More

    ರೈತರ ಸಮಸ್ಯೆ ಪರಿಹರಿಸುವಲ್ಲಿ ಸರ್ಕಾರ ವಿಫಲ

    ಕೊಲಾರ: ನರಗುಂದ, ನವಲಗುಂದದಲ್ಲಿ ೧೯೮೦ ಜು.೨೧ರಂದು ಹೋರಾಟ ನಡೆಸುತ್ತಿದ್ದ ೧೫೩ ರೈತರ ಕಗ್ಗೋಲೆಗೆ ಅಂದಿನ ಮುಖ್ಯಮಂತ್ರಿ ಗುಂಡುರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಾರಣವಾಗಿದ್ದು, ಆ ಕರಾಳ ದಿನವನ್ನು ಪ್ರತಿವರ್ಷ ರೈತ ಹುತಾತ್ಮದಿನವನ್ನಾಗಿ ಆಚರಿಸಲಾಗುತ್ತಿದೆ. ಆದರೆ ಈಗಲೂ ರೈತರ ಪರಿಸ್ಥಿತಿ ಬದಲಾಗಿಲ್ಲ, ಸರ್ಕಾರಗಳು ನೇರವಾಗಿ ಹತ್ಯೆ ಮಾಡಿಸದಿದ್ದರೂ, ರೈತರ ಸಮಸ್ಯೆಗಳನ್ನು ಬಗೆಹರಿಸದೆ ರೈತರನ್ನು ನರಕಯಾತನೆ ಪಡುವಂತೆ ಮಾಡಿವೆ ಎಂದು ರೈತಸಂಘ(ಪ್ರೊ.ಎಂಡಿಎನ್ ಬಣ) ಯುವ ಘಟಕ ರಾಜ್ಯಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ ತಿಳಿಸಿದರು.
    ನಗರದ ಗಾಂಧಿವನದಲ್ಲಿ ವಿವಿಧ ಸಂಘ, ಸಂಸ್ಥೆಗಳು ಶುಕ್ರವಾರ ಆಯೋಜಿಸಿದ್ದ ರೈತ ಹುತಾತ್ಮ ದಿನಾಚರಣೆಯಲ್ಲಿ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿ, ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸುತ್ತಿದ್ದವರ ಮೇಲೆ ಅಂದಿನ ಸರ್ಕಾರ ಗುಂಡಿನ ಸುರಿಮಳೆಗರೆದು ಬಲಿ ತೆಗೆದುಕೊಂಡಿತ್ತು. ಇಂತಹ ಕ್ರೂರ ದಿನಗಳು ಮರುಕಳಿಸಬಾರದು. ಆದರೆ ರೈತರನ್ನು ಕಷ್ಟ, ನಷ್ಟಗಳ ಪಾಲು ಮಾಡಿರುವ ಇಂದಿನ ಸರ್ಕಾರಗಳು ನಿತ್ಯ ನರಕಯಾತನೆ ಅನುಭವಿಸುವಂತೆ ಮಾಡಿವೆ ಎಂದು ದೂರಿದರು.
    ಜಿಲ್ಲೆಯಲ್ಲಿ ಬರ ಆವರಿಸಿದ್ದು. ರೈತರ ಎಲ್ಲ ರೀತಿಯ ಬ್ಯಾಂಕಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಕೇಂದ್ರ, ರಾಜ್ಯ ಸರ್ಕಾರ ಮತ್ತು ಬೀಜೋತ್ಪತ್ತಿ ಕಂಪೆನಿಗಳು, ಮಾರಾಟಗಾರರು ಬೆಳೆ ಮತ್ತು ರೈತರಿಗೆ ವಿಮೆ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ ಮಾತನಾಡಿ, ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಮೇಕೆದಾಟು ಯೋಜನೆ ವ್ಯಾಪ್ತಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಸೇರಿಸಬೇಕು. ಕೆಸಿ ವ್ಯಾಲಿ ಮತ್ತು ಎಚ್‌ಎನ್ ವ್ಯಾಲಿ ನೀರನ್ನು ಮೂರನೇ ಹಂತದ ಶುದ್ಧೀಕರಣ ಮಾಡಬೇಕು. ಯರಗೋಳ್ ಕಾಮಗಾರಿ ಪೂರ್ಣಗೊಳಿಸಿ ನೀರು ಸರಬರಾಜಿಗೆ ಕ್ರಮ ಕೈಗೊಳ್ಳಬೇಕು. ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಿ ಕಾಂಪೌಂಡ್ ಹಾಕಿಸಬೇಕು ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು. ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡಬೇಕು. ಲೀಟರ್ ಹಾಲಿಗೆ ೬೦ ರೂ. ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
    ತಹಸೀಲ್ದಾರ್ ಹರ್ಷವರ್ಧನ್, ತಾಪಂ ಇಒ ಮುನಿಯಪ್ಪ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಚನ್ನಬಸಪ್ಪ, ರೇಷ್ಮೆ ಇಲಾಖೆ ಅಧಿಕಾರಿ ನಾರಾಯಣಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ವಿನೋದ್, ಪ್ರಜಾ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕಲ್ವಮಂಜಲಿ ಸಿ.ಶಿವಣ್ಣ, ರಾಜ್ಯಾಧ್ಯಕ್ಷ ನರಸಾಪುರ ನಾರಾಯಣಸ್ವಾಮಿ, ಜೈ ಭೀಮ್ ಭಾರತ ಸೇನೆ ಮುಖಂಡ ಅಂಬರೀಶ್, ವಕೀಲರಾದ ಸತೀಶ್, ಖಾಜಿಕಲ್ಲಹಳ್ಳಿ ನಾರಾಯಣಸ್ವಾಮಿ, ಮಡಿವಾಳ ಮುನಿರಾಜ್, ರೈತ ಸಂಘ ರಾಜ್ಯ ಉಪಾಧ್ಯಕ್ಷ ಕೊಲದೇವಿ ಗೋಪಾಲಕೃಷ್ಣಮೂರ್ತಿ, ಜಿಲ್ಲಾದ್ಯಕ್ಷ ಕೊತ್ತುಮಿರಿ ಜಿ.ಮಂಜುನಾಥ್, ಮುಖಂಡರಾದ ಲಕ್ಷ್ಮೀನಾರಾಯಣ ಶೆಟ್ಟಿ, ತೇರಾಹಳ್ಳಿ ಚಂದ್ರಪ್ಪ, ತಿಪ್ಪಸಂದ್ರ ಹರೀಶ್, ಜಗನ್ನಾಥ್ ರೆಡ್ಡಿ, ದೊಡ್ಡ ಕುರುಬರಲ್ಲಿ ಶಂಕರೇಗೌಡ, ಕದಿರೇನಹಳ್ಳಿ ಶ್ರೀನಿವಾಸ್, ಕಾಡು ಕಚ್ಚಿನಹಳ್ಳಿ ವಿಶ್ವನಾಥ್, ಧನರಾಜ್, ಹನುಮಪ್ಪ, ವಿಶ್ವನಾಥ್, ಸತೀಶ್, ನರಸಿಂಹ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts