More

    ರಸಗೊಬ್ಬರ, ಕೀಟನಾಶಕ ನಕಲಿ ದಂಧೆ; ಮೂವರ ಬಂಧನ* ಕೃಷಿ ಅಧಿಕಾರಿಗಳೇ ಶಾಮಿಲಾಗಿದ್ದಾರಾ ಎಂಬ ಅನುಮಾನ* ಲ್ಯಾಬ್ ಪರೀಕ್ಷೆಯಲ್ಲಿ ನಕಲಿ ಎಂದು ಸಾಬೀತು

    ಮುಳಬಾಗಿಲು: ಜಿಲ್ಲೆಯಲ್ಲಿ ರೈತರಿಗೆ ವಂಚನೆ ನಡೆಯುತ್ತಿದ್ದು, ನಕಲಿ ಗೊಬ್ಬರ ತಯಾರಿಕೆ ಮತ್ತು ಮಾರಾಟ ಜಾಲ ತಡವಾಗಿ ಬೆಳಕಿಗೆ ಬಂದಿದ್ದು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ಮಾಡಬೇಕಾಗಿದೆ. ಕೋಟ್ಯಂತರ ರೂ. ಕೃಷಿಕರ ಹಣ ವಂಚಕರ ಪಾಲಾಗಿದ್ದನ್ನು ಸರ್ಕಾರ ತನಿಖೆ ಮಾಡಿ ರೈತರಿಗೆ ನ್ಯಾಯ ಒದಗಿಸಬೇಕಾಗಿದೆ.

    ಕೃಷಿಗೆ ಬಳಸುವ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ತಯಾರಿಕೆಯಲ್ಲಿ ನಕಲಿ ಕಂಪನಿಗಳ ಕಾರುಬಾರು ಜೋರಾಗಿದ್ದು, ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ.

    ಮೇನಲ್ಲಿ ತಾಲೂಕಿನ ತಾವರೆಕೆರೆ ಗ್ರಾಮದ ಟಿ.ವಿ.ರಾಜೇಶ್ ಎಂಬ ರೈತ ಮುಳಬಾಗಿಲಿನ ಕಮಲ್ ಟ್ರೇಡರ್ಸ್‌ನಲ್ಲಿ ಕೊಂಡಿದ್ದ ರಸಗೊಬ್ಬರ ನಕಲಿಯಾಗಿದ್ದ ಬಗ್ಗೆ ಕೃಷಿ ಇಲಾಖೆಗೆ ನೀಡಿದ ದೂರಿನ ಮೇರೆಗೆ ಹಲವು ಗೊಬ್ಬರದ ಅಂಗಡಿಗಳ ಮೇಲೆ ದಾಳಿ ಮಾಡಿ ಮಾದರಿಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿತ್ತು. ಅದೇ ಸಂದರ್ಭದಲ್ಲಿ ತಮಿಳುನಾಡು ಮೂಲದ ಗೊಬ್ಬರ ತಯಾರಿಕೆ ಕಂಪನಿಯ ರಸಗೊಬ್ಬರಗಳು ಕಳಪೆಯಾಗಿರುವುದು ಪತ್ತೆಯಾಗಿದ್ದು ಈ ಬಗ್ಗೆ ನಗರ ಠಾಣೆಗೆ ಸಹಾಯಕ ಕೃಷಿ ನಿರ್ದೇಶಕ ಎನ್.ರವಿಕುಮಾರ್ ನೀಡಿದ ದೂರಿನ ಮೇರೆಗೆ ಸಿಪಿಐ ಜಿ.ಲಕ್ಷ್ಮೀಕಾಂತಯ್ಯ, ಪಿಎಸ್‌ಐ ಬಿ.ಮಂಜುನಾಥ್ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಲ್ಲದೆ ತಮಿಳುನಾಡಿನ ನಾಮಕಲ್ ಬಳಿಯ ತಿರುಚಂಗೂರು ಗ್ರಾಮದ ಕಾರ್ಖಾನೆಯನ್ನು ಪತ್ತೆ ಹಚ್ಚಿ ಬೀಗಮುದ್ರೆ ಹಾಕಿ ಫ್ಯಾಕ್ಟರಿ ಮಾಲೀಕ ಸರವಣ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಮುಳಬಾಗಿಲಿನ ಸರ್ಕಾರಿ ಆಸ್ಪತ್ರೆ ಮುಂಭಾಗದ ಮೂರ್ತಿ ಟ್ರೇಡರ್ಸ್‌ ಮಾಲೀಕ ಕೃಷ್ಣಮೂರ್ತಿ, ಬಸ್ ನಿಲ್ದಾಣದ ಕಮಲ್ ಟ್ರೇಡರ್ಸ್‌ ಮಾಲೀಕ ಅರವಿಂದ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಕಾಮರಾಜ್ ಅವರಿಂದ ಗೊಬ್ಬರಗಳನ್ನು ಖರೀದಿಸಿ ರೈತರಿಗೆ ಮಾರಾಟ ಮಾಡಿದ್ದೇವೆ ಎಂದು ಮಾಹಿತಿ ನೀಡಿದ ಮೇರೆಗೆ ಕಾಮರಾಜ್‌ನನ್ನು ಬಂಧಿಸಿದಾಗ ತಮಿಳುನಾಡಿನ ತಿರುಚಂದೂರು ಗ್ರಾಮದ ಫ್ಯಾಕ್ಟರಿ ಪತ್ತೆಗೆ ಸಹಕಾರಿಯಾಗಿದೆ.

    ಪ್ರಕರಣದ ಬಗ್ಗೆ ಕೋಲಾರ ಜಿಲ್ಲಾ ಎಸ್‌ಪಿ ಡಿ.ದೇವರಾಜ್ ಅವರು ವಿಶೇಷ ಆಸಕ್ತಿವಹಿಸಿ ಇಲಾಖೆಯ ತನಿಖೆಯನ್ನು ಕ್ಷಿಪ್ರಗತಿಯಲ್ಲಿ ಮಾಡಿಸಿದ್ದು ಕಳೆದ ಮೂರ‌್ನಾಲ್ಕು ವರ್ಷಗಳಿಂದ ನಿರಂತರವಾಗಿ ರೈತರಿಗೆ ಮೋಸ ಮಾಡುತ್ತಿರುವ ರಸಗೊಬ್ಬರಗಳ ಅಂಗಡಿಗಳು ಗುಣಮಟ್ಟದ ತಪಾಸಣೆ ಮಾಡುವ ಕೃಷಿ ಇಲಾಖೆ ಅಧಿಕಾರಿಗಳ ಜವಾಬ್ದಾರಿ ಯಾವ ರೀತಿ ಇತ್ತು ಎಂಬುದಕ್ಕೆ ಸಾಕ್ಷಿ ಒದಗಿಸಿದಂತಾಗಿದೆ. ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳೇ ಶಾಮೀಲಾಗಿದ್ದಾರೆಂಬ ಶಂಕೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಸಮಗ್ರ ತನಿಖೆಯಿಂದಲೇ ಸತ್ಯಾಂಶ ಹೊರಬರಬೇಕಾಗಿದೆ.

    ಮೇ 2ರಂದು ಮುಳಬಾಗಿಲಿನ ಕಮಲ್ ಟ್ರೇಡರ್ಸ್‌ನಲ್ಲಿ ಡಿಎಪಿ ಮತ್ತು ಕಾಂಪ್ಲೆಕ್ಸ್ ಗೊಬ್ಬರವನ್ನು ಕೊಂಡು ಕೂಲಿಯವರು ಇಲ್ಲದ ಕಾರಣ ನಾನೇ ಗೊಬ್ಬರ ಹಾಕಲು ಮುಂದಾದೆ. ಆಗ ಕೈಗೆ ಮಣ್ಣು ಬರೀ ಕೆಮ್ಮಣ್ಣು ಜೇಡಿ ಮಣ್ಣು ತುಂಬಿರುವ ರಸಗೊಬ್ಬರ ಕಂಡು ಗಾಬರಿಯಾಗಿ ಕೃಷಿ ಇಲಾಖೆಗೆ ದೂರು ನೀಡಿದ್ದು, ಮಾಧ್ಯಮಗಳಲ್ಲಿ ವರದಿ ಬಂದ ನಂತರ ಕೃಷಿ ಇಲಾಖೆ ಅಧಿಕಾರಿಗಳು ಪೊಲೀಸ್ ದೂರು ನೀಡಿದ್ದು, ಎಸ್‌ಪಿ ಡಿ.ದೇವರಾಜ್ ತನಿಖೆ ಕೈಗೊಂಡಿದ್ದರಿಂದ ಜಿಲ್ಲೆಯ ರೈತರಿಗೆ ಆಗುತ್ತಿರುವ ವಂಚನೆ ಬೆಳಕಿಗೆ ಬಂದಂತಾಗಿದೆ.
    ಟಿ.ವಿ.ರಾಜೇಶ್, ರೈತ ತಾವರೆಕೆರೆ.
    =============
    ನಕಲಿ ಗೊಬ್ಬರದ ಬಗ್ಗೆ ತಾವರೆಕೆರೆ ರೈತ ಟಿ.ವಿ.ರಾಜೇಶ್ ನೀಡಿದ ದೂರಿನ ಮೇರೆಗೆ ಲ್ಯಾಬ್‌ಗೆ ಮಾದರಿಗಳನ್ನು ಕಳುಹಿಸಿಕೊಟ್ಟಿದ್ದು, ನಕಲಿ ಎಂದು ವರದಿ ಬಂದಿದೆ. ಈ ಬಗ್ಗೆ ಮುಳಬಾಗಿಲು ನಗರ ಠಾಣೆಗೆ ದೂರು ನೀಡಿದ್ದು ಮೂವರನ್ನು ಬಂಧಿಸಿದ್ದು ತನಿಖೆ ಪ್ರಗತಿಯ ಹಂತದಲ್ಲಿದೆ.
    ರವಿಕುಮಾರ್ ಕೃಷಿ ಸಹಾಯಕ ನಿರ್ದೇಶಕ ಮುಳಬಾಗಿಲು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts