More

    ರಾಮನ ಜತೆಗೆ ಶಿವನ ಮಂದಿರ ನಿರ್ವಿುಸಿ

    ಹುಬ್ಬಳ್ಳಿ: ಅಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲೇ ಉತ್ಖನನದ ವೇಳೆ ದೊರೆತಿರುವ ಪ್ರಾಚೀನ ಶಿವಲಿಂಗವನ್ನು ಅದೇ ಜಾಗದಲ್ಲಿ ಶಿವ ದೇವಾಲಯ ನಿರ್ವಿುಸಿ ಪ್ರತಿಷ್ಠಾಪಿಸಬೇಕು. ಶ್ರೀರಾಮ ಮಂದಿರ ನಿರ್ವಣದ ಜತೆಗೆ ಏಕಕಾಲದಲ್ಲಿ ಈ ಕಾರ್ಯವೂ ಕೈಗೂಡಿದರೆ ಇಡೀ ರಾಷ್ಟ್ರದ ಜನತೆಗೆ ಸಂತೋಷ ಹಾಗೂ ಹೆಮ್ಮೆ ಉಂಟಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

    ನಗರದಲ್ಲಿ ಮಂಗಳವಾರ ‘ವಿಜಯವಾಣಿ’ ಜತೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವನ್ನು ಒಮ್ಮನಸ್ಸಿನಿಂದ ಹಮ್ಮಿಕೊಂಡಿರುವುದು ಸಂತೋಷ ತಂದಿದೆ. ರಾಮ ಮಂದಿರ ನಿರ್ವಣಕ್ಕಾಗಿ ರಂಭಾಪುರಿ ಪೀಠದಿಂದಲೂ ದೇಣಿಗೆ ಕೊಟ್ಟಿದ್ದೇವೆ. ರಾಮ ಮಂದಿರ ಎಂದೋ ನಿರ್ಮಾಣ ಆಗಬೇಕಿತ್ತು. ತಡವಾದರೂ ಚಿಂತೆ ಇಲ್ಲ, ಎಲ್ಲ ವಾದ- ವಿವಾದಗಳು ಪರಿಹಾರವಾಗಿವೆ ಎಂದರು.

    ಎಲ್ಲದಕ್ಕೂ ಶಿವನೇ ಮೂಲ ಎಂಬ ನಂಬಿಕೆ ಭಾರತೀಯರಲ್ಲಿದೆ. ಶಿವಾಲಯ ನಿರ್ವಣವಾದರೆ ಶಿವನ ಪಾರಮ್ಯ ಈ ನಾಡಿಗೆ, ರಾಷ್ಟ್ರಕ್ಕೆ ಇನ್ನೂ ಹೆಚ್ಚು ಮನವರಿಕೆ ಆಗಲು ಸಾಧ್ಯ. ಹಾಗಾಗಿ, ರಾಮ ಮಂದಿರದ ಜತೆಯಲ್ಲಿ ಶಿವ ದೇವಾಲಯ ಕೂಡ ನಿರ್ಮಾಣ ಮಾಡಿದರೆ ಬಹಳ ಒಳ್ಳೆಯ ಕಾರ್ಯವಾಗಲಿದೆ ಎಂಬುದು ನಮ್ಮ ಆಶಯ ಎಂದರು. ಈಗಾಗಲೇ ಅಯೋಧ್ಯೆ ಸಮಿತಿಯವರಿಗೂ ಈ ಕುರಿತು ಲಿಖಿತವಾಗಿ ಮನವಿ ಕೂಡ ಕಳಿಸಿದ್ದೇವೆ. ಒಟ್ಟಾರೆ ಎಲ್ಲರ ಅಪೇಕ್ಷೆ ಕೂಡ ಇದೇ ಆಗಿದೆ. ಎಲ್ಲರೂ ಸಾಮರಸ್ಯ, ಸದ್ಭಾವನೆಯಿಂದ ಬೆಳೆಯಬೇಕು. ಸುಭಿಕ್ಷವಾಗಿ ಬಾಳಿ ಬದುಕಲು, ಆರೋಗ್ಯಯುತ ಸಮಾಜ ನಿರ್ವಣವಾಗಲು ಎಲ್ಲರ ಸಹಕಾರ ಕೂಡ ಬಹಳ ಮುಖ್ಯ ಎಂದು ಭಾವಿಸಿದ್ದೇವೆ ಎಂದು ರಂಭಾಪುರಿ ಜಗದ್ಗುರುಗಳು ಹೇಳಿದರು.

    ರೇಣುಕಾಚಾರ್ಯ ಯುಗಮಾನೋತ್ಸವ: ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಮತ್ತು ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ಮಾರ್ಚ್ 21ರಿಂದ 30ರವರೆಗೆ ಧಾರ್ವಿುಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಶ್ರೀ ರಂಭಾಪುರಿ ಜಗದ್ಗುರುಗಳು ತಿಳಿಸಿದರು.

    ಈ ಸಂದರ್ಭದಲ್ಲಿ ಮೂರು ಅಮೂಲ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಜಗದ್ಗುರು ರೇಣುಕಾಚಾರ್ಯ ಕೈಗಾರಿಕಾ ಕೇಂದ್ರದ ನೂತನ ಕಟ್ಟಡ ಹಾಗೂ ಭಕ್ತರಿಗಾಗಿ ಶಿವಾಚಾರ್ಯ ಯಾತ್ರಿ ನಿವಾಸ ಕಟ್ಟಡ ಉದ್ಘಾಟನೆ ಮತ್ತು ಬೃಹತ್ ಶಿವ ಸಮ್ಮೇಳನ ಆಯೋಜಿಸಲಾಗಿದೆ. ಅಮೂಲ್ಯ ಧಾರ್ವಿುಕ, ಸಾಮಾಜಿಕ ಚಿಂತನಗಳನ್ನು ಒಳಗೊಂಡ ಕೃತಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು.

    ಡಾ. ಬಲ್ಲಾಳಗೆ ಪ್ರಶಸ್ತಿ : ಪ್ರತಿ ವರ್ಷದಂತೆ ಶ್ರೀಜಗದ್ಗುರು ರೇಣುಕಾಚಾರ್ಯ ಅತ್ಯುನ್ನತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಈ ವರ್ಷ (2021) ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ಸಮೂಹ ಸಂಸ್ಥೆಯ ಅಧ್ಯಕ್ಷ ಡಾ. ಸುದರ್ಶನ ಬಲ್ಲಾಳ ಅವರಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಕರೊನಾ ಸಂಕ್ರಮಣ ಸಂದರ್ಭದಲ್ಲಿ ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದನ್ನು ಗಮನಿಸಿ ಈ ಗೌರವ ನೀಡಲಾಗುತ್ತಿದೆ ಎಂದು ಜಗದ್ಗುರುಗಳು ತಿಳಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ, ಸಣ್ಣ ಕೈಗಾರಿಕೆ, ವಾರ್ತಾ ಸಚಿವ ಸಿ.ಸಿ. ಪಾಟೀಲ, ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ, ಶಾಸಕ ಪಿ.ಡಿ. ರಾಜೇಗೌಡ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಲಕ್ಷಾಂತರ ಭಕ್ತರು ಪಾಲ್ಗೊಳ್ಳಲಿದ್ದು, ಅವರಿಗೆ ದಾಸೋಹ, ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಒಟ್ಟಾರೆ ಎಲ್ಲ ಸಮುದಾಯದ ಜನರಿಗೆ ಒಳ್ಳೆಯದಾಗಬೇಕೆಂಬ ಸದುದ್ದೇಶದಿಂದ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts