More

    ರೈತರ ಸಬಲೀಕರಣವೇ ನಮ್ಮ ಧ್ಯೇಯ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಿಮತ

    ಶ್ರೀನಿವಾಸಪುರ: ಎರಡೂ ಜಿಲ್ಲೆಗಳ ಕಟ್ಟಕಡೆಯ ವ್ಯಕ್ತಿಗೂ ಸಾಲ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದ್ದು, 5 ಗುಂಟೆಯಿಂದ 10 ಗುಂಟೆ ಹೊಂದಿರುವ ರೈತರಿಗೆ 2 ತಿಂಗಳಲ್ಲಿ ರೈತರಿಗೆ ಪಕ್ಷಾತೀತವಾಗಿ, ರಾಜಕೀಯರಹಿತವಾಗಿ ಸಾಲ ನೀಡಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ಹೇಳಿದರು.

    ತಾಲೂಕಿನ ಅಡ್ಡಗಲ್ ಗ್ರಾಮದಲ್ಲಿ ಶುಕ್ರವಾರ 54 ಸ್ತ್ರೀಶಕ್ತಿ ಸಂಘಗಳಿಗೆ 2.70 ಕೋಟಿ ರೂ. ಸಾಲ ವಿತರಣೆ ಮಾಡಿ ಮಾತನಾಡಿ, ಅಡ್ಡಗಲ್ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಬೀಗ ಹಾಕಲಾಗಿತ್ತು. ಶಾಸಕ ರಮೇಶ್ ಕುಮಾರ್ ಪರಿಶ್ರಮದಿಂದ ಮರುಜೀವ ಬಂದಿದ್ದು, ಪ್ರಸ್ತುತ ಸಾಲ ನೀಡುವಷ್ಟು ಚೈತನ್ಯ ನೀಡಲಾಗಿದೆ. ಇದನ್ನು ಹೀಗೇ ಮುಂದುವರಿಸಿಕೊಂಡು ಹೋಗಬೇಕು. ಕಾರ್ಯದರ್ಶಿಗಳು ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ರೈತರಿಂದ ಪಹಣಿ ಮತ್ತು ದಾಖಲೆ ಪಡೆದು ಅವರಿಗೆ ಸಾಲ ನೀಡುವ ಕೆಲಸ ಮಾಡಬೇಕು ಎಂದು ಸೂಚಿಸಿದರು.
    ಸಾಲ ನೀಡಲು ಎನ್‌ಒಸಿ ಅವಶ್ಯಕತೆ ಇಲ್ಲ. ನೀವು ಸಾಲಕ್ಕಾಗಿ ನೀಡುವ ಪಹಣಿ ಯಾವುದೇ ಬ್ಯಾಂಕ್‌ಗೆ ಆಧಾರ ಇರಬಾರದು. ಇಂತಹ ಪಹಣಿಗೆ ಸಾಲ ನೀಡುತ್ತೇವೆ ಎಂದರು.

    ಈ ಹಿಂದೆ ಸ್ತ್ರೀಶಕ್ತಿ ಸಂಘಗಳಿಗೆ 30 ಸಾವಿರ ರೂ. ನೀಡಲಾಗುತ್ತಿತ್ತು, ಪ್ರಸ್ತುತ 50 ಸಾವಿರ ರೂ.ಗಳಿಗೆ ಏರಿಕೆ ಮಾಡಲಾಗಿದೆ. ಮುಂದೆ 1 ಲಕ್ಷ ರೂ. ನೀಡುವ ಗುರಿ ಇದೆ. ಬೀದಿಬದಿ ವ್ಯಾಪಾರಸ್ಥರಿಗೂ ಸಾಲ ನೀಡಲಾಗುವುದು ಎಂದರು.

    ಶಾಸಕ ಕೆ.ಆರ್.ರಮೇಶ್ ಕುಮಾರ್ ಮಾತನಾಡಿ, ಈ ಹಿಂದೆ ಅಡ್ಡಗಲ್ ಸೊಸೈಟಿ ಮುಚ್ಚಿ ಹೋಗಿತ್ತು. ಅದನ್ನು ಪುನಾ ಪ್ರಾರಂಭಿಸಿ ರೈತರ ನೆರವಿಗೆ ಬರುವಂತೆ ಮಾಡಲಾಗಿದೆ. ಶೂನ್ಯಬಡ್ಡಿಯಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡುವ ಕೆಲಸವಾಗಬೇಕು. ಸ್ತ್ರೀಶಕ್ತಿ ಸಂಘಗಳಿಗೆ ಈ ಹಿಂದೆ ನೀಡಲಾಗಿದ್ದ ಸಾಲ ಕೆಲವರು ಮರುಪಾವತಿಸಿಲ್ಲ. ಅದಕ್ಕೆ ಬೇರೆ ಮಾರ್ಗ ಹುಡುಕಲಾಗಿದೆ. ಇನ್ನು ಮುಂದೆ ಪಡೆಯುವ ಸಾಲ ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದರು.

    ಅನೇಕರು ಸೊಸೈಟಿಗಳಲ್ಲಿ ಸದಸ್ಯರೇ ಆಗಿಲ್ಲ. ಪೌತಿ ವಾರಸು ಆಗದಿದ್ದರೂ ಪರವಾಗಿಲ್ಲ. ಅದನ್ನು ನಾನು ಸರಿ ಮಾಡಿಸುತ್ತೇನೆ. ಬಡ್ಡಿ ಇಲ್ಲದೆ ಸಾಲ ನೀಡುವಾಗ ಅದರ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಈಗ ನೀಡುತ್ತಿರುವ 3 ಲಕ್ಷ ರೂ. ಸಾಲವನ್ನು 6 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ತರಲಾಗುವುದು ಎಂದರು.

    ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ, ಅಡ್ಡಗಲ್ ಸೊಸೈಟಿ ಅಧ್ಯಕ್ಷ ವೆಂಕಟರಾಮರೆಡ್ಡಿ, ಮುಖಂಡರಾದ ಸಂಜಯ್‌ರೆಡ್ಡಿ, ರಾಮಾಂಜನೇಯಸ್ವಾಮಿ, ರಘುನಾಥರೆಡ್ಡಿ, ಯರಂವಾರಿಪಲ್ಲಿ ಶಿವಣ್ಣ ಇತರರಿದ್ದರು.

    ಕೆ.ಸಿ.ವ್ಯಾಲಿ ಎರಡನೇ ಹಂತ: ಕೆ.ಸಿ. ವ್ಯಾಲಿ ಎರಡನೇ ಹಂತದ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಈ ತಾಲೂಕಿನ ಉಳಿದ ಕೆರೆಗಳಿಗೂ ನೀರು ಬರಲಿದೆ. ಎತ್ತಿನಹೊಳೆ ಯೋಜನೆಯ ಕಾಮಗಾರಿ ಪ್ರಗತಿಯೂ ಹೆಚ್ಚಲಿದೆ. ಈಗಾಗಲೆ ಅದರ ಉಸ್ತುವಾರಿಯನ್ನು ಕೃಷ್ಣಬೈರೇಗೌಡರು ವಹಿಸಿದ್ದಾರೆ. ಅವರು ಹಣಕಾಸು ಸಮಿತಿ ಅಧ್ಯಕ್ಷರಾಗಿರುವುದರಿಂದ ಎತ್ತಿನಹೊಳೆ ಯೋಜನೆ ಕಡೆ ಗಮನ ಹರಿಸಲಿದ್ದಾರೆ. ರೈತನಿಗೆ ವ್ಯವಸಾಯಕ್ಕೆ ನೀರು ಸಿಕ್ಕಿದರೆ ಯಾರ ಬಳಿಯೂ ಸಾಲ ಮಾಡದೆ ಡಿಸಿಸಿ ಬ್ಯಾಂಕ್‌ನಿಂದ ಶೂನ್ಯಬಡ್ಡಿಯಲ್ಲಿ ಸಾಲ ಪಡೆದು ವ್ಯವಸಾಯ ಮುಂದುವರಿಸಬಹುದು ಎಂದು ರಮೇಶ್‌ಕುಮಾರ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts