More

    ರಾಜಕೀಯಕ್ಕೆ ನೀರಾವರಿ ಬಳಕೆ ಸಲ್ಲದು

    ಚಿತ್ರದುರ್ಗ: ಎಲ್ಲ ಪಕ್ಷಗಳ, ಸರ್ವರ ಶ್ರಮದಿಂದಾಗಿ ಭರಮಸಾಗರ ಏತ ನೀರಾವರಿ ಯೋಜನೆ ಅನುಷ್ಠಾನವಾಗಿದ್ದು, ಯಾರೂ ರಾಜಕೀಯಗೊಳಿಸಬಾರದು ಎಂದು ತರಳಬಾಳು ಬೃಹನ್ಮಠದ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಯೋಜನೆ ವ್ಯಾಪ್ತಿಯ ತಾಲೂಕಿನ ಮುದ್ದಾಪುರ, ಯಳಗೋಡು ಕೆರೆಗಳನ್ನು ಭಾನುವಾರ ವೀಕ್ಷಿಸಿದ ನಂತರ ನಡೆದ ಅಚ್ಚುಕಟ್ಟುದಾರರ ಸಭೆಯಲ್ಲಿ ಮಾತನಾಡಿ, ಇದರ ಅನುಷ್ಠಾನದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಮೂವರ ಪಾತ್ರ ಇದೆ. ಎಲ್ಲ ಪಕ್ಷದವರೂ ಸಹಕರಿಸಿದ್ದರಿಂದ ನೀರು ಬಂದಿದೆ ಎಂದು ಸ್ಮರಿಸಿದರು.

    ಮುದ್ದಾಪುರ ಕೆರೆಯಲ್ಲಿ ಶವರ್ ಬಾತ್ ಮಾದರಿಯಲ್ಲಿ ಧುಮ್ಮಿಕ್ಕಿ ನೀರು ಹರಿಯುವುದನ್ನು ನೋಡಿ ಸ್ನಾನ ಮಾಡಬೇಕು ಅನಿಸುತ್ತಿದೆ. ಭರಮಣ್ಣನಾಯಕ ಕೆರೆಗಳನ್ನು ನಿರ್ಮಿಸದಿದ್ದರೆ ಯೋಜನೆಯಡಿ ನೀರು ತರಲು ಸಾಧ್ಯವಾಗುತ್ತಿರಲಿಲ್ಲ. ಆ ಪುಣ್ಯಾತ್ಮನ ಕಾರ್ಯ ಮರೆಯುವಂತಿಲ್ಲ ಎಂದರು.

    2008ರಲ್ಲಿ ಯೋಜನೆ ಕುರಿತು ಪ್ರಸ್ತಾಪಿಸಿ, 1,200 ಕೋಟಿ ರೂ. ಕರಡು ರೂಪಿಸಲಾಯಿತು. ಅಂದು ಸಚಿವರಾಗಿದ್ದ ಶಾಮನೂರು ಮಲ್ಲಿಕಾರ್ಜುನ ಬೆನ್ನು ಹತ್ತಿ ಬಜೆಟ್‌ನಲ್ಲಿ ಸೇರಿಸಿದೆವು. ದಾಖಲೆ ತರಿಸಿಕೊಂಡು ಖಾತರಿ ಮಾಡಿಕೊಂಡೆವು ಎಂದು ಹೇಳಿದರು.

    ಯೋಜನೆ ಅನುಷ್ಠಾನ ಸಂಬಂಧ ಸರ್ಕಾರದ ನಿಬಂಧನೆ ಹೆಚ್ಚು. ಒಪ್ಪಿಗೆಗಾಗಿ ಸಮಿತಿ ಮುಂದೆ ಹೋಯ್ತು. ಅಂದಿನ ಸಮಿತಿಯಲ್ಲಿದ್ದ ವೀರಪ್ಪಮೊಯ್ಲಿ ಸಿರಿಗೆರೆ ಶ್ರೀಗಳ ಕೆಲಸ ಮೊದಲು ಮಾಡಿರೆಂದು ಡಿ.ಕೆ.ಶಿವಕುಮಾರ್‌ಗೆ ಸಲಹೆ ಮಾಡಿದರು. ಪರಿಣಾಮ 1,200 ಕೋಟಿ ರೂ. ವೆಚ್ಚದ ಯೋಜನೆ ಮುಂಜೂರಾಯಿತು. ಆದರೆ, ಆ ವೇಳೆಗೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿ ಬಂದಿದ್ದರಿಂದ ನಾವು ಗೋಕಾಕ್ ಪ್ರವಾಸದಲ್ಲಿದ್ದೆವು. ಹೀಗಾಗಿ ತಡವಾಯಿತು ಎಂದರು.

    ಬಿ.ಎಸ್.ಯಡಿಯೂರಪ್ಪ ಸಿಎಂ ಆದ ನಂತರ 1,200 ಕೋಟಿ ರೂ. ವೆಚ್ಚದ ಯೋಜನೆ 250 ಕೋಟಿ ರೂ.ಗೆ ಸೀಮಿತಗೊಳಿಸಿ ಮಂಜೂರಾತಿ ನೀಡಿದ್ದರು. ಈ ವಿಷಯ ತಿಳಿದ ತಕ್ಷಣ ಅಲ್ಲಿಂದಲೇ ದೂರವಾಣಿಯಲ್ಲಿ ಈ ಹಿಂದೆ ಸಚಿವರಾಗಿದ್ದ ಮಾಧುಸ್ವಾಮಿ, ಗೋವಿಂದ ಕಾರಜೋಳ, ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಸಿ.ಸಿ.ಪಾಟೀಲ್ ಅವರನ್ನು ಸಂಪರ್ಕಿಸಿ, 1,250 ಕೋಟಿ ಮೊತ್ತದ ಯೋಜನೆಗೆ ಒಂದೇ ಕಂತಲ್ಲಿ ಮಂಜೂರಾತಿ ಬೇಕು ಎಂದು ಪಟ್ಟು ಹಿಡಿದೆವು. ಇದಕ್ಕೆ ಸ್ಪಂದಿಸಿ, ಒಂದೇ ವಾರದಲ್ಲಿ ಯಡಿಯೂರಪ್ಪ ಆದೇಶ ಹೊರಡಿಸಿದರು ಎಂದು ಸ್ವಾಮೀಜಿ ಹಳೆಯ ನೆನಪು ಮೆಲುಕು ಹಾಕಿದರು.

    ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಶ್ರೀಗಳ ಇಚ್ಚಾಶಕ್ತಿಯ ಫಲವಾಗಿ 42 ಕೆರೆಗಳಿಗೆ ನೀರು ಹರಿದು ಬಂದಿದೆ. ಮುದ್ದಾಪುರ ಕೆರೆಯ ನೀರು ನೋಡಿ ಬಾಲ್ಯ ನೆನಪಾಯಿತು ಎಂದರು.

    ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಚೌಲಿಹಳ್ಳಿ ಶಶಿಪಾಟೀಲ್, ಕೆರೆ ಪ್ರವಾಸ ಉಸ್ತುವಾರಿ ಜಿ.ಬಿ.ತೀರ್ಥಪ್ಪ, ರೈತ ಸಂಘದ ಮುದ್ದಾಪುರ ನಾಗರಾಜ್, ಹಿರೇ ಕಬ್ಬಿಗೆರೆ ನಾಗರಾಜ್, ಬಿ.ಇ.ಮಂಜುನಾಥ್, ಬೇಡರಶಿವನಕೆರೆ ಶಿವಮೂರ್ತಿ, ಚಿಕ್ಕಪ್ಪನಹಳ್ಳಿ ಷಣ್ಮುಖ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts