More

    ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಸ್ಕರ ಭಾಜನ

    ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ ಭಾಸ್ಕರ ನಾಯ್ಕ ಅವರು ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಮೂಲತಃ ಕುಮಟಾ ತಾಲೂಕಿನ ಅಘನಾಶಿನಿಯವರಾದ ಭಾಸ್ಕರ ನಾಯ್ಕ, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮದೇ ಆದ ಶೈಲಿಯ ಮೂಲಕ ತೊಡಗಿಸಿಕೊಂಡು ಮಕ್ಕಳ, ಪಾಲಕರ ನೆಚ್ಚಿನ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ. 1989ರಲ್ಲಿ ವಿಜಯಪುರದ ರಾಜನಾಳ ತಾಂಡಾ ಶಾಲೆಯಲ್ಲಿ ತಮ್ಮ ಸೇವೆ ಪ್ರಾರಂಭಿಸಿದ ಅವರು, ಮುಂಡಗೋಡ ತಾಲೂಕಿನ ಕೋಡಂಬಿ, ಯಲ್ಲಾಪುರ ತಾಲೂಕಿನ ಅಲ್ಕೇರಿ ಗೌಳಿವಾಡ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಕಳೆದ 9 ವರ್ಷಗಳಿಂದ ನಂದೊಳ್ಳಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ.

    ಶಿಕ್ಷಕರಾಗಿ ಪಠ್ಯಕ್ಕೆ ಸೀಮಿತರಾಗದೆ, ತಾನೊಬ್ಬ ಶಿಕ್ಷಕನೆಂಬ ಯಾವ ದೊಡ್ಡಸ್ತಿಕೆಯಿಲ್ಲದೆ ಶಾಲೆಯ ಶೌಚಗೃಹ ಸ್ವಚ್ಛತೆ ಮಾಡುವುದು, ಗೋಡೆಗೆ ಬಣ್ಣ ಬಳಿಯುವುದು, ಕಸ ಗುಡಿಸುವುದು, ಊಟ ಬಡಿಸುವುದು ಮೊದಲಾದ ಕಾರ್ಯಕ್ಕೂ ಹಿಂದೇಟು ಹಾಕಿದವರಲ್ಲ. ಉತ್ತಮ ಶಿಕ್ಷಕರಲ್ಲದೆ, ಒಬ್ಬ ನೃತ್ಯಗಾರ, ಹಾಡುಗಾರ, ವಾಗ್ಮಿ, ಕ್ರೀಡಾಪಟುವಾಗಿ ಎಲ್ಲದಕ್ಕೂ ಸೈ ಎಂದವರು ಭಾಸ್ಕರ ನಾಯ್ಕ. ಇವೆಲ್ಲವುಗಳನ್ನು ಕಲಿಸುತ್ತ ಶಿಕ್ಷಕರಾಗಿ, ಪಾಲಕರಾಗಿ, ಸ್ನೇಹಿತರಾಗಿ ಮಕ್ಕಳೊಂದಿಗೆ ಬೆರೆಯುತ್ತಾರೆ.

    ಭಾಸ್ಕರ ನಾಯ್ಕ ಅವರು ಪರಿಸರ ಪ್ರೇಮಿ. ತಮ್ಮಲ್ಲಿರುವ ಪರಿಸರ ಕಾಳಜಿಯನ್ನು ಮಕ್ಕಳಲ್ಲೂ ಬೆಳೆಸುವಲ್ಲಿ ಶ್ರಮಿಸುತ್ತಾರೆ. ಶಾಲೆಯ ಸುತ್ತ ಉದ್ಯಾನ ನಿರ್ವಣ, ಔಷಧ ಸಸ್ಯಗಳನ್ನು ಬೆಳೆಸುವುದು, ಕಿಚನ್ ಗಾರ್ಡನ್ ಮೂಲಕ ತರಕಾರಿ ಬೆಳೆಯುವುದು… ಹೀಗೆ ಹಲವು ರೀತಿಯಲ್ಲಿ ಮಕ್ಕಳಿಗೆ ಪರಿಸರದ ಮಹತ್ವ ತಿಳಿಸಿಕೊಡುತ್ತಾರೆ. ವಿದ್ಯಾರ್ಥಿಗಳು ಜನ್ಮ ದಿನದಂದು ಶಾಲಾ ಆವಾರದಲ್ಲಿ ತಮ್ಮ ಪಾಲಕರೊಂದಿಗೆ ಬಂದು ಸಸಿ ನೆಡುವ ಹೊಸ ಹಸಿರು ಅಭಿಯಾನವೊಂದನ್ನು ಕಳೆದ ವರ್ಷ ಭಾಸ್ಕರ ಆರಂಭಿಸಿದ್ದಾರೆ. ಈವರೆಗೆ 20ಕ್ಕೂ ಹೆಚ್ಚು ಮಕ್ಕಳು ಜನ್ಮದಿನದಂದು ಸಸಿ ನೆಟ್ಟಿದ್ದಾರೆ. ಇವರ ಪರಿಸರ ಕಾಳಜಿಯಿಂದಾಗಿ ಎರಡು ವರ್ಷಗಳ ಹಿಂದೆ ನಂದೊಳ್ಳಿ ಶಾಲೆಗೆ ಪರಿಸರ ಶಾಲೆ ಪ್ರಶಸ್ತಿಯೂ ಬಂದಿರುವುದು ವಿಶೇಷ.

    ಭಾಸ್ಕರ ಅವರು ನಲಿಕಲಿ ವಿಭಾಗದ ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ 5 ವರ್ಷ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಜನಮೆಚ್ಚಿದ ಶಿಕ್ಷಕ, ತಾಲೂಕು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಸೇರಿ ಹಲವು ಪುರಸ್ಕಾರ, ಸನ್ಮಾನಗಳು ದೊರೆತಿವೆ.

    ಪ್ರಶಸ್ತಿಯು ಸಂತಸದ ಜತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ನನ್ನ ಎಲ್ಲ ವಿದ್ಯಾರ್ಥಿಗಳು, ಪಾಲಕರು, ಸಹೋದ್ಯೋಗಿ ಶಿಕ್ಷಕರ ಸಹಕಾರ, ಪ್ರೀತಿಯಿಂದ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಾರ್ಗದರ್ಶನದಿಂದ ಉತ್ತಮ ಕಾರ್ಯನಿರ್ವಹಣೆಗೆ ಪ್ರೇರಣೆ ದೊರೆತಿದೆ. ಅವರ ಹಾರೈಕೆಯ ಫಲವಾಗಿ ಈ ಪ್ರಶಸ್ತಿ ಬಂದಿದೆ. | ಭಾಸ್ಕರ ನಾಯ್ಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts