More

    ರಾಷ್ಟ್ರೀಯ ಹೆದ್ದಾರಿ ವ್ಯವಸ್ಥಿತ ಕಾಮಗಾರಿಗೆ ಕೇಂದ್ರ ಸಚಿವರ ತಾಕೀತು

    ಚಿತ್ರದುರ್ಗ:ಜಿಲ್ಲೆಯಲ್ಲಿ ಹಾದು ಹೋಗಿರುವ ರಾ.ಹೆ.150 ಎ (ಶ್ರೀರಂಗಪಟ್ಟಣ-ಬೀದರ್) ಮಾರ್ಗದಲ್ಲಿ ಆಗಿರುವ ಅವೈಜ್ಞಾನಿಕ ಕಾಮಗಾರಿಗಳಿಗೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
    ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿದರು.
    ಕೆಲವೆಡೆ ಕಾಮಗಾರಿ ಅವೈಜ್ಞಾನಿಕವಾಗಿದ್ದರೆ, ಇನ್ನು ಕೆಲವೆಡೆ ಅನುಷ್ಠಾನಕ್ಕೆ ಕೆಲವರು ಅಡ್ಡಿ ಪಡಿಸುತ್ತಿದ್ದಾರೆ ಎಂದು ಗರಂ ಆದರು.
    ಪೊಲೀಸರು ಹಾಗೂ ಜಿಲ್ಲಾಡಳಿತ ನೆರವು ಪಡೆದು, ಕೂಡಲೇ ವ್ಯವಸ್ಥಿತವಾಗಿ ಕಾಮಗಾರಿ ಪೂರ್ಣಗೊಳಿಸುವಂತೆ ರಾ.ಹೆ. ಪ್ರಾಧಿಕಾರದ ಪಿಡಿ ಜಿ.ಗೌರವ್ ಅವರಿಗೆ ತಾಕೀತು ಮಾಡಿದರು.
    ಎಸ್‌ಪಿ ಧರ್ಮೇದರ್‌ಕುಮಾರ್‌ಮೀನಾ ಮಾತನಾಡಿ, ಹೆದ್ದಾರಿ ಮಾರ್ಗದ ಕೆಲವು ಹಳ್ಳಿಗಳಲ್ಲಿ ಜನರು ರಸ್ತೆ ದಾಟಲು ಸಾಧ್ಯವಾಗದಂತೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದೆ. ಮೇಲು ಅಥವಾ ಕೆಳ ಸೇತುವೆಗಳಿಲ್ಲದೆ, ಈ ಭಾಗದಲ್ಲಿ ಕಳೆದ ವರ್ಷ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಶೇ.20 ಹೆಚ್ಚಾಗಿದೆ. ಬಿ.ಜಿ.ಕೆರೆ, ಗಿರಿಯಮ್ಮಹಳ್ಳಿ, ಹೊಟ್ಟೆಪ್ಪನಹಳ್ಳಿ, ಪಿಳ್ಳೇಕೆರನಹಳ್ಳಿ ಮೊದಲಾದೆಡೆ ಅಪಘಾತಗಳಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
    ಜಿಲ್ಲಾಧಿಕಾರಿ ದಿವ್ಯಾಪ್ರಭು ಮಾತನಾಡಿ, ರಾಷ್ಟ್ರೀಯ ಹೆದ್ದಾರಿಗಳ ಸಮಸ್ಯೆ ಕುರಿತು ನಿತ್ಯ ದೂರುಗಳಿವೆ. ಅಲ್ಪಾವಧಿ ಟೆಂಡರ್ ಕರೆದು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದರು.
    ತಾತ್ಕಾಲಿಕವಾಗಿ ಸ್ಕೈವಾಕ್ ನಿರ್ಮಿಸಿ, 6 ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಗೌರವ್ ಭರವಸೆ ನೀಡಿದರು.
    ಪಿಎಂ ವಿಶ್ವಕರ್ಮ ಯೋಜನೆಯಡಿ ಜಿಲ್ಲೆಯಲ್ಲಿ ಅಂದಾಜು 98 ಸಾವಿರ ಜನರ ನೋಂದಣಿ ಆಗಿದ್ದು, ಅರ್ಹರಿಗೆ ಜನವರಿ ಅಂತ್ಯದೊಳಗೆ ತರಬೇತಿ ಪ್ರಾರಂಭಿಸಬೇಕೆಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
    ಗ್ರಾಮಗಳಲ್ಲಿರುವ ಬಳಕೆಯಾಗದ ವಿವಿಧ ಭವನಗಳನ್ನು ಸ್ತ್ರೀಶಕ್ತಿ ಸಂಘಗಳು ಅಥವಾ ಗ್ರಂಥಾಲಯಗಳಿಗೆ ನೀಡಬೇಕೆಂದು ಸೂಚಿಸಿದ ಸಚಿವರು, ಪ್ರಧಾನ ಮಂತ್ರಿ ಆದರ್ಶ ಗ್ರಾಮಗಳಲ್ಲಿ ನರೇಗಾದಡಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕಿತ್ತು. ಆದರೆ, ಈ ಕೆಲಸ ಆಗಿಲ್ಲವೆಂದು ಅಸಮಾಧಾನ ವ್ಯಕ್ತ ಪಡಿಸಿದರು.
    ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಡಿ ಸಮಾಜ ಕಲ್ಯಾಣ ಇಲಾಖೆಯಿಂದ 97 ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆಯ್ಕೆಯಾಗಿರುವ 34 ಗ್ರಾಮಗಳ ತ್ವರಿತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಬೇಕೆಂದು ಸಚಿವರು ಸೂಚಿಸಿದರು.
    ಜೆಜೆಎಂ, ಅಮೃತ ಸರೋವರ, ಶಾಲಾ ಕೊಠಡಿಗಳ ನಿರ್ಮಾಣ, ಹಕ್ಕುಪತ್ರ ವಿತರಣೆ ಮತ್ತಿತರ ವಿಷಯಗಳ ಕುರಿತು ಚರ್ಚಿಸಲಾಯಿತು.
    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಯೋಜನಾ ನಿರ್ದೇಶಕ ಡಾ.ರಂಗಸ್ವಾಮಿ ಇದ್ದರು.

    3 ಲಕ್ಷ ಎಬಿಎಆರ್‌ಕೆ ಕಾರ್ಡ್ ವಿತರಣೆಗೆ ಗುರಿ
    ಆಯುಷ್ಮಾನ್‌ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ರಾಜ್ಯ ಸರ್ಕಾರ 3 ತಿಂಗಳಲ್ಲಿ ಜಿಲ್ಲೆಯಲ್ಲಿ 1.5 ಲಕ್ಷ ಕಾರ್ಡ್ ವಿತರಣೆ ಗುರಿ ನೀಡಿದೆ. ಕಾರ್ಡ್ ವಿತರಣೆಗೆ ಜಿಲ್ಲೆಯಲ್ಲಿ ಅಭಿಯಾನ ನಡೆಸಲಾಗುವುದು ಎಂದು ಡಿಸಿ ತಿಳಿಸಿದರು. ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಯೋಜನೆ ಸಂಬಂಧಿಸಿದಂತೆ ಈ ತಿಂಗಳ ಅಂತ್ಯದೊಳಗೆ ಶೇ.90 ಭೂಸ್ವಾಧೀನ ಕಾರ್ಯ ಪೂರ್ಣಗೊಳಿಸಿ, ಟೆಂಡರ್ ಪ್ರಕ್ರಿಯೆ ಪ್ರಾರಂಭಿಸಲು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts