More

    ರಸ್ತೆಗೆ ಬಂತು ಉಣಕಲ್ ಕೆರೆ ಪಿಶಾಚಿ

    ಹುಬ್ಬಳ್ಳಿ: ಇಲ್ಲಿಯ ಉಣಕಲ್ ಕೆರೆಯಲ್ಲಿ ಬೆಳೆದಿರುವ ‘ಪಿಶಾಚಿ ಕಳೆ’ ತೆಗೆಯುವ ಕೆಲಸವೇನೋ ಸ್ವಲ್ಪ ಚುರುಕುಗೊಂಡಿದೆ. ಆದರೆ, ಕೆರೆಯಿಂದ ಕಿತ್ತು ತಂದಿದ್ದನ್ನು ರಸ್ತೆ ಬದಿ ಸುರಿಯುತ್ತಿದ್ದು, ‘ಸ್ಮಾರ್ಟ್’ ಅಭಿವೃದ್ಧಿಯು ಸಾರ್ವಜನಿಕರು ಮೂಗು ಮುರಿಯುವಂತೆ ಮಾಡಿದೆ.

    ಸದಾ ನೀರಿರಬೇಕಾದ ಕೆರೆಯಲ್ಲಿ ಐಖೋರ್ನಿಯಾ ಕ್ರಾಸಿಪಸ್ ಕಳೆ ದಟ್ಟವಾಗಿ ಹರಡಿದೆ. ಕೆಲವು ಕಡೆಗೆ ಕೆರೆಯೇ ಕಾಣದಂತೆ ವ್ಯಾಪಿಸಿಕೊಂಡಿದೆ. ಇದರ ಮೂಲೋತ್ಪಾಟನೆ ಸೇರಿ ಕೆರೆ ಮತ್ತು ದಂಡೆಯಲ್ಲಿ ಬೇರೆ ಬೇರೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸ್ಮಾರ್ಟ್ ಸಿಟಿ ಯೋಜನೆ ಅಡಿ 14 ಕೋಟಿ 83 ಲಕ್ಷ ರೂ. ಮೀಸಲಿಡಲಾಗಿದೆ. ಬೆಂಗಳೂರಿನ ಜಿ. ನಾಗೇಂದ್ರ ಎನ್ನುವವರು ಟೆಂಡರ್​ನಲ್ಲಿ ಈ ಕೆಲಸದ ಗುತ್ತಿಗೆ ಪಡೆದುಕೊಂಡಿದ್ದಾರೆ.

    ತೆಗೆದ ಒಂದೇ ವಾರದಲ್ಲಿ ಮತ್ತೆ ಮೊದಲಿನಂತೆಯೇ ಬೆಳೆಯುವ ಈ ಕಳೆಯನ್ನು ನಿರ್ನಾಮ ಮಾಡುವುದು ಸುಲಭದ ಕೆಲಸವೇನೂ ಅಲ್ಲ. ಕಳೆ ತೆಗೆದು ನೀರು ಸ್ವಚ್ಛಗೊಳಿಸಲು ಗುತ್ತಿಗೆದಾರರು 6 ತಿಂಗಳು ಅವಧಿ ಕೇಳಿದ್ದಾರೆ. ಈಗಾಗಲೇ ಕೆರೆಯಿಂದ ಆಯ್ದು ತೆಗೆಯುವ ಕೆಲಸ ಚುರುಕಿನಿಂದ ಸಾಗಿದೆ. ಆದರೆ ಕಿತ್ತ ಕಳೆಯನ್ನು ಇಂಥದ್ದೇ ಸ್ಥಳದಲ್ಲಿ ಹಾಕಬೇಕು ಎಂಬ ವಿಷಯದಲ್ಲಿ ಸ್ಪಷ್ಟತೆ ಹೊಂದಿಲ್ಲ. ರಸ್ತೆ ಬದಿ ಸುರಿಯುತ್ತಿದ್ದು, ಮಳೆ ಬಂದರೆ ಕೊಳೆಯುತ್ತದೆ, ಬಿಸಿಲು ಬಿದ್ದರೆ ಒಣಗುತ್ತದೆ ಎಂಬಂತಾಗಿದೆ. ಇತ್ತೀಚೆಗೆ ಬಿಸಿಲು ಬೀಳುತ್ತಿದ್ದು, ಕೆರೆ ಹೊರಗೆ ರಾಶಿ ಹಾಕಿದ ಕಳೆ ಒಣಗಿದ ಕಡ್ಡಿಯಂತೆ ಆಗುತ್ತಿದೆ. ಹಸಿ ಕಸವನ್ನೇ ಸಾಗಿಸುವುದು ಕಷ್ಟ. ಹೀಗಾಗಿ ಒಣಗಿದ ನಂತರ ಬೇರೆಡೆ ಸಾಗಿಸಲಾಗುತ್ತಿದೆ. ಸದ್ಯಕ್ಕಂತೂ ಕೆರೆಯ ಕಳೆ ರಸ್ತೆ ಪಕ್ಕದಲ್ಲಿ ರಾಶಿ ಬಿದ್ದು, ಆ ಮಾರ್ಗದಲ್ಲಿ ಹೋಗುವವರಿಗೆಲ್ಲ ಪಿಶಾಚಿ ಭಯ ಮೂಡಿಸುವಂತೆ ಕಂಡುಬರುತ್ತಿದೆ. ರಸ್ತೆ ಮತ್ತು ಕೆರೆಯ ಅಂದವನ್ನೂ ಕೆಡಿಸುತ್ತಿದೆ.ಈ ಕಳೆಯನ್ನು ಬಳಸಿಕೊಂಡು ಎರೆಹುಳು ಗೊಬ್ಬರ/ಕಾಂಪೋಸ್ಟ್ ಗೊಬ್ಬರ ತಯಾರಿಕೆ ಇತ್ಯಾದಿ ಸಾಧ್ಯವೇ ಎಂಬ ಬಗ್ಗೆ ಚಿಂತನೆಗಳು ನಡೆದಿಲ್ಲ.

    ಕೈಬಿಟ್ಟ ಚೆನ್ನೈ ಕಂಪನಿ
    ಮನೆ ಹಾಗೂ ಕಂಪನಿಗಳ ಆವರಣದ ಅಂದವನ್ನು ಹೆಚ್ಚಿಸಲು ಈ ಕಳೆಯನ್ನು ಕೆಲವರು ಬಳಸುತ್ತಾರೆ. ಇದಕ್ಕಾಗಿ ಈ ಕಳೆಯನ್ನು ಖರೀದಿಸುವವರೂ ಇದ್ದಾರೆ. ಮೊದಲು ದೇಶಪಾಂಡೆ ಫೌಂಡೇಷನ್​ನವರು ತೆಗೆದುಕೊಂಡು ಹೋಗಿದ್ದರು. ನಂತರ ಸ್ಮಾರ್ಟ್ ಸಿಟಿಯವರು ಚೆನ್ನೈ ಮೂಲದ ಕಂಪನಿಯೊಂದಕ್ಕೆ ಕಳೆ ತೆಗೆದುಕೊಂಡು ಹೋಗಲು ಕೇಳಿದ್ದರು. ಆದರೆ, ಕಂಪನಿಯವರು ದೊಡ್ಡ ಮಟ್ಟದಲ್ಲಿ ಕೇಳಿದ್ದರು. ಅಷ್ಟೊಂದು ಪ್ರಮಾಣದಲ್ಲಿ ಪಿಶಾಚಿ ಕಳೆ ಇಲ್ಲದೇ ಇರುವುದರಿಂದ ಕೈಬಿಟ್ಟಿದ್ದಾರೆ ಎನ್ನಲಾಗಿದೆ.

    ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಪಿಶಾಚಿ ಕಳೆ ತೆಗೆಯಲಾರಂಭಿಸಿದ್ದಾರೆ. ಒಣಗಿದ ನಂತರ ಗುತ್ತಿಗೆದಾರರು ಬೇರೆಡೆ ಸಾಗಣೆ ಮಾಡುತ್ತಾರೆ.
    | ಎಸ್.ಎಚ್. ನರೇಗಲ್ ಸ್ಮಾರ್ಟ್ ಸಿಟಿ ಕಂಪನಿ ವಿಶೇಷಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts