More

    ರೈತ ಪರ ಕಾಯ್ದೆ ವಿರುದ್ಧ ಕಾಂಗ್ರೆಸ್ ರಾಜಕಾರಣ

    ಹಾವೇರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಪರವಾದ ಕಾಯ್ದೆ ಜಾರಿಗೆ ಮುಂದಾಗಿವೆ. ಆದರೆ, ಅದರ ವಿರುದ್ಧ ಕಾಂಗ್ರೆಸ್ ರಾಜಕಾರಣ ಮಾಡಿ, ರೈತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.

    ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರುಕಟ್ಟೆಯಲ್ಲಿ ರೈತನೇ ತನ್ನ ಫಸಲಿಗೆ ಬೆಲೆ ನಿಗದಿಗೊಳಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದೆ. ಈ ಕಾಯ್ದೆಯಿಂದ ಬಿಜೆಪಿಗೆ ಲಾಭವಾಗುತ್ತದೆ ಎಂದು ಕಾಂಗ್ರೆಸ್ ವಿರೋಧಿಸುತ್ತಿದೆ. ಕಾಂಗ್ರೆಸ್ ಪಕ್ಷ ದಲ್ಲಾಳಿಗಳ ಪರವಾಗಿದೆ. ರೈತರು ದಲ್ಲಾಳಿಗಳಿಂದ ತುಳಿತಕ್ಕೆ ಒಳಗಾಗುತ್ತಿದ್ದಾರೆ. ಈಗ ಅದರ ಬದಲಾವಣೆಯಾಗಲಿದೆ ಎಂದರು.

    ಬಂದ್ ವಿಫಲ: ನೂತನ ಕಾಯ್ದೆ ಜಾರಿಯಿಂದ ಮುಂದೆ ಫಸಲು ಮಾರಾಟದಲ್ಲಿ ರೈತನ ತೀರ್ವನವೇ ಅಂತಿಮವಾಗುತ್ತದೆ. ದಲ್ಲಾಳಿಗಳು ರೈತನ ಮನೆ ಬಾಗಿಲಿಗೆ ಬರುತ್ತಾರೆ. ಇದನ್ನು ಸಹಿಸದ ಕಾಂಗ್ರೆಸ್ ಬಂದ್​ಗೆ ಬೆಂಬಲ ಸೂಚಿಸಿದೆ. ಆದರೆ, ರಾಜ್ಯದಲ್ಲಿ ಬಂದ್ ವಿಫಲವಾಗಿದೆ. ರಾಜ್ಯದ ಜನರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರವಾಗಿ ನಿಂತಿದ್ದಾರೆ. ಅಧಿಕಾರ ಕಳೆದುಕೊಂಡು ಹತಾಶೆಯಲ್ಲಿರುವ ಕಾಂಗ್ರೆಸ್ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾಗಿದೆ ಎಂದು ಕಿಡಿಕಾರಿದರು.

    ಸಿಎಂ ಬದಲಾವಣೆ ಇಲ್ಲ: ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ. ಈ ಕುರಿತು ಎಲ್ಲಿಯೂ ಚರ್ಚೆಯಾಗಿಲ್ಲ. ಮುಂದಿನ ಮೂರು ವರ್ಷ ಬಿಎಸ್​ವೈ ಅವರೇ ಸಿಎಂ ಆಗಿರುತ್ತಾರೆ. ಸಂಪುಟ ವಿಸ್ತರಣೆ ವಿಚಾರ ಸಿಎಂ ವಿವೇಚನೆಗೆ ಬಿಟ್ಟಿದ್ದು ಎಂದರು. ಅಕಾಲಿಕವಾಗಿ ನಿಧನರಾದ ಕೇಂದ್ರ ಸಚಿವ ಸುರೇಶ ಅಂಗಡಿ ಅವರನ್ನು ಸಿಎಂ ಮಾಡಬೇಕು ಎಂದು ಈ ಹಿಂದೆ ಸಭೆಯಾಗಿತ್ತು ಎಂದಿರುವ ಅಂಗಡಿಯವರ ಸೋದರ ಮಾವ ಲಿಂಗರಾಜ ಹೇಳಿಕೆ ಕುರಿತ ಮಾಧ್ಯಮದವರ ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಟೀಲ್ ಅವರು, ಸುರೇಶ ಅಂಗಡಿ ಅವರು ಎಲ್ಲಿಯೂ ಈ ಬಗ್ಗೆ ಹೇಳಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts