More

    ಮೋದಿ, ಯಡಿಯೂರಪ್ಪ ರೈತ ಹಿತ ಚಿಂತಕರು

    ಕೋಲಾರ: ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ರೈತರ ಹಿತ ರಕ್ಷಣೆಗೆ ಪ್ರಗತಿಪರ ಕಾರ್ಯಕ್ರಮ ಜಾರಿಗೆ ತಂದಿದ್ದರೂ ಕಾಂಗ್ರೆಸ್ ಇನ್ನಿತರ ವಿರೋಧ ಪಕ್ಷಗಳು ಅನಗತ್ಯ ಪ್ರತಿಭಟನೆ ಮೂಲಕ ಜನರ ದಿಕ್ಕು ತಪ್ಪಿಸಲು ಯತ್ನಿಸುತ್ತಿವೆ ಎಂದು ಮಾಜಿ ಎಂಎಲ್‌ಸಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಆರೋಪಿಸಿದರು.

    ನಗರದ ಹೊರವಲಯದ ಕಲ್ಯಾಣ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿ, ರೈತರಿಗೆ ಅನ್ಯಾಯವಾಗಬಾರದೆಂಬ ಉದ್ದೇಶದಿಂದ ಕೃಷಿ, ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದು ಕ್ರಾಂತಿಕಾರಿ ತೀರ್ಮಾನಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ತೆಗೆದುಕೊಂಡಿವೆ, ವಿರೋಧ ಪಕ್ಷಗಳು ಬಿಜೆಪಿಗೆ ಜನರಿಂದ ಸಿಗುತ್ತಿರುವ ಅಭೂತಪೂರ್ವ ಬೆಂಬಲ ಮತ್ತು ಸಹಕಾರ ಸಹಿಸಿಕೊಳ್ಳದೆ ರೈತರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದು ಪಕ್ಷದ ಪದಾಧಿಕಾರಿಗಳು ಹಳ್ಳಿ ಹಳ್ಳಿಗೆ ತೆರಳಿ ಅಪ್ರಚಾರ ಮಾಡುತ್ತಿರುವವರ ಬಣ್ಣ ಬಯಲು ಮಾಡಬೇಕು. ಎಂಎಲ್‌ಸಿ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು, ಗ್ರಾಪಂ ಚುನಾವಣೆಗೆ ಸಜ್ಜಾಗಬೇಕು ಎಂದರು.

    ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಆಗ್ನೇಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಲು ಒಗ್ಗಟ್ಟಿನಿಂದ ಕೆಲಸ ಮಾಡೋಣ ಎಂದರು.

    ಕಾಂಗ್ರೆಸ್ಸಿಗರು ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿದ್ದಾರೆ, ಆದರೆ ಜನ ದಡ್ಡರಲ್ಲ, ಆಲೂಗಡ್ಡೆಯನ್ನು ಚಿನ್ನ ಎಂದು ಹೇಳುವ ರಾಹುಲ್ ಪ್ರಧಾನಿ ಆಗಲು ಅರ್ಹರಲ್ಲ ಎಂದು ಟೀಕಿಸಿದರು.

    ಎಮ್ಮೆಲ್ಸಿ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಮೆಕಾಲೆ ಪದ್ಧತಿಯ ಶಿಕ್ಷಣ ಗುಲಾಮಗಿರಿಯ ಸಂಕೇತ. ಪರಿಪೂರ್ಣತೆ ಮತ್ತು ವಿಕಸನಕ್ಕೆ ಶಿಕ್ಷಣ ಅಗತ್ಯವೆಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ಮೋದಿ ಚಾಚೂ ತಪ್ಪದೆ ಅನುಷ್ಠಾನಕ್ಕೆ ತರಲು ಪ್ರಧಾನಿ ಮೋದಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಆಸಕ್ತಿ ತೋರಿದ್ದಾರೆ. ಆದರೆ ಕಾಂಗ್ರೆಸ್ ಮತ್ತು ಇನ್ನಿತರ ಪ್ರತಿಪಕ್ಷಗಳು ದುರುದ್ದೇಶದಿಂದ ವಿರೋಧ ವ್ಯಕ್ತಪಡಿಸುತ್ತಿವೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಜಿಲ್ಲಾ ಉಸ್ತುವಾರಿ ಜಯಚಂದ್ರರೆಡ್ಡಿ,ಸಹ ಪ್ರಭಾರಿ ಪುಷ್ಪಶಿವಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ನಾರಾಯಣಕುಟ್ಟಿ, ಕೃಷ್ಣಮೂರ್ತಿ, ಗುರುನಾಥರೆಡ್ಡಿ, ಜಿಲ್ಲಾ ಮಾಧ್ಯಮ ಪ್ರಮುಖ್ ಎಸ್.ಬಿ.ಮುನಿವೆಂಕಟಪ್ಪ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts