More

    ರಸ್ತೆ ಸುರಕ್ಷತಾ ಕ್ರಮಕ್ಕೆ ಒತ್ತಾಯ, ಗ್ರಾಮಸ್ಥರಿಂದ ರಸ್ತೆ ತಡೆದು ಪ್ರತಿಭಟನೆ, ಸ್ಪೀಡ್ ಬ್ರೇಕರ್, ಸಿಗ್ನಲ್ ಅಳವಡಿಕೆಗೆ ಆಗ್ರಹ

    ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಕಂಟನಕುಂಟೆ ಬಳಿ ಸ್ಪೀಡ್ ಬ್ರೇಕರ್, ಸಿಗ್ನಲ್ ಅಳವಡಿಸುವಂತೆ ಶನಿವಾರ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

    ಸ್ಪೀಡ್ ಬ್ರೇಕರ್ ನಿರ್ಮಾಣಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ಯಾರೂ ಕ್ರಮ ಕೈಗೊಂಡಿಲ್ಲ. ಕೆಆರ್‌ಡಿಸಿಎಲ್ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಿಂಗಳ ಅಂತರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ. ಕೂಡಲೇ ಸ್ಪೀಡ್ ಬ್ರೇಕರ್ ಅಳವಡಿಸವೇಕು. ಇಲ್ಲವಾದಲ್ಲಿ ಮತ್ತೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಗ್ರಾಮದ ಮುಖಂಡ ರಾಜಗೋಪಾಲ್ ಎಚ್ಚರಿಕೆ ನೀಡಿದರು.

    ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಆರ್‌ಡಿಎಲ್ ಅಧಿಕಾರಿ ಪುಟ್ಟಪ್ಪ ಅವರನ್ನು ಪ್ರತಿಭಟನಾನಿರತ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡರು. ನಿಮ್ಮ ನಿರ್ಲಕ್ಷ್ಯದಿಂದಲೇ ನಮ್ಮೂರಿನ ಹಲವರು ಪ್ರಾಣತೆರುತ್ತಿದ್ದಾರೆ. ಎಷ್ಟು ಬಾರಿ ಹೇಳಿದರೂ ಇಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಿಲ್ಲ. ಒಂದು ತಿಂಗಳ ಅಂತರದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಧಿಕಾರಿ ಮನವೊಲಿಕೆ: ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ ಈ ಸಮಸ್ಯೆ ಬಗ್ಗೆ ತಿಳಿದಿದೆ. ಯಾವೆಲ್ಲ್ಲ ಕೆಲಸಗಳನ್ನು ಮಾಡಲು ಇಲಾಖೆಯಿಂದ ಅನುಮತಿ ಇದೆ, ಅವುಗಳನ್ನು ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರು.

    ಯಲಹಂಕ-ಹಿಂದೂಪುರ ರಾಜ್ಯ ಹೆದ್ದಾರಿ 9 ಹಾದುಹೋಗಿರುವ ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಬಳಿಯ ರಸ್ತೆಯೇ ಗ್ರಾಮಸ್ಥರ ಪಾಲಿಗೆ ಯಮಸದೃಶ್ಯವಾಗಿದೆ. ಕಳೆದ ಒಂದೇ ತಿಂಗಳಲ್ಲಿ ನಾಲ್ವರು ವಿವಿಧ ಅಪಘಾತ ಪ್ರಕರಣಗಳಲ್ಲಿ ಇದೇ ರಸ್ತೆಯಲ್ಲಿ ಮೃತಪಟ್ಟಿದ್ದು, ರಸ್ತೆ ಅಪಘಾತ ವಲಯವಾಗಿ ಕುಖ್ಯಾತಿ ಪಡೆದಿದೆ. ಇದಕ್ಕೆ ನೇರ ಕಾರಣ ಕೆಆರ್ ಡಿಸಿಎಲ್ ಸಂಸ್ಥೆ ಎಂದು ಗ್ರಾಮಸ್ಥರು ದೂರಿದರು.

    ರಸ್ತೆ ನಿರ್ಮಾಣಗೊಂಡ ಬಳಿಕ ಕಂಟನಕುಂಟೆ ಗ್ರಾಮ ಆರಂಭ ಹಾಗೂ ಮುಕ್ತಾಯವಾಗುವವರೆಗೂ ರಾಜ್ಯ ಹೆದ್ದಾರಿಯಲ್ಲಿ ಸ್ಪಿಡ್ ಬ್ರೇಕರ್ ನಿರ್ಮಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹಲವಾರು ರಸ್ತೆ ಅಪಘಾತಗಳಾಗಿ ಸಾವು ನೋವುಗಳಾಗಿವೆ. ಕಂಟನಕುಂಟೆ ಗ್ರಾಮಸ್ಥರಾದ ನಟರಾಜ್, ಕದಿರಪ್ಪ ಹಾಗೂ ವಾಜಿರ್ ಸಾಬ್ ಸಾವನ್ನಪ್ಪಿದ್ದಾರೆ. ಮಲ್ಲತ್ತಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಮುನಿರಾಜು ಕೋಮಾ ಸ್ಥಿತಿಯಲ್ಲಿದ್ದು, ಯಾತನೆ ಅನುಭವಿಸುತ್ತಿದ್ದಾರೆ. ಇದರೊಂದಿಗೆ ಹಲವರು ಗಾಯಗೊಂಡು ಶಾಶ್ವತ ಅಂಗವಿಕಲರಾಗಿರುವ ನಿದರ್ಶನಗಳೂ ಇವೆ. ಇಷ್ಟಾದರೂ ಈ ರಸ್ತೆಯಲ್ಲಿ ರಸ್ತೆ ಸುರಕ್ಷತಾ ಕ್ರಮಕೈಗೊಂಡಿಲ್ಲ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
    ರಾಜ್ಯ ಹೆದ್ದಾರಿಯ 9ರಲ್ಲಿ ಎರಡು ಭಾಗದಲ್ಲಿ ಶಾಲೆ, ಘಾಟಿ ಸುಬ್ರಹ್ಮಣ್ಯದ ಪ್ರಮುಖ ರಸ್ತೆ, ಅಂಗಡಿಗಳು ಸೇರಿ ಪ್ರಮುಖ ವಾಣಿಜ್ಯ ಕೇಂದ್ರಗಳು ಇವೆ. ಆದರೆ ರಸ್ತೆಯಲ್ಲಿ ಸಮರ್ಪಕ ಸ್ಪೀಡ್ ಬ್ರೇಕರ್, ಸಿಗ್ನಲ್, ಸರ್ವಿಸ್ ರಸ್ತೆ ಹೀಗೆ ಯಾವುದನ್ನೂ ಕೆಆರ್ ಡಿಸಿಎಲ್ ನಿರ್ಮಾಣ ಮಾಡಿಲ್ಲ.
    ಈ ರಸ್ತೆ ಅಪಘಾತಗಳು ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಇಲಾಖೆ ನಿರ್ಲಕ್ಷ್ಯದಿಂದಲೇ ನಡೆಯುತ್ತಿವೆ ಎಂದು ದೂರಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts