    ತಮ್ಮ ಕೆಲಸ ಮಾಡಿಸಿಕೊಳ್ಳಲು ಲಂಚ ಕೊಡಬೇಕಾದ ಅವಶ್ಯಕತೆ ಇಲ್ಲ. ಅಂತಹ ಸಂದರ್ಭ ಬಂದರೆ ಕಚೇರಿಯಲ್ಲಿ ಸಂಪರ್ಕಿಸಿ, ಅವಧಿಯೊಳಗೆ ಕೆಲಸ ಮಾಡಿಸಿಕೊಡಲಾಗುವುದು. ಅರ್ಜಿಗೆ ಅವಶ್ಯವಿರುವ ಪೂರ್ಣ ದಾಖಲಾತಿಗಳ ವಿವರವನ್ನು ಒಂದೇ ಬಾರಿ ಹೇಳಬೇಕು. ಪದೇಪದೆ ಅರ್ಜಿದಾರರನ್ನು ಅಲೆಸಬಾರದು ಎಂದು ಕಂದಾಯ ಇಲಾಖೆಯ ಸಿಬ್ಬಂದಿಗೆ ತಹಸೀಲ್ದಾರ್ ಸೂಚಿಸಿದರು.


    ಗೆಜ್ಜೆಹಣಕೋಡು, ಕೂಗೇಕೋಡಿ, ದೊಡ್ಡಹಣಕೋಡು, ಹೊನವಳ್ಳಿ ಗ್ರಾಮಸ್ಥರು ಸಂಜೆ 5ಗಂಟೆಯವರಗೆ ಅರ್ಜಿ ಸಲ್ಲಿಸಿದರು. ಎಲ್ಲ ಅರ್ಜಿಗಳನ್ನು ಪರಿಶೀಲಸಿ ಸೂಕ್ತ ಕೃಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.


    ವೇದಿಕೆಯಲ್ಲಿ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿಂದು, ಉಪಾಧ್ಯಕ್ಷೆ ರಶೀದಾ, ಉಪ ತಹಸೀಲ್ದಾರ್ ನಾಗರಾಜ್, ಅಬಕಾರಿ ಡಿವೈಎಸ್‌ಪಿ ಚೈತ್ರಾ, ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಇಂದೂಧರ್, ಸಬ್‌ಇನ್ಸ್‌ಪೆಕ್ಟರ್ ರಮೇಶ್ ಕುಮಾರ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts