More

    ರಾಜ್ಯದ ಚುನಾವಣೆಗೆ ವಿನೂತನ ತಂತ್ರಗಾರಿಕೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಮುಂಬರುವ ವಿಧಾನಸಭೆ ಚುನಾವಣೆಯನ್ನು ರಾಜ್ಯದಲ್ಲಿ ವಿನೂತನ ತಂತ್ರಗಾರಿಕೆ ಮೂಲಕ ಬಿಜೆಪಿ ಎದುರಿಸಲಿದೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿದರು.

    ನಗರದ ಗೋಕುಲ ರಸ್ತೆಯ ಅಕ್ಷಯ ಪಾರ್ಕ್​ನ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ರಾಜ್ಯದಲ್ಲಿ ಗುಜರಾತ ಮಾದರಿ ತಂತ್ರಗಾರಿಕೆ ಎಂಬುದಿಲ್ಲ. ಆಯಾ ರಾಜ್ಯಗಳು ತನ್ನದೇ ಮಾದರಿಯಲ್ಲಿ ಚುನಾವಣೆ ಎದುರಿಸಿವೆ. ಅದರಂತೆ ನಮ್ಮ ರಾಜ್ಯದಲ್ಲಿ ಹೊಸ ರೀತಿಯಲ್ಲಿ ಚುನಾವಣೆ ಎದುರಿಸಲಿದ್ದೇವೆ ಎಂದರು.

    ಪಕ್ಷದ ಹಿರಿಯ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎಂಬುದು ಸುಳ್ಳು. ಯಾವುದೇ ಚುನಾವಣೆ ತಂತ್ರಗಾರಿಕೆ ಸಭೆಗಳು ನಡೆದಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಸಂಘಟನೆ ಮಾಡಲಾಗುತ್ತಿದೆ ಎಂದು ಹೇಳಿದರು.

    ಆಪರೇಷನ್ ಹಸ್ತ ನಡೆಯುತ್ತಿದೆ ಎಂಬುದು ಸುಳ್ಳು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರ ಕನಕಪುರ ಕ್ಷೇತ್ರದಿಂದಲೂ ಕಾಂಗ್ರೆಸ್​ನವರು ಬಿಜೆಪಿ ಸೇರ್ಪಡೆಯಾಗತ್ತಾರೆ ಎಂದರೆ ನಂಬಲು ಸಾಧ್ಯವೇ? ಇವೆಲ್ಲವೂ ಊಹಾಪೋಹ ಎಂದರು.

    ಈಗಾಗಲೇ ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಸಮಾಧಿಯಾಗಿದೆ. ರಾಜ್ಯದಲ್ಲಿ ಐಸಿಯುನಲ್ಲಿರುವ ಕಾಂಗ್ರೆಸ್ ಅನ್ನು ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯ ಅವರೇ ಮುಗಿಸುತ್ತಾರೆ ಎಂದು ಕಿಡಿಕಾರಿದರು.

    ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಯನ್ನು ಜನರ ಮುಂದೆ ತೆಗೆದುಕೊಂಡು ಹೋಗಲು ವಿಜಯ ಸಂಕಲ್ಪ ಅಭಿಯಾನವನ್ನು ಜ. 29ರವರೆಗೆ ಆಯೋಜಿಸಲಾಗಿದೆ. ವಿಜಯಪುರ ಜಿಲ್ಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿಜಯ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡುತ್ತಾರೆ. ಅದರಂತೆ ಆಯಾ ಜಿಲ್ಲೆಗಳಲ್ಲಿ ಪಕ್ಷದ ನಾಯಕರು ಚಾಲನೆ ಕೊಡಲಿದ್ದಾರೆ. ಈ ಮೂಲಕ ಕಾರ್ಯಕರ್ತರ ಸಂಘಟನೆಗೆ ಒತ್ತು ಕೊಡಲಾಗುತ್ತಿದೆ. ಮನೆ ಮನೆಗೆ ಕರಪತ್ರ ಹಂಚುವುದು, ಗೋಡೆ ಬರಹ ಬರೆಯುವುದು ಅಭಿಯಾನದ ಭಾಗವಾಗಿದೆ ಎಂದು ತಿಳಿಸಿದರು.

    ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ, ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ, ಹು-ಧಾ ಸೆಂಟ್ರಲ್ ಕ್ಷೇತ್ರದ ಅಧ್ಯಕ್ಷ ಸಂತೋಷ ಚವ್ಹಾಣ, ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ವೀರೇಶ ಸಂಗಳದ, ಅಭಿಯಾನದ ಜಿಲ್ಲಾ ಸಂಚಾಲಕರಾದ ವಿಜಯಾನಂದ ಶೆಟ್ಟಿ, ಈಶ್ವರಗೌಡ ಪಾಟೀಲ, ವಕ್ತಾರ ರವಿ ನಾಯಕ, ಪ್ರಮುಖರಾದ ಕೃಷ್ಣ ಗಂಡಗಾಳೇಕರ, ಉಮೇಶ ದುಶಿ, ಪಾಲಿಕೆ ಸದಸ್ಯರಾದ ರೂಪಾ ಶೆಟ್ಟಿ, ಭಾರತಿ ಟಪಾಲ, ಮಾಜಿ ಸದಸ್ಯ ಮಹೇಶ ಬುರ್ಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts