More

    ರಸ್ತೆಯ ಗುಂಡಿಗಳಿಗೆ ತೇಪೆ

    ಹನೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಿ.12 ರಂದು ಹನೂರು ಹಾಗೂ ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆಯ ಗುಂಡಿಗಳಿಗೆ ತೇಪೆ ಹಾಕಲಾಗುತ್ತಿದೆ. ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹಕ್ಕೆ ಬಣ್ಣ ಬಳಿಯುವ ಕಾರ್ಯ ಭರದಿಂದ ಸಾಗುತ್ತಿದೆ.

    6 ತಿಂಗಳ ಹಿಂದೆ ಹನೂರಿನಿಂದ ಮ.ಬೆಟ್ಟ ಮಾರ್ಗದ ಮೂಲಕ ತಮಿಳುನಾಡಿಗೆ ಅಧಿಕ ಭಾರದ 12 ಚಕ್ರಗಳ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ದಿಸೆಯಲ್ಲಿ ಹೆಚ್ಚು ವಾಹನಗಳು ಸಂಚರಿಸಿದ್ದರಿಂದ ಮಾರ್ಗದ ಬಹುತೇಕ ಕಡೆಗಳಲ್ಲಿ ಗುಂಡಿ ಬಿದ್ದು ಹಾಳಾಗಿತ್ತು. ಇದರಿಂದ ಮ.ಬೆಟ್ಟಕ್ಕೆ ಅಗಮಿಸುವ ವಾಹನ ಸವಾರರು ಸಂಚರಿಸಲು ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ ಸೂಚನೆ ಮೇರೆಗೆ 12 ಚಕ್ರದ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ವಿಧಿಸಿತ್ತು.
    ಹದಗೆಟ್ಟಿರುವ ರಸ್ತೆಯನ್ನು ರಿಪೇರಿ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ದೀಪಾವಳಿ ಜಾತ್ರಾ ಸಂಧರ್ಭ ಮ.ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ಕಾರಣ ಶಾಸಕ ಆರ್.ನರೇಂದ್ರ ಅವರೂ ರಸ್ತೆ ರಿಪೇರಿಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅದರೆ ಅನುದಾನದ ನೆಪವೊಡ್ಡಿ ರಸ್ತೆಯನ್ನು ರಿಪೇರಿ ಮಾಡಿರಲಿಲ್ಲ.

    ಆದರೆ ಇದೀಗ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ, ಈ ಮಾರ್ಗದ ರಸ್ತೆಯಲ್ಲಿ ಬಾಯ್ತೆರೆದಿದ್ದ ಗುಂಡಿಗಳಿಗೆ ತೇಪ ಹಾಕಲಾಗುತ್ತಿದೆ. ಸಿಎಂ ಬಂದರೆ ಮಾತ್ರವೇ ಸಮಸ್ಯೆಗಳು ಬಗೆಹರಿಯುವುದೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

    ಅತಿಥಿಗೃಹದ ಕಟ್ಟಡಕ್ಕೆ ಬಣ್ಣ: ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಕಟ್ಟಡವನ್ನು 2007ರಲ್ಲಿ ಉದ್ಘಾಟಿಸಲಾಗಿತ್ತು. 15 ವರ್ಷದ ನಂತರ ಇದೇ ಮೊದಲ ಬಾರಿಗೆ ಕಟ್ಟಡ ಬಣ್ಣ ಕಾಣುತ್ತಿದೆ !
    ಡಿ.12 ರಂದು ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ಸರ್ಕಾರಿ ಸವಲತ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಸಿಎಂ ಭಾಗಿಯಾಗಲಿದ್ದು, ಲೋಕೋಪಯೋಗಿ ಇಲಾಖೆ ಅತಿಥಿಗೃಹಕ್ಕೆ ಆಗಮಿಸಲಿದ್ದಾರೆ. ಇದರಿಂದ ಎಚ್ಚೆತ್ತ ಇಲಾಖೆ ಅಧಿಕಾರಿಗಳು ಬಣ್ಣ ಬಳಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದುವರೆಗೂ ಗಿಡಗಂಟಿಗಳಿಂದ ಕೂಡಿದ್ದ ಆವರಣವನ್ನು ಸ್ವಚ್ಛ ಗೊಳಿಸುವ ಕಾರ್ಯವೂ ಚುರುಕಾಗಿ ಸಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts