More

    ಯೂಕ್ರೇನ್‌ನಲ್ಲಿ ಬೆಳಗಾವಿಯ ಇಬ್ಬರು ವಿದ್ಯಾರ್ಥಿನಿಯರು

    ಬೆಳಗಾವಿ: ಯೂಕ್ರೇನ್‌ನಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಯರು ಸಿಲುಕಿಕೊಂಡಿದ್ದು, ಅವರನ್ನು ದೇಶಕ್ಕೆ ಕರೆ ತರಲು ಎಲ್ಲ ವ್ಯವಸ್ಥೆ ಮಾಡಲಾಗಿದೆ. ಫೆ. 26ರಂದು ವಿಮಾನದ ಮೂಲಕ ದೇಶಕ್ಕೆ ಬರಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾಹಿತಿ ನೀಡಿದ್ದಾರೆ.

    ಯೂಕ್ರೇನ್‌ನಲ್ಲಿರುವ ಗೋಕಾಕ ತಾಲೂಕಿನ ಘಟಪ್ರಭಾ ಗ್ರಾಮದ ಅಮೋಘಾ ಚೌಗಲಾ, ರಾಯಬಾಗ ಪಟ್ಟಣದ ಪ್ರಿಯಾ ನಿಡಗುಂದಿ ಅವರೊಂದಿಗೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ದೂರವಾಣಿ ಮೂಲಕ ಮಾತನಾಡಿದ್ದು, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಒಬ್ಬರು ಸಿಲುಕಿದ್ದಾರೆ.

    ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಗಮನಕ್ಕೆ ತರಲಾಗಿದೆ. ಯೂಕ್ರೇನ್ ದೇಶದಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳ ಕುರಿತು ಮಾಹಿತಿ ಸಂಗ್ರಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ ಎಂದು ಸಚಿವ ಕಾರಜೋಳ ತಿಳಿಸಿದರು.

    ಯೂಕ್ರೇನ್‌ನಲ್ಲಿ ಯುದ್ಧ ಆರಂಭವಾಗಿರುವ ಹಿನ್ನೆಲೆಯಲ್ಲಿ ಪುತ್ರಿ ಪ್ರಿಯಾಳ ಜತೆ ದೂರವಾಣಿ ಮೂಲಕ ಮಾತನಾಡುತ್ತಿದ್ದೇವೆ. ಎಲ್ಲ ವಿದ್ಯಾರ್ಥಿಗಳೂ ಹಾಸ್ಟೆಲ್‌ನಲ್ಲಿ ಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾಳೆ. 2021ರ ಡಿಸೆಂಬರ್‌ನಲ್ಲಿ ಆಕೆ ಯೂಕ್ರೇನ್‌ಗೆ ಹೋಗಿದ್ದಳು.ಫೆ. 26 ಅಥವಾ 27ಕ್ಕೆ ದೇಶಕ್ಕೆ ಮರುಳುವುದಾಗಿ ಹೇಳಿದ್ದಾಳೆ. ಸದ್ಯ ಅಲ್ಲಿ ಯುದ್ಧ ಆರಂಭವಾಗಿದ್ದರಿಂದ ನಮಗೆ ಭಯವಾಗುತ್ತಿದೆ.
    | ಭಗವಂತ ನಿಡಗುಂದಿ ಪ್ರಿಯಾಳ ತಂದೆ

    ಯೂಕ್ರೇನ್ ದೇಶದಲ್ಲಿರುವ ಪುತ್ರಿ ಅಮೋಘಾಳೊಂದಿಗೆ ಮೊಬೈಲ್ ಮೂಲಕ ಮಾತನಾಡಿದ್ದು, ಅಲ್ಲಿರುವ ಎಲ್ಲ ವಿದ್ಯಾರ್ಥಿಗಳೂ ಸುರಕ್ಷಿತವಾಗಿದ್ದಾರೆ. ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ ಎಂದು ತಿಳಿಸಿದ್ದಾಳೆ. ಸದ್ಯ ಆ ದೇಶದಲ್ಲಿ ವಿಮಾನ ನಿಲ್ದಾಣ ಬಂದ್ ಮಾಡಿದ್ದರಿಂದ ತವರಿಗೆ ಬರಲು ಸಾಧ್ಯವಾಗಿಲ್ಲ. ಫೆ. 26ರಂದು ವಿಮಾನ ಟಿಕೆಟ್ ಬುಕಿಂಗ್ ಮಾಡಿದ್ದಾಳೆ. ಸರ್ಕಾರದ ಪರವಾಗಿ ಜಿಲ್ಲಾಧಿಕಾರಿಗಳು ದೂರವಾಣಿ ಮೂಲಕ ಮಾತನಾಡಿ ಪುತ್ರಿಯನ್ನು ಕರೆದುಕೊಂಡು ಬರಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
    | ಧನಂಜಯ ಚೌಗುಲೆ ಅಮೋಘಾಳ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts