More

    ಯಲ್ಲಮ್ಮಗುಡ್ಡದಲ್ಲಿ ಭರತ ಹುಣ್ಣಿಮೆ ಸಂಭ್ರಮ

    ಉಗರಗೋಳ: ಕರೊನಾ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಕಳೆಗುಂದಿದ್ದ ಭರತ (ಗುಡಿ)ಹುಣ್ಣಿಮೆ ಜಾತ್ರೆಗೆ ಈ ಬಾರಿ ವಿಶೇಷ ಕಳೆ ಬಂದಿದೆ. ಯಲ್ಲಮ್ಮನಗುಡ್ಡದಲ್ಲಿ ಹುಣ್ಣಿಮೆ ಅಂಗವಾಗಿ ಫೆ.5ರಂದು ಬೃಹತ್ ಜಾತ್ರೆ ಜರುಗಲಿದ್ದು, 20 ಲಕ್ಷಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಿದೆ. ರಾಜ್ಯದಲ್ಲೇ ನಡೆಯುವ ದೊಡ್ಡ ಜಾತ್ರೆಗೆ ಎರಡು ವರ್ಷಗಳ ನಂತರ ಏಳುಕೊಳ್ಳದ ನಾಡು ಸಾಕ್ಷಿಯಾಗಲಿದೆ.

    ಯಲ್ಲಮ್ಮನ ಸನ್ನಿಧಿಗೆ ಸಂಪರ್ಕ ಕಲ್ಪಿಸುವ ಮಾರ್ಗಗಳ ಸವದತ್ತಿ, ಉಗರಗೋಳ, ಜೋಗುಳಬಾವಿ ಮಾರ್ಗಗಳಲ್ಲಿ ಜನಸಾಗರವೇ ಕಣ್ಣಿಗೆ ಬೀಳುತ್ತಿದೆ. ಮುನವಳ್ಳಿಯಿಂದ ಜೋಗುಳಬಾವಿ ಮಾರ್ಗದಲ್ಲಿ ಸಾಲು ಸಾಲಾಗಿ ವಾಹನಗಳು ಬರುತ್ತಿವೆ. ಅಲಂಕೃತ ಚಕ್ಕಡಿಬಂಡಿಗಳಲ್ಲಿ ಹಲವು ಭಕ್ತರು ಯಲ್ಲಮ್ಮನಗುಡ್ಡದತ್ತ ಹೆಜ್ಜೆ ಹಾಕುತ್ತಿದ್ದರೆ, ಇನ್ನೂ ಕೆಲವರು ಸೈಕಲ್, ಟ್ರ್ಯಾಕ್ಟರ್‌ಗಳಲ್ಲಿ ಗುಡ್ಡದತ್ತ ಆಗಮಿಸುತ್ತಿರುವ ದೃಶ್ಯ ಸಾಮಾನ್ಯವಾಗಿವೆ.

    ಹಸಿರು ಬಳೆ ಮಾರಾಟ ಜೋರು: ಭಾರತ ಹುಣ್ಣಿಮೆಯಂದು ಆದಿಶಕ್ತಿ ಶ್ರೀ ಯಲ್ಲಮ್ಮ ಮುತ್ತೈದೆಯಾಗುವಳು. ಹೀಗಾಗಿ ಮುತ್ತೈದೆತನದ ಸಂಕೇತವಾದ ಹಸಿರು ಬಳೆ, ಮಂಗಳಸೂತ್ರ, ಕಾಲುಂಗುರವನ್ನು ಪ್ರತಿ ಮಹಿಳೆ ಧರಿಸುತ್ತಾಳೆ. ಈ ಹುಣ್ಣಿಮೆ ಅವಧಿಯಲ್ಲಿ ಗುಡ್ಡದಲ್ಲಿ ಕೋಟ್ಯಂತರ ರೂ. ಬಳೆ ವಹಿವಾಟು ನಡೆಯುತ್ತದೆ. ಕೊಪ್ಪಳ, ಗದಗ, ವಿಜಯಪುರ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕವೂ ಭಕ್ತರು ಬರುತ್ತಾರೆ.

    ಸೂಕ್ತ ಭದ್ರತೆ: ಭರತ ಹುಣ್ಣಿಮೆ ಜಾತ್ರೆಯಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಟ್ರಾಫಿಕ್ ನಿಯಂತ್ರಣ ಹಾಗೂ ವಾಹನಗಳ ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಸರದಿ ಸಾಲಿನಲ್ಲಿ ನಿಂತು, ದೇವಿ ದರ್ಶನ ಪಡೆದು ಹೊರಬರಲು ವ್ಯವಸ್ಥೆ ಮಾಡಲಾಗಿದ್ದು, ಎಣ್ಣೆ ಹೊಂಡದಲ್ಲೂ ನೂಕುನುಗ್ಗಲು ಉಂಟಾಗದಂತೆ ಕ್ರಮ ವಹಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಭಕ್ತರು ಸಹಕರಿಸಬೇಕು. ಜಾತ್ರೆಯಲ್ಲಿ ತಮ್ಮ ಮಕ್ಕಳು ಹಾಗೂ ಮೌಲ್ಯಯುತ ವಸ್ತುಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಎಸ್‌ಪಿ ಡಾ.ಸಂಜೀವ ಪಾಟೀಲ ತಿಳಿಸಿದರು.

    500ಕ್ಕೂ ಅಧಿಕ ಬಸ್ ಸಂಚಾರ

    ಭರತ ಹುಣ್ಣಿಮೆ ಜಾತ್ರೆಗೆ ದೇಶದ ನಾನಾ ಭಾಗಗಳಿಂದ ಭಕ್ತಸಮೂಹ ಬರುತ್ತದೆ. ಅವರಿಗೆ ಅನುಕೂಲವಾಗಲೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಬಸ್ ಸೌಕರ್ಯ ಕಲ್ಪಿಸಿದೆ. ಯಲ್ಲಮ್ಮನಗುಡ್ಡಕ್ಕೆ ಪ್ರಯಾಣಿಸುವ ಭಕ್ತರಿಗೆ ಅನುಕೂಲವಾಗಲೆಂದು ಬೆಳಗಾವಿ ಹಾಗೂ ಚಿಕ್ಕೋಡಿ ಘಟಕಗಳಿಂದ ವಿಶೇಷ ಬಸ್ ಸೌಕರ್ಯ ಮಾಡಿದ್ದೇವೆ. ಜಾತ್ರೆಯ ಅವಧಿಯಲ್ಲಿ 500ಕ್ಕೂ ಅಧಿಕ ಬಸ್ ಬೆಳಗಾವಿ, ಚಿಕ್ಕೋಡಿ ಘಟಕಗಳಿಂದ ಕಾರ್ಯಾಚರಣೆ ನಡೆಸಲಿವೆ ಎಂದು ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗದ ಸಂಚಾರ ನಿಯಂತ್ರಣಾಧಿಕಾರಿ ಕೆ.ಕೆ.ಲಮಾಣಿ ತಿಳಿಸಿದ್ದಾರೆ.

    | ಮಲ್ಲನಗೌಡ ಪಾಟೀಲ ಉಗರಗೋಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts