More

    ರಂಗ ಕಲಾವಿದರಿಗೆ ಡಬಲ್ ಮಾಸಾಶನ ಕೊಡಿ- ಸುಶೀಲಕುಮಾರ ಆಗ್ರಹ

    ದಾವಣಗೆರೆ: ನಾಟಕ ಪ್ರದರ್ಶನದಿಂದಲೇ ಜೀವನ ಅವಲಂಬಿಸಿರುವ ರಂಗ ಕಲಾವಿದರ ಜೀವನ ಕಷ್ಟಕರವಾಗಿದೆ. ಅವರನ್ನು ಉಭಯ ಸರ್ಕಾರಗಳೂ ಡಬಲ್ ಮಾಸಾಶನಕ್ಕೆ ಪರಿಗಣಿಸಬೇಕೆಂದು ಬಾಗಲಕೋಟೆಯ ರಂಗ ಪ್ರೋತ್ಸಾಹಕ ಸುಶೀಲಕುಮಾರ ಭೀಮಪ್ಪ ಬೆಳಗಲಿ ಆಗ್ರಹಿಸಿದರು.
    ಇಲ್ಲಿನ ಚಿಂದೋಡಿಲೀಲಾ ಕಲಾಕ್ಷೇತ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀಶೈಲ ಮಲ್ಲಿಕಾರ್ಜುನ ವಿವಿಧ ನಾಟಕ ಕಲಾವಿದರ ಸಂಘದ ವಾರ್ಷಿಕೋತ್ಸವ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಕೇಂದ್ರದಿಂದ 4 ಸಾವಿರ ರೂ, ರಾಜ್ಯ ಸರ್ಕಾರದಿಂದ 2 ಸಾವಿರ ರೂ.ನಂತೆ ಏಕ ಮಾಸಾಶನವನ್ನು ರಂಗ ಕಲಾವಿದರಿಗೆ ನೀಡಲಾಗುತ್ತಿದೆ. ಎರಡನ್ನೂ ಒಟ್ಟಿಗೆ ನೀಡಿದರೆ ಸರ್ಕಾರಕ್ಕೆ ನಷ್ಟವಾಗದು. ಏಕ ಮಾಸಾಶನಕ್ಕೆ ಮಾತ್ರ ಪರಿಗಣಿಸುವ ನೀತಿ ಸರಿಯಲ್ಲ. ಇದನ್ನು ಶಾಸನಸಭೆಯಲ್ಲಿ ಪ್ರಸ್ತಾಪಿಸುವಂತೆ ಹರಿಹರ ಶಾಸಕರಲ್ಲಿ ಮನವಿ ಮಾಡಿದರು.
    ರಂಗ ಕಲಾವಿದರಿಗೆ ಸರ್ಕಾರ ಮತ್ತು ಸಾರ್ವಜನಿಕರ ಸಹಕಾರ ಬೇಕು. ಅವರಿಗೆ ನೆರವಾಗುವ, ಅವರಿಗಾಗಿ ಹೋರಾಟ ಮಾಡಬಲ್ಲವರಿಗೆ ನಾಟಕ ಅಕಾಡೆಮಿ ಸದಸ್ಯ ಸ್ಥಾನ ನೀಡಬೇಕು. ಕೇವಲ ಶಿಫಾರಸು ಹಾಗೂ ಬೇಕಾದವರಿಗೆ ನೀಡುವುದು ನಿಲ್ಲಬೇಕು ಎಂದೂ ಹೇಳಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಪಿ.ಹರೀಶ್, ಬೆಂಗಳೂರಲ್ಲಿ 10 ವರ್ಷದ ಹಿಂದೆ ಕನ್ನಡಿಗರು ಅರೆಬರೆ ಕನ್ನಡ ಮಾತಾಡುವವರಿದ್ದರು. ಇಂದು ಕಾಲ ಬದಲಾಗಿದೆ. ತಾವೂ ಮಾತ್ರವಲ್ಲದೆ ವಲಸೆ ಬಂದ ಪರರಾಜ್ಯದವರೂ ಕನ್ನಡದಲ್ಲೇ ಮಾತಾಡುವಂಥ ವಾತಾವರಣವನ್ನು ಸೃಷ್ಟಿಸಿದ್ದಾರೆ ಎಂದರು.
    ನಾಟಕಗಳ ಪ್ರದರ್ಶನಕ್ಕೆ ಉತ್ತೇಜಿಸುತ್ತಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡದ ಅಭಿಮಾನ ಉಳಿಸುವ ನಿಟ್ಟಿನಲ್ಲಿ ಇನ್ನಷ್ಟು ಕೆಲಸ ಮಾಡಬೇಕು. ಮಧ್ಯಕರ್ನಾಟಕ ದಾವಣಗೆರೆಗೆ ಯಾವುದೇ ಭಾಷೆ, ಗಡಿ ಸಮಸ್ಯೆಯ ಅಳುಕಿಲ್ಲ. ಆದರೆ ಗಡಿಭಾಗದ ಜನರಿಗೆ ಸ್ಥೈರ್ಯ ತುಂಬುವ ಕೆಲಸವನ್ನು ಈ ಭಾಗದ ಜನರು ಮಾಡಬೇಕು ಎಂದು ಆಶಿಸಿದರು.
    ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಎಚ್.ಜಿ. ಉಮೇಶ್ ಮಾತನಾಡಿ ರಂಗ ಕಲಾವಿದರ ಮಾಸಾಶನ ಮೊತ್ತವನ್ನು 10 ಸಾವಿರ ರೂ.ಗೆ ಏರಿಸಬೇಕು. ಕ್ಷೇಮಾಭಿವೃದ್ಧಿ ಕಲ್ಯಾಣಮಂಡಳಿ ರಚಿಸಬೇಕು. ಆವರಗೆರೆ ಸಮೀಪದ ವೃತ್ತಕ್ಕೆ ಚಿಂದೋಡಿ ಲೀಲಾ ಹಾಗೂ ದಾವಣಗೆರೆಯ ರಸ್ತೆಯೊಂದಕ್ಕೆ ಖ್ಯಾತ ರಂಗಕರ್ಮಿ ಗುಬ್ಬಿ ವೀರಣ್ಣ ಅವರ ಹೆಸರಿಡಬೇಕು. ಚಿಂದೋಡಿ ಲೀಲಾ ಹೆಸರಿನ ರಂಗಭೂಮಿ ಕಾಲನಿ ನಿರ್ಮಿಸಿ ರಂಗ ಕಲಾವಿದರಿಗೆ ನಿವೇಶನ ಕಲ್ಪಿಸಬೇಕೆಂದು ಆಗ್ರಹಿಸಿದರು.
    ಸಾನ್ನಿಧ್ಯ ವಹಿಸಿದ್ದ ನೀಲಗುಂದ ಜಂಗಮಪೀಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಭಾರತದ ಸಂಪತ್ತು. ಕಲಾವಿದರು ದೇಶದ ಆಸ್ತಿ. ಕಲೆಗೆ ಸೀಮೆ-ಜಾತಿ ಭೇದವಿಲ್ಲ. ಕಲಾವಿದರ ರಂಗ ಜೀವನ ಹಾಗೂ ಖಾಸಗಿ ಬದುಕಿನ ಉನ್ನತಿಗೆ ಎಲ್ಲರೂ ಸಹಕರಿಸಬೇಕು ಎಂದು ಆಶಿಸಿದರು.
    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ನಾಟಕ ಕಲಾವಿದರು ರಂಗ ಪ್ರದರ್ಶನದ ಇಲಾಖೆಯ ನೆರವು ಪಡೆಯಲು 15 ದಿನ ಮುನ್ನವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಮನವಿ ಮಾಡಿದರು.
    ಚಿಂದೋಡಿ ವೀರಶಂಕರ್, ರುದ್ರಾಕ್ಷಿಬಾಯಿ, ರುಕ್ಮಿಣಿ ಹೆಗಡೆ, ಗಣೇಶ ಗುಡಬುಡಿ, ಲಿಂಗರಾಜ ಗೌಡ, ರವಿಪಾಟೀಲ್ ಮುಸ್ಟೂರು, ಗೋಣಿ ಬಸವರಾಜ್, ಚನ್ನಯ್ಯ ಸ್ವಾಮಿ, ನೀಲಗುಂದ ಬಸವನಗೌಡ್ರು, ಮುದಹದಡಿ ನಾಗರಾಜಪ್ಪ, ಶಿವಕುಮಾರ್ ಶೆಟ್ಟರ್, ಖಾದರ್ ಇತರರಿದ್ದರು.
    ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಾಟಕ ಪ್ರದರ್ಶಿತವಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts