More

    ಯೂನಿಯನ್ ಬ್ಯಾಂಕ್​ಗೆ ಬೀಗ ಜಡಿದು ಪ್ರತಿಭಟನೆ

    ರಾಣೆಬೆನ್ನೂರ: ರೈತರ ಬೆಳೆ ವಿಮೆ ಪರಿಹಾರ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಂಡ ಹಿನ್ನೆಲೆಯಲ್ಲಿ ತಾಲೂಕಿನ ವಿವಿಧ ಗ್ರಾಮಗಳ ರೈತರು ಗುರುವಾರ ನಗರದ ಯೂನಿಯನ್ ಬ್ಯಾಂಕ್​ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

    ಪರಿಹಾರ ಹಣವನ್ನು ಸಾಲದ ಖಾತೆಗೆ ಜಮಾ ಮಾಡಿಕೊಳ್ಳುವ ಮೂಲಕ ರೈತರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ಆರೋಪಿಸಿ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೊಷಣೆ ಕೂಗಿದರು.

    ಪ್ರತಿಭಟನೆ ನೇತೃತ್ವದ ವಹಿಸಿದ್ದ ರವೀಂದ್ರಗೌಡ ಪಾಟೀಲ ಮಾತನಾಡಿ, 430 ರೈತರ 35 ಲಕ್ಷ ರೂ. ಬೆಳೆ ವಿಮೆ ಪರಿಹಾರ ಹಣವನ್ನು ಅವರ ಬೆಳೆ ಸಾಲದ ಖಾತೆಗೆ ಜಮಾ ಮಾಡಿಕೊಂಡಿದ್ದಾರೆ. ಈ ಬಾರಿ ಅತಿವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಯಾವುದೇ ಬೆಳೆ ಸೂಕ್ತ ರೀತಿಯಲ್ಲಿ ಬಂದಿಲ್ಲ. ಇಂಥ ಸಮಯದಲ್ಲಿ ಬೆಳೆ ವಿಮೆ ಹಣ ಕೈ ಹಿಡಿಯಲಿದೆ ಎಂದು ನಂಬಿಕೊಂಡಿದ್ದ ರೈತರಿಗೆ ಬ್ಯಾಂಕ್​ನವರು ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆದ್ದರಿಂದ ಬ್ಯಾಂಕ್​ನವರು ಕೂಡಲೆ ರೈತರಿಗೆ ಬೆಳೆ ವಿಮೆ ಹಣವನ್ನು ವಾಪಸ್ ನೀಡಬೇಕು. ಬೇಕಾದರೆ ಶೇ. 30ರಷ್ಟು ಹಣ ಸಾಲಕ್ಕೆ ಪಡೆದುಕೊಂಡು ಉಳಿದ ಹಣವನ್ನು ಕೊಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

    ವಿಷಯ ತಿಳಿದ ಬ್ಯಾಂಕ್​ನ ಸಹಾಯಕ ಜನರಲ್ ಮ್ಯಾನೇಜರ್ ಶಿವಪುತ್ರಪ್ಪ ದೂರವಾಣಿ ಕರೆ ಮಾಡಿ, ಮುಂದಿನ 8 ದಿನದೊಳಗೆ ರೈತರ ಖಾತೆಗೆ ಬೆಳೆ ವಿಮೆ ಹಣ ಜಮಾ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

    ಪ್ರಮುಖರಾದ ದಿಳ್ಳೆಪ್ಪ ಸತ್ಯಪ್ಪನವರ, ಪ್ರಭು ಸಾರದ, ಮಲ್ಲಪ್ಪ ನಡುವಿನಮನಿ, ಈರಣ್ಣ ಎಳೆಹೊಳೆ, ನಾಗರಾಜ ಸೂರ್ವೆ, ನಾಗರಾಜ ಬೂದನೂರ, ಮಾಲತೇಶ ಮಾಸಣಗಿ, ಪಕ್ಕೀರಪ್ಪ ಅಜ್ಮನಿ, ಗುಡ್ಡನಗೌಡ ಮುದಿಗೌಡ್ರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts