More

    ಯೋಗದಿಂದ ಬಲಿಷ್ಠ ರಾಷ್ಟ್ರ ಕಟ್ಟಬೇಕು

    ಹುಬ್ಬಳ್ಳಿ: ಭಾರತೀಯ ಜೀವನ ಪದ್ಧತಿಯಲ್ಲಿ ಯಾವುದಕ್ಕೂ ಕಡಿಮೆಯಿಲ್ಲ. ಯೋಗದಂಥ ದೇಸಿ ಪದ್ಧತಿಗಳ ಮೂಲಕ ಬಲಿಷ್ಠ ರಾಷ್ಟ್ರ ಕಟ್ಟಬೇಕು. ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಸೆಡ್ಡು ಹೊಡೆದು, ಆ ಸಂಸ್ಕೃತಿ ದೂರ ಸರಿಸಬೇಕು. ನಿತ್ಯ ಜೀವನದಲ್ಲಿ ಯೋಗ, ಪ್ರಾಣಾಯಾಮ, ನಿಸರ್ಗ ಚಿಕಿತ್ಸೆ, ಆಯುರ್ವೆದ ಮತ್ತು ಉತ್ತಮ ನಡವಳಿಕೆ ಅಳವಡಿಸಿಕೊಳ್ಳಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಸಲಹೆ ನೀಡಿದರು.

    ಹರಿದ್ವಾರದ ಪತಂಜಲಿ ಯೋಗ ಪೀಠ ವತಿಯಿಂದ 1 ಸಾವಿರ ಯೋಗ ಶಿಕ್ಷಕರಿಗಾಗಿ ಆಯೋಜಿಸಿರುವ 1 ತಿಂಗಳ ಆನ್​ಲೈನ್ ಯೋಗ ತರಬೇತಿ ಶಿಬಿರಕ್ಕೆ ಇಲ್ಲಿನ ಕೇಶ್ವಾಪುರ ಯೋಗ ಕಾರ್ಯಾಲಯದಲ್ಲಿ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

    ನಮ್ಮ ದೇಶದ ದುರ್ದೈವ ಎಂದರೆ ನಾವು ಪಾಶ್ಚಿಮಾತ್ಯ ಪದ್ಧತಿಗೆ ಒಗ್ಗಿಕೊಂಡಿದ್ದೇವೆ. ಸರ್ಕಾರಗಳೂ ಅದೇ ರೀತಿ ಯೋಚಿಸುತ್ತಿವೆ. ಅಮೆರಿಕ, ರಷ್ಯಾದಲ್ಲಿ ಸಂಶೋಧನೆಯಾದ ಕರೊನಾ ಲಸಿಕೆ ಬಂದರೆ ಬಳಸಲು ಸಿದ್ಧರಿದ್ದೇವೆ. ಆದರೆ, ನಮ್ಮ ದೇಶದಲ್ಲಿ ನ್ಯಾಚುರೋಪಥಿ ಮತ್ತು ಆಯುರ್ವೆದದಲ್ಲಿ ಸರಳ ಔಷಧಗಳಿದ್ದರೂ ತೆಗೆದುಕೊಳ್ಳಲು ಹಿಂದೇಟು ಹಾಕುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.

    ಭಾರತದಲ್ಲಿ ಯೋಗಕ್ಕೆ 5 ಸಾವಿರ ವರ್ಷಗಳ ಇತಿಹಾಸವಿದೆ. 20 ವರ್ಷಗಳ ಹಿಂದೆ ಸಾಮಾನ್ಯರು ಯೋಗ ಮಾಡುವುದು ಅಸಾಧ್ಯ ಎಂಬ ಭಾವನೆ ಇತ್ತು. ಹತ್ತಾರು ಸಾವಿರ ಜನ ಒಟ್ಟಿಗೆ ಸರಳವಾಗಿ ಯೋಗ ಮಾಡಬಹುದು ಎಂಬುದನ್ನು ಬಾಬಾ ರಾಮದೇವ ಅವರು ತೋರಿಸಿಕೊಟ್ಟರು. 2007ರಲ್ಲಿ ಬಾಬಾಜಿ ಅವರನ್ನು ಹುಬ್ಬಳ್ಳಿಗೆ ಕರೆಸಿದಾಗ 13 ಸಾವಿರ ಜನ ಸೇರಿದ್ದರು ಎಂದು ಸ್ಮರಿಸಿದರು.

    ಮಾಸ್ಕ್ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆಗಳಿವೆ. ಎಲ್ಲಿ ಅಗತ್ಯವಿದೆ ಅಲ್ಲಿ ಮಾತ್ರ ಮಾಸ್ಕ್ ಬಳಸಬೇಕು. ಹತ್ತಾರು ತಾಸು ನಿರಂತರವಾಗಿ ಮಾಸ್ಕ್ ಬಳಸುವುದು ಸರಿಯಲ್ಲ. ಇದೇ ರೀತಿ ಹೆಚ್ಚಾಗಿ ಮಾಸ್ಕ್ ಬಳಸುತ್ತ ಹೋದರೆ ಎರಡು ವರ್ಷದಲ್ಲಿ ಕರೊನಾಗಿಂತ ಹೆಚ್ಚು ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಹುಟ್ಟುತ್ತವೆ ಎಂದು ಎಚ್ಚರಿಸಿದರು.

    ಪತಂಜಲಿ ಯೋಗ ಪೀಠದ ರಾಜ್ಯ ಪ್ರಭಾರಿ ಭವರಲಾಲ ಆರ್ಯ ಮಾತನಾಡಿ, ಡಾ. ವಿಜಯ ಸಂಕೇಶ್ವರ ಅವರು ಮಾದರಿ ವ್ಯಕ್ತಿ. ರಾಜ್ಯದಲ್ಲಿ ಯೋಗ ಪ್ರಚಾರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

    ಶಿಬಿರಕ್ಕೂ ಮುನ್ನ ಅಗ್ನಿಹೋತ್ರ ಜರುಗಿತು. ಬ್ರಾಹ್ಮಿ ಪ್ರಾಣಾಯಾಮದ ಮೂಲಕ ಶಿಬಿರ ಆರಂಭವಾಯಿತು. ಡಾ. ವಿಜಯ ಸಂಕೇಶ್ವರ ಅವರನ್ನು ಭವರಲಾಲ ಆರ್ಯ ಸನ್ಮಾನಿಸಿದರು.

    ಯೋಗ ಪೀಠದ ಜಿಲ್ಲಾ ಪ್ರಭಾರಿ ಎಂ.ಡಿ ಪಾಟೀಲ, ಯೋಗ ಶಿಕ್ಷಕರಾದ ದೇವಾನಂದ ರತ್ನಾಕರ, ವಾಮನ ನಾಗನೂರ, ವಾಮನ ಶಾನಭಾಗ, ಬಸವರಾಜ ಹರವಿ, ರಕ್ಷಿತಾ ಹರವಿ, ಪೂರ್ಣಿಮಾ ಹರವಿ, ಮಹೇಶ ಕೊಟ್ಟಿಗೇರಿ, ಇತರರು ಪಾಲ್ಗೊಂಡಿದ್ದರು.

    ಯೋಗ ಶಿಕ್ಷಕರಿಗೆ ಕಿವಿಮಾತು
    ಕೆಲ ಯೋಗ ಶಿಕ್ಷಕರು ಬೆಳಗ್ಗೆ 1 ತಾಸು ಯೋಗ ಮಾಡಿ ಬಿಟ್ಟರೆ ಸಾಕು ಎಂದು ಭಾವಿಸಿದ್ದಾರೆ. ಇಡೀ ದಿನ ಮೋಸ, ವಂಚನೆ ಮಾಡಿ ದುಡಿಯದೇ ಹಣ ಗಳಿಸಬೇಕು ಎನ್ನುವರಿದ್ದಾರೆ. ಅಂತಹ ಯೋಚನೆ ಕೈಬಿಡಬೇಕು. ಮಾದರಿ ಜೀವನಶೈಲಿ ರೂಢಿಸಿಕೊಳ್ಳಬೇಕು. ಬಾಬಾ ರಾಮದೇವ ಅವರಂತೆ ಯೋಗದ ಜೊತೆಗೆ ಉತ್ತಮ ವಿಚಾರಗಳನ್ನು ಜನರಿಗೆ ತಿಳಿಸಬೇಕು. ಬಸವಣ್ಣನವರ ಕಾಯಕ ತತ್ವ ಅಳವಡಿಸಿಕೊಳ್ಳಬೇಕು. ನಿರಂತರ ಚಟುವಟಿಕೆಯಿಂದ ಇರಬೇಕು. ಕೊನೇ ಉಸಿರು ಇರುವವರೆಗೂ ನಿವೃತ್ತಿ ಆಗಬಾರದು. ಬಸವಣ್ಣನವರ ‘ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ..’ ಎಂಬ ವಚನವೂ ಯೋಗವೇ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

    ಕರೊನಾಗೆ ಯಾಲಕ್ಕಿ ರಾಮಬಾಣ
    ಪುಣೆಯ ಡಾ. ನಾಯಕ ಎಂಬ ಮಿತ್ರರೊಬ್ಬರು ಯಾಲಕ್ಕಿಯಿಂದ ಕರೊನಾ ರೋಗ ಗುಣಪಡಿಸಿದ್ದಾರೆ. 8 ಯಾಲಕ್ಕಿಯನ್ನು ಬೀಜ ತೆಗೆದು ಕುಟ್ಟಿ ಪುಡಿ ಮಾಡಿ 1 ಗ್ಲಾಸ್ ನೀರಿನಲ್ಲಿ ಬೆರೆಸಿ ಅರ್ಧ ಲೋಟಕ್ಕೆ ಬರುವವರೆಗೆ ಕುದಿಸಬೇಕು. ದಿನಕ್ಕೆ 4 ಬಾರಿ ಯಾಲಕ್ಕಿ ಕಷಾಯವನ್ನು ಕುಡಿಯಬೇಕು. ಯಾಲಕ್ಕಿಯಲ್ಲಿ ಅತ್ಯುತ್ತಮ ಔಷಧ ಗುಣವಿದೆ. ನಾನೂ ಇದನ್ನು ಪರೀಕ್ಷಿಸಿದ್ದು, ಉತ್ತಮ ಫಲಿತಾಂಶ ಬಂದಿದೆ ಎಂದು ಡಾ. ವಿಜಯ ಸಂಕೇಶ್ವರ ತಿಳಿಸಿದರು.

    ಮೋದಿ, ರಾಮದೇವ ದೇವ ಪುರುಷರು
    ಬಾಬಾ ರಾಮದೇವ, ಪ್ರಧಾನಿ ನರೇಂದ್ರ ಮೋದಿ ಅವರಂಥ ದೇವ ಪುರುಷರು ಸಾವಿರ ವರ್ಷಕ್ಕೆ ಒಬ್ಬರು ಹುಟ್ಟಿ ಬರುತ್ತಾರೆ. ನಾವೆಲ್ಲ ಅದೃಷ್ಟವಂತರು. ನಮ್ಮ ಜೀವಿತಾವಧಿಯಲ್ಲಿ ಇಬ್ಬರೂ ಹುಟ್ಟಿ ಬಂದಿದ್ದಾರೆ. ರಾಮದೇವ ಅವರ ಯೋಗ ಪ್ರಚಾರ ಕಾರ್ಯಕ್ಕೆ ಹೆಚ್ಚು ಮಹತ್ವ ಸಿಕ್ಕಿದ್ದು ಮೋದಿ ಮೊದಲ ಬಾರಿ ಪ್ರಧಾನಿಯಾದಾಗ. ದೆಹಲಿಯ ಇಂಡಿಯಾ ಗೇಟ್​ನಲ್ಲಿ ಹತ್ತಾರು ಸಾವಿರ ಜನರ ಮಧ್ಯೆ ಯೋಗ ಶಿಬಿರ ಆಯೋಜಿಸಿದ್ದರ ಪರಿಣಾಮ ಜಗತ್ತಿನ ಎಲ್ಲ ದೇಶಗಳಲ್ಲಿ ಯೋಗ ಕಲಿಕೆ ಆರಂಭವಾಗಿದೆ. ಮೋದಿ ಮತ್ತು ರಾಮದೇವ ಅವರ ನಾಯಕತ್ವದಲ್ಲಿ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯವಿದೆ ಎಂದು ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts