More

    ರಾಗಿ ಖರೀದಿ ನೋಂದಣಿಗೆ ವಿಘ್ನ : ದೊಡ್ಡಬಳ್ಳಾಪುರದಲ್ಲಿ ರೈತರ ಪ್ರತಿಭಟನೆ

    ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ


    ಜಿಲ್ಲಾದ್ಯಂತ ಗುರುವಾರ ರಾಗಿ ಖರೀದಿಗೆ ಸಂಬಂಧಪಟ್ಟಂತೆ ರೈತರ ಹೆಸರು ನೋಂದಣಿಗೆ ಚಾಲನೆ ದೊರೆತರೂ ಬಹುತೇಕ ಕಡೆಗಳಲ್ಲಿ ನೋಂದಣಿಗೆ ಆರಂಭಿಕ ವಿಘ್ನ ಎದುರಾಗಿದೆ.
    ಕೆಲವು ಕಡೆಗಳಲ್ಲಿ ಸಂಜೆ ಬಳಿಕ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಮುಂಜಾನೆಯಿಂದಲೇ ಕೇಂದ್ರಗಳತ್ತ ಧಾವಿಸಿದ್ದ ರೈತರು ಕಾದು ಸುಸ್ತಾಗಿ ಮನೆಗಳತ್ತ ಹೆಜ್ಜೆ ಹಾಕಿದರೆ, ದೊಡ್ಡಬಳ್ಳಾಪುರ ರಾಗಿ ಖರೀದಿ ಕೇಂದ್ರದಲ್ಲಿ ರೊಚ್ಚಿಗೆದ್ದ ರೈತರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದ ಪ್ರಕರಣವೂ ನಡೆದಿದೆ. ಪ್ರತಿ ಸಾಲಿನಲ್ಲಿ ಆರಂಭದ ದಿನದಂದು ಇಂಥ ಪರಿಸ್ಥಿತಿ ಎದುರಾಗುವುದು ಸಾಮಾನ್ಯವಾಗಿದ್ದು, ರೈತರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿರುವುದು ಕಂಡುಬರುತ್ತಿದೆ. ಪ್ರತಿ ರೈತರಿಂದ ಉತ್ಪಾದನೆಗೆ ಅನುಗುಣವಾಗಿ ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿ ಖರೀದಿಸಲಾಗುವುದು. ಡಿ. 15 ರಿಂದ ರಾಗಿ ಖರೀದಿಗೆ ನೋಂದಣಿ ಪ್ರಾರಂಭವಾಗಿದ್ದು, 2023 ರ ಜ.1 ರಿಂದ ಮಾ. 31 ರವರೆಗೆ ಖರೀದಿ ಪ್ರಕ್ರಿಯೆ ನಡೆಯಲಿದೆ.


    ರಸ್ತೆ ತಡೆದು ಪ್ರತಿಭಟನೆ: ಡಿ.15ರಿಂದ ರೈತರಿಂದ ರಾಗಿ ಖರೀದಿ ನೋಂದಣೆ ಆರಂಭವಾಗಬೇಕಿತ್ತು. ಆದರೆ ದೊಡ್ಡಬಳ್ಳಾಪುರದಲ್ಲಿ ನೋಡಲ್ ಅಧಿಕಾರಿಯ ವರ್ಗಾವಣೆಯಿಂದ ನೋಂದಣಿ ಮುಂದೂಡಲಾಯಿತು. ಇದರಿಂದ ರೊಚ್ಚಿಗೆದ್ದ ರೈತರು ಹೆದ್ದಾರಿಗಿಳಿದು ರಸ್ತೆ ತಡೆದು ಪ್ರತಿಭಟನೆಗೆ ಮುಂದಾದರು. ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. 2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಗೆ ಗುರುವಾರದಿಂದ ನೋಂದಣಿ ಆರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು. ನೋಂದಣಿ ಮಾಡಿಸಲು ಮುಂಜಾನೆಯೇ ನಗರದ ರೈತ ಭವನದ ಬಳಿ ರೈತರು ಆಗಮಿಸಿದ್ದರು. ತಾಲೂಕಿನ ಹಲವು ಗ್ರಾಮಗಳಿಂದ ಬಂದಿದ್ದ ರೈತರು ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಆಗ್ರಹಿಸಿದರು. ಆದರೆ ನೋಂದಣಿ ಪ್ರಕ್ರಿಯೆ ನಡೆಯಲಿಲ್ಲ. ಇದರಿಂದ ರೊಚ್ಚಿಗೆದ್ದ 200ಕ್ಕೂ ಹೆಚ್ಚು ರೈತರು ರಸ್ತೆಯಲ್ಲಿ ನಿಂತು ಪ್ರತಿಭಟನೆ ಮಾಡಿದರು. ಒಂದು ಕಿಮೀವರೆಗೆ ವಾಹನ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಅಧಿಕಾರಿಗಳು ನಾಳೆಯಿಂದ ನೋಂದಣಿ ಪ್ರಾರಂಭಿಸುವ ಭರವಸೆ ನೀಡಿ ರೈತರ ಮನವೊಲಿಸಿದರು.

    ಅಧಿಕಾರಿಗಳ ಸಂಪರ್ಕ ಮಾಹಿತಿ: 2022-23ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರಿಂದ ರಾಗಿ ಖರೀದಿಸಲು ಏಜೆನ್ಸಿಯಾಗಿ ನೇಮಕವಾಗಿರುವ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (ಕೆಎಫ್‌ಸಿಎಸ್‌ಸಿ ಬೆಂಗಳೂರು (ದಕ್ಷಿಣ) ನೋಂದಣಿ ಪ್ರಾರಂಭಿಸಿದೆ. ನೋಂದಣಿ ಕುರಿತು ರೈತರೊಂದಿಗೆ ಸಮನ್ವಯಕ್ಕಾಗಿ ಕೆಎಫ್‌ಸಿಎಸ್‌ಸಿ ಮತ್ತು ಕೃಷಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ದೇವನಹಳ್ಳಿ ಖರೀದಿ ಕೇಂದ್ರದಲ್ಲಿ ನಾರಾಯಣ-9886141435 ಹಾಗೂ ಸುನೀಲ್‌ಕುಮಾರ್-8277934022, ದೊಡ್ಡಬಳ್ಳಾಪುರ ಖರೀದಿ ಕೇಂದ್ರದಲ್ಲಿ ನಾರಾಯಣಮೂರ್ತಿ-9482991630, ನವೀನ್- 9482001630, ಸಾಸಲು ಖರೀದಿ ಕೇಂದ್ರಕ್ಕೆ ಶಶಿಧರ್ 8277929974, ಹೊಸಕೋಟೆಯಲ್ಲಿ ವರದರಾಜು-9071487237 ಹಾಗೂ ಕೆ.ಬಿ.ನಾಗಭೂಷಣ-8277934038, ಹಾಗೂ ನೆಲಮಂಗಲ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳಾಗಿ ವಿ.ಶಿವಕುಮಾರ್-9880361514,ಈ.ಯಲ್ಲಪ್ಪ- 8277934016 ಕಾರ್ಯನಿರ್ವಹಿಸಲಿದ್ದಾರೆ. ರೈತರು ರಾಗಿ ಖರೀದಿ ನೋಂದಣಿ ಕುರಿತ ಮಾಹಿತಿಗೆ ಈ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂಪರ್ಕಿಸಬಹುದು ಎಂದು ಆಹಾರ,ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಜಿ.ಗಿರಿಜಾದೇವಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts