More

    ರಾಜಧಾನಿಗೆ ಬಂದಿಳಿದ ಜೆರೋಮ್ ಸಿಕ್ವೇರಾ, ಸಿಸ್ಟರ್ ತೆರೆಸಾ ಕ್ರಾಸ್ತಾ

    ಮಂಗಳೂರು: ತಾಲಿಬಾನ್ ಆಕ್ರಮಿತ ಕಾಬುಲ್‌ನಲ್ಲಿ ಒಂದು ವಾರದಿಂದ ಅತಂತ್ರ ಸ್ಥಿತಿಯಲ್ಲಿದ್ದ ಮಂಗಳೂರಿನ ಇಬ್ಬರು ಸುರಕ್ಷಿತವಾಗಿ ಏರ್‌ಲಿಫ್ಟ್ ಆಗಿ ಮಂಗಳವಾರ ನವದೆಹಲಿ ತಲುಪಿದ್ದಾರೆ. ಇದೇ ವೇಳೆ ಅಫ್ಘನ್‌ನಿಂದ ಕತಾರ್‌ಗೆ ಏರ್‌ಲಿಫ್ಟ್ ಆಗಿದ್ದ ಉಳ್ಳಾಲದ ಯುವಕ ಮನೆ ತಲುಪಿದ್ದಾರೆ.

    ಬಂಟ್ವಾಳ ಸಿದ್ದಕಟ್ಟೆಯ ಜೆರೋಮ್ ಸಿಕ್ವೇರಾ ಮತ್ತು ಮಂಗಳೂರು ಚಾರಿಟಿಯ ಸಿಸ್ಟರ್ ತೆರೆಸಾ ಕ್ರಾಸ್ತಾ ನವದೆಹಲಿ ತಲುಪಿದ್ದು, ಒಂದೆರಡು ದಿನದಲ್ಲಿ ತವರಿಗೆ ವಾಪಸಾಗಲಿದ್ದಾರೆ. ಉಳ್ಳಾಲದ ಡೆಮ್ಸಿಲ್ ಮೊಂತೆರೋ ವಾರದ ಹಿಂದೆ ಏರ್‌ಲಿಫ್ಟ್ ಆಗಿ ಕತಾರ್‌ನಲ್ಲಿ ಇದ್ದರು. ಅಲ್ಲಿಂದ ಮಂಗಳವಾರ ತವರು ಸೇರಿದ್ದಾರೆ.

    ಜೋಧ್‌ಪುರ್ ಕ್ರೈಸ್ತ ಸಂಸ್ಥೆಯಿಂದ ಬೋಧಕರಾಗಿ ಜೆರೋಮ್ ಸಿಕ್ವೇರಾ ಹಾಗೂ ಮಂಗಳೂರು ಚಾರಿಟಿಯಿಂದ ಇಟಲಿ ಏಜೆನ್ಸಿ ಮೂಲಕ ತೆರೆಸಾ ಕ್ರಾಸ್ತಾ ಅಫ್ಘನ್‌ಗೆ ತೆರಳಿದ್ದರು. ತಾಲಿಬಾನ್ ಆಕ್ರಮಣ ಮೇರೆ ಮೀರಿದಾಗ ಇವರು ವಾರದ ಹಿಂದೆ ಏರ್‌ಲಿಫ್ಟ್‌ಗೆ ಕಾಬುಲ್‌ಗೆ ಆಗಮಿಸಿದ್ದರು. ಆದರೆ ತಾಲಿಬಾನ್ ಅಟ್ಟಹಾಸದಿಂದಾಗಿ ಭಾರತಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಕೊನೆಗೆ ಕಾಬುಲ್ ನಿಲ್ದಾಣ ಸಮೀಪ ಇವರಿಬ್ಬರು ಪ್ರತ್ಯೇಕ ಆಶ್ರಯದಲ್ಲಿದ್ದರು. ಎರಡು ದಿನ ಹಿಂದೆ ಇವರನ್ನು ನ್ಯಾಟೋ ಸೇನೆ ಕಜಕಿಸ್ತಾನಕ್ಕೆ ಏರ್‌ಲಿಫ್ಟ್ ಮಾಡಿತ್ತು. ಅಲ್ಲಿಂದ ಭಾರತೀಯ ವಾಯುಸೇನೆ ಏರ್‌ಲಿಫ್ಟ್ ಮಾಡಿದ್ದು, ಈಗ ನವದೆಹಲಿ ತಲುಪಿದ್ದಾರೆ.

    ಫಾ.ಜೆರೋಮ್ ಸಿಕ್ವೇರಾ ಅವರು ಅಫ್ಘನ್‌ನಿಂದ ಜೋಧ್‌ಪುರಕ್ಕೆ, ಸಿಸ್ಟರ್ ತೆರೆಸಾ ಕ್ರಾಸ್ತಾ ಇಟಲಿ ಚಾರಿಟಿಗೆ ತೆರಳುವವರಿದ್ದರು. ಇಟಲಿಗೆ ತೆರಳುವುದಾಗಿ ತೆರೆಸಾ ಕ್ರಾಸ್ತಾ ಅವರು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಕಾಬುಲ್ ಏರ್‌ಪೋರ್ಟನ್ನೇ ತಾಲಿಬಾನಿಗಳು ವಶಪಡಿಸುವ ಸನ್ನಾಹದಲ್ಲಿದ್ದಾರೆ. ಇಂತಹ ಗಂಭೀರ ಪರಿಸ್ಥಿತಿಯಲ್ಲಿ ಕಜಕಿಸ್ತಾನಕ್ಕೆ ಏರ್‌ಲಿಫ್ಟ್‌ಗೆ ಅವಕಾಶ ಲಭಿಸಿತ್ತು. ಅದೇ ಅವಕಾಶ ಬಳಸಿಕೊಂಡು ಇವರಿಬ್ಬರು ಕಜಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ್ದಾರೆ. ಒಂದೆರಡು ದಿನಗಳಲ್ಲಿ ಮಂಗಳೂರಿಗೆ ಆಗಮಿಸಲಿದ್ದಾರೆ.

    ಮೊಂತೆರೋ ಮನೆಯಲ್ಲಿ ಸಂಭ್ರಮ
    ಮಕ್ಕಳ ಪುನರಾಗಮನದಿಂದ ಪಾಲಕರು ಖುಷ್: ಉಳ್ಳಾಲ: ಅಫ್ಘಾನಿಸ್ತಾನದಲ್ಲಿದ್ದ ಉಳಿಯ ನಿವಾಸಿ ಡೆಮ್ಸಿಲ್ ಮೊಂತೆರೋ ಮಂಗಳವಾರ ಮಧ್ಯಾಹ್ನ ಮನೆಗೆ ಬಂದಿದ್ದಾರೆ. ಈ ಮೂಲಕ ವಲೇರಿಯನ್ ಅವರ ಇಬ್ಬರು ಪುತ್ರರೂ ಮನೆ ಸೇರಿದಂತಾಗಿದ್ದು, ಕುಟುಂಬದಲ್ಲಿ ಸಂತಸ ಮನೆಮಾಡಿದೆ.

    ಕಾಬುಲ್‌ನಲ್ಲಿದ್ದ ಸಹೋದರ ಮೆಲ್ವಿನ್ ಮೊಂತೆರೋ ಮೂಲಕ ಡೆಮ್ಸಿಲ್ ಐದು ವರ್ಷಗಳ ಹಿಂದೆ ಅಫ್ಘನ್‌ಗೆ ತೆರಳಿದ್ದರು. ಕಾಬುಲ್‌ನ ಮಿಲಿಟರಿ ಬೇಸ್‌ನಲ್ಲಿ ಇಕೊಲೊಗ್ ಅಂತಾರಾಷ್ಟ್ರೀಯ ಕಂಪನಿಯಲ್ಲಿ ಎ.ಸಿ.ಮೆಕ್ಯಾನಿಕ್ ಆಗಿದ್ದ ಅವರನ್ನು ಆ.18ರಂದು ನ್ಯಾಟೋ ಪಡೆ ಕಾಬುಲ್‌ನಿಂದ ಏರ್‌ಲಿಫ್ಟ್ ಮಾಡಿತ್ತು. ಅದಕ್ಕೂ ಮೊದಲು ಅವರಿದ್ದ ಕಂಪನಿಯ ಸಮೀಪದಲ್ಲೇ ಇದ್ದ ಸಹೋದರ ಮೆಲ್ವಿನ್ ಅವರೊಂದಿಗೆ ಸಂಪರ್ಕದಲ್ಲಿದ್ದರೂ, ಭಾರತೀಯ ವಾಯುಪಡೆ 17ರಂದು ಮೆಲ್ವಿನ್‌ರನ್ನು ಏರ್ ಲಿಫ್ಟ್ ಮಾಡಿತ್ತು. ನಂತರ ಸಹೋದರರು ಸಂಪರ್ಕದಲ್ಲಿರಲಿಲ್ಲ.

    ಡೆಮ್ಸಿಲ್ ಅವರನ್ನು ಏರ್‌ಲಿಫ್ಟ್ ಮಾಡಿದ್ದು ವಿಮಾನ ನಿಲ್ದಾಣದಲ್ಲಿ. ಅಲ್ಲಿ 155 ಮಂದಿ ಭಾರತೀಯರೊಂದಿಗೆ ವಿಮಾನದ ಒಳಗಡೆಯೇ ರಾತ್ರಿ ಕಳೆಯುವಂತಾಗಿತ್ತು. 19ರಂದು ಬೆಳಗ್ಗೆ ಇವರನ್ನು ಮತ್ತೆ ಏರ್‌ಲಿಫ್ಟ್ ಮೂಲಕ ಕತಾರ್‌ಗೆ ಕರೆದೊಯ್ಯಲಾಗಿತ್ತು. ನಾಲ್ಕು ದಿನ ಕತಾರ್‌ನಲ್ಲೇ ಉಳಿದು, ಅಲ್ಲಿನ ಭಾರತೀಯ ರಾಯಭಾರ ಕಚೇರಿ ನೆರವಿನಿಂದ ಶನಿವಾರ ರಾತ್ರಿ ವಾಯುಪಡೆ ವಿಮಾನದಲ್ಲಿ ದೆಹಲಿಗೆ ಕರೆತರಲಾಗಿತ್ತು. ಅಲ್ಲಿಂದ ಸೋಮವಾರ ರಾತ್ರಿಯೇ ಮುಂಬೈ ತಲುಪಿದ್ದರು. ಮಂಗಳವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು, ಬಳಿಕ ಮನೆಗೆ ತಲುಪಿದ್ದಾರೆ.

    ನಾವು ಮಿಲಿಟರಿ ಬೇಸ್‌ನಲ್ಲಿ ಕೆಲಸಕ್ಕೆ ಇದ್ದ ಕಾರಣ ನಮಗೇನೂ ತೊಂದರೆ ಆಗಿಲ್ಲ. ಆದರೆ ಅಲ್ಲಿನ ಪರಿಸ್ಥಿತಿಯನ್ನು ಸುದ್ದಿವಾಹಿನಿಗಳ ಮೂಲಕ ತಿಳಿದುಕೊಳ್ಳುತ್ತಿದ್ದೆವು. ಎರಡು ದಿನ ವಿಮಾನಕ್ಕಾಗಿ ಕಾದೆವು. ಆ ಸಂದರ್ಭ ನಮ್ಮನ್ನು ಅಲ್ಲಿಂದ ಕಳುಹಿಸಿಕೊಡಲು ಕಂಪನಿಯವರು ಒಪ್ಪಿಗೆ ನೀಡದೆ ಆ.24ರವರೆಗೆ ನಿಲ್ಲಬೇಕೆಂದು ಸೂಚಿಸಿದ್ದು ಆತಂಕಕ್ಕೆ ಕಾರಣವಾಗಿತ್ತು. ಕೊನೆಗೆ ತಮ್ಮ ನಿಲುವು ಬದಲಿಸಿ ಎರಡು ವಿಮಾನದಲ್ಲಿ ಏರ್‌ಲಿಫ್ಟ್ ಮಾಡಿ ಕತಾರ್‌ಗೆ ಕೊಂಡೊಯ್ದರು.

    ಡೆಮ್ಸಿಲ್ ಮೊಂತೆರೋ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts