More

    ರಾಗಿಹೊಸಳ್ಳಿಯಲ್ಲಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆ

    ಶಿರಸಿ: ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಹಲವು ಗ್ರಾಮಗಳ ಸೇರ್ಪಡೆ ವಿಚಾರವಾಗಿ ಕರೆದಿದ್ದ ಮಾಹಿತಿ ಸಭೆ ಪ್ರತಿಭಟನಾ ಸ್ವರೂಪ ಪಡೆದು ಗ್ರಾಮಸ್ಥರು ಸಭೆ ಬಹಿಷ್ಕರಿಸಿದ ಘಟನೆ ತಾಲೂಕಿನ ರಾಗಿಹೊಸಳ್ಳಿಯಲ್ಲಿ ಗುರುವಾರ ನಡೆದಿದೆ.

    ಇತ್ತೀಚೆಗೆ ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಗ್ರಾಮಗಳ ಸೇರ್ಪಡೆ ವಿರೋಧಿಸಿ ರಾಗಿಹೊಸಳ್ಳಿಯಲ್ಲಿ ಜರುಗಿದ ಪ್ರತಿಭಟನೆಯಲ್ಲಿ ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಭಾಗಿಯಾಗಿ ಉಪವಿಭಾಗಾಧಿಕಾರಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಮ್ಮುಖದಲ್ಲಿ ಅಭಯಾರಣ್ಯ ಕುರಿತು ಮಾಹಿತಿ ನೀಡುವುದಾಗಿ ಪ್ರಕಟಿಸಿದ್ದರು. ಅದರಂತೆ ನಿಗದಿತ ಅವಧಿಗೆ ಅಧಿಕಾರಿಗಳು ಸ್ಥಳಕ್ಕೆ ಬಾರದೇ ಇರುವುದರಿಂದ ಪ್ರತಿಭಟನಾಕಾರರು ಅಧಿಕಾರಿಗಳು ಆಗಮಿಸಬೇಕು ಎಂದು ಒಕ್ಕೊರಿಲಿನಿಂದ ಆಗ್ರಹಿಸಿ ಪ್ರತಿಭಟನೆ ಮಾಡಿದರು. ಪ್ರತಿಭಟನಾಕಾರರ ಆಗ್ರಹಕ್ಕೆ ಮಣಿದು ಶಿರಸಿ ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಸ್ಥಳಕ್ಕೆ ಆಗಮಿಸಿ ಮಾಹಿತಿ ಸಭೆ ನಡೆಸಿದರು.

    ಈ ವೇಳೆ ಹೋರಾಟಗಾರರ ವೇದಿಕೆ ಜಿಲ್ಲಾಧ್ಯಕ್ಷ ಎ.ರವೀಂದ್ರ ನಾಯ್ಕ ಮಾತನಾಡಿ, ಅಭಯಾರಣ್ಯ ಘೊಷಣೆ ಪೂರ್ವ ಸ್ಥಳೀಯ ಜನರ ಅಭಿಪ್ರಾಯ ಮತ್ತು ಸ್ಥಳೀಯ ಸಂಸ್ಥೆಯ ತೀರ್ಮಾನ ಅವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿದರು.

    ಇಲ್ಲಿರುವ ಅತಿಕ್ರಮಿತ ಕುಟುಂಬಗಳು, ಮಾಲ್ಕಿ (ಕಂದಾಯ) ಕುಟುಂಬಗಳೆಷ್ಟು? ಅಭಯಾರಣ್ಯ ಪ್ರದೇಶದಲ್ಲಿ ಬರುವ ಅತಿಕ್ರಮಣದಾರರಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಅವಕಾಶ ಇದೆಯೇ? ಎಂಬಿತ್ಯಾದಿ ವಿಷಯದ ಮೇಲೆ ಪ್ರಮುಖರಾದ ನಾಗರಾಜ ಗೌಡ, ದೇವರಾಜ ಮರಾಠಿ, ಸಂತೋಷ ಗೌಡ, ಗಜಾನನ ನಾಯ್ಕ, ಮಂಜುನಾಥ ಮರಾಠಿ ಮುಂತಾದವರು ಪ್ರಶ್ನಿಸಿದರು.

    ಮಾಹಿತಿ ನೀಡಲು ಆಗಮಿಸಿದ್ದ ಅರಣ್ಯ ಇಲಾಖೆ ಎಸಿಎಫ್ ಅಜೀಜ್ ಸಮರ್ಪಕ ಉತ್ತರ ನೀಡದೇ ಇರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸಭೆಯನ್ನು ಬಹಿಷ್ಕರಿಸಿದರು.

    ಅಭಯಾರಣ್ಯಕ್ಕೆ ಸೇರ್ಪಡೆ ವಿರೋಧದ ಕುರಿತು ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಹೋರಾಟ ಮಾಡಲಾಗುವುದು ಈ ವೇಳೆ ರವೀಂದ್ರ ನಾಯ್ಕ ಎಚ್ಚರಿಸಿದರು. ಬಂಡಲ ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಾ ಮರಾಠಿ, ಮಂಜುನಾಥ ನಾಯ್ಕ, ಗಣೇಶ ಗೌಡ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts