More

    ರೈತರಿಗಿಲ್ಲ ಇನ್ನು ನೀರಿನ ಬವಣೆ – ಡಿಸಿಎಂ ಲಕ್ಷ್ಮಣ ಸವದಿ



    ಬೆಳಗಾವಿ: ಕರಿಮಸೂತಿ ಯೋಜನೆಯಡಿ ಹಲ್ಯಾಳ ಏತ ನೀರಾವರಿಯಿಂದಾಗಿ ತಾಲೂಕಿನ ಬಹುಭಾಗ ಪ್ರದೇಶಕ್ಕೆ ನೀರು ಹರಿಯಲಿದ್ದು, ಎಲ್ಲ ಕೆರೆ ಕಾಲುವೆಗಳು ತುಂಬಲಿವೆ. ಇದರಿಂದ ಅಥಣಿ ತಾಲೂಕಿನ ಎಲ್ಲ ಕೃಷಿಕರಿಗಿದ್ದ ನೀರಿನ ಬವಣೆ ನೀಗಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

    ಅಥಣಿ ತಾಲೂಕಿನ ಹಲ್ಯಾಳ ಗ್ರಾಮದಲ್ಲಿ ಏತ ನೀರಾವರಿ ಯೋಜನೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಯೋಜನೆಯಿಂದಾಗಿ ಅಂತರ್ಜಲ ಮಟ್ಟ ಸುಧಾರಣೆಯಾಗಲಿದೆ. ಜತೆಗೆ ಬತ್ತಿ ಹೋಗಿರುವ ಕೊಳವೆ ಬಾವಿಗಳಲ್ಲೂ ನೀರು ಲಭ್ಯವಾಗಲಿದೆ. ಇದರಿಂದಾಗಿ ಪ್ರತಿ ರೈತನಿಗೂ ಕೃಷಿ ಕಾರ್ಯಕ್ಕೆ ಅನುಕೂಲವಾಗಲಿದ್ದು, ಕೃಷಿಯಿಂದ ಆದಾಯವೂ ಹೆಚ್ಚಾಗಲಿದೆ ಎಂದು ತಿಳಿಸಿದರು.

    ರೈತರಿಗಾಗಿ ಶ್ರಮ: ಸಾವಿರಾರು ಅಡಿ ಆಳದ ಕೊಳವೆ ಬಾವಿ ಕೊರೆಸಿಯೂ ನೀರು ಸಿಗದೆ ನಷ್ಟದಲ್ಲಿದ್ದ ರೈತರಿಗೆ ಈ ಯೋಜನೆ ಸಹಕಾರಿಯಾಗಿದೆ. ವಲಸೆ ಹೋಗಿದ್ದ ಅದೆಷ್ಟೋ ಕುಟುಂಬಗಳು ವಾಪಸ್ ಬಂದು ಕೃಷಿ ಕಾರ್ಯದಲ್ಲಿ ತೊಡಗಿ ಉತ್ತಮವಾದ ಜೀವನ ನಡೆಸುತ್ತಿರುವುದು ನನಗೆ ಹೆಮ್ಮೆಯೆನಿಸುತ್ತಿದೆ. ಸರ್ಕಾರಿ ನೌಕರನಿಗೆ ತಿಂಗಳ ವೇತನ ಬರುವಂತೆಯೇ ರೈತನಿಗೂ ಸಹ ಪ್ರತಿ ತಿಂಗಳೂ ಆದಾಯ ಬರುವ ರೀತಿಯಲ್ಲಿ ಕೈತುಂಬ ಕೆಲಸ ಇರಬೇಕು. ಅವರಿಗೆ ವರ್ಷಂಪ್ರತಿ ಆದಾಯ ಬರುವಂತ ಯೋಜನೆ ಜಾರಿಯಾಗಬೇಕು. ಈ ಇಚ್ಛೆಯಿಂದಲೇ ನಾನು ಶ್ರಮವಹಿಸಿ ನನೆಗುದಿಗೆ ಬಿದ್ದಿದ್ದ ಹಿಪ್ಪರಗಿ ಆಣೆಕಟ್ಟು ಯೋಜನೆ, ಕರಿಮಸೂತಿ ಏತ ನೀರಾವರಿ ಯೋಜನೆ ಜಾರಿಗೊಳಿಸುವಲ್ಲಿ ಸಫಲನಾಗಿದ್ದೇನೆ ಎಂದರು.

    ತಾಲೂಕಿನ ವಿಶೇಷತೆ: ತಾಲೂಕಿನ ಎಲ್ಲ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಜಾರಿಗೆ ತರಲಾಗಿದೆ. ವಿಶ್ವಮಟ್ಟದಲ್ಲಿ ಹೆಸರು ಪಡೆದಿರುವ ಅಥಣಿಯ ಚರ್ಮೋದ್ಯಮದ ಜತೆ ಜತೆಗೇ ಬಹುತೇಕ ಜನ ನೀರಾವರಿ ಅವಲಂಬಿಸಿ ಕೃಷಿ ಕಾರ್ಯದಲ್ಲಿ ತೊಡಗಿದ್ದಾರೆ. ಇದು ನಮ್ಮ ತಾಲೂಕಿನ ವಿಶೇಷತೆಯಾಗಿದೆ ಎಂದು ಸಚಿವ ಲಕ್ಷ್ಮಣ ಸವದಿ ಸಂತಸ ವ್ಯಕ್ತಪಡಿಸಿದರು. ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರ್ ಬಿ.ಆರ್. ರಾಥೋಡ, ಕಾರ್ಯ ನಿರ್ವಾಹಕ ಅಭಿಯಂತ ಕೆ.ಕೆ. ಜಾಲಿಬೇರಿ, ಸಹಾಯಕ ಅಭಿಯಂತ ಕೆ.ರವಿ, ಎಸ್‌ಒ ಪ್ರವೀಣ ಹುಣಸಿಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts