More

    ಮೊದಲ ದಿನ ಗಾಬರಿಯಾಗಿದ್ದು ನಿಜ

    ಹುಬ್ಬಳ್ಳಿ: ನನಗೆ ಕರೊನಾ ಸೋಂಕು ಇರುವುದು ದೃಢಪಟ್ಟ ಮೊದಲ ದಿನ ನಿಜವಾಗಿಯೂ ಗಾಬರಿಯಾಗಿತ್ತು. ಆದರೆ, ಕಿಮ್ಸ್​ನಲ್ಲಿನ ಉತ್ತಮ ಚಿಕಿತ್ಸೆ, ವೈದ್ಯರ ಸಲಹೆ, ಮಾರ್ಗದರ್ಶನದಿಂದಾಗಿ ಸೋಂಕು ಹೊರಗಿನ ಜನರು ತಿಳಿದುಕೊಂಡಷ್ಟು ಭಯಾನಕವಲ್ಲ ಎಂಬ ಭಾವನೆ ಮೂಡಿತು ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.

    ಸೋಂಕು ಗೆದ್ದು ಕಿಮ್ಸ್​ನಿಂದ ಭಾನುವಾರ ಬಿಡುಗಡೆ ಹೊಂದಿದ ಬಳಿಕ ವಿಜಯವಾಣಿ ಜತೆ ಅವರು ಮಾತನಾಡಿದರು. ಅಬ್ಬಯ್ಯ ಅವರ ಜತೆ ಪತ್ನಿ ಸೇರಿ ನಾಲ್ವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 8 ಜನ ಕಿಮ್ಸ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇಬ್ಬರು ಸೋಮವಾರ ಬಿಡುಗಡೆಯಾಗುವ ಸಾಧ್ಯತೆಗಳಿವೆ.

    ಕರೊನಾ ಸೋಂಕು ಜನರು ಭಾವಿಸಿರುವಂತೆ ಮಹಾಮಾರಿಯಲ್ಲ. ಹಾಗಂಥ ಅದನ್ನು ನಿರ್ಲಕ್ಷಿಸುವುದೂ ಸರಿಯಲ್ಲ. ಜನರಲ್ಲಿನ ಮಾಹಿತಿ ಕೊರತೆ ಹಾಗೂ ತಪ್ಪು ತಿಳಿವಳಿಕೆಯಿಂದಾಗಿ ಇದೊಂದು ಭಯಾನಕ ಕಾಯಿಲೆಯೆಂದು ಎಲ್ಲೆಡೆ ಬಿಂಬಿತವಾಗಿದೆ. ಕಡ್ಡಾಯ ಮಾಸ್ಕ್, ಸ್ಯಾನಿಟೈಸರ್ ಬಳಕೆ ಹಾಗೂ ಪರಸ್ಪರ ಅಂತರ ಪಾಲನೆ ಮೂಲಕ ಸಮುದಾಯದಲ್ಲಿ ಸೋಂಕು ಹರಡುವಿಕೆಯನ್ನು ತಪ್ಪಿಸಬಹುದಾಗಿದೆ ಎಂದು ಅಬ್ಬಯ್ಯ ಹೇಳಿದರು.

    ನನ್ನೊಂದಿಗೆ ಕಿಮ್ಸ್ಗೆ ದಾಖಲಾಗಿದ್ದ ಅನೇಕ ಜನರಲ್ಲಿ ಯಾವ ಆತಂಕವೂ ಇರಲಿಲ್ಲ. ಆದರೆ, ಹೊರಗಿನ ಜನರಲ್ಲಿ ಯಾವ ಮಟ್ಟಿಗಿನ ಆತಂಕವಿದೆಯೆಂದರೆ, ನಮ್ಮ ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಗೂ ಗನ್​ವ್ಯಾನಗಳಿಗೆ ಸೋಂಕು ತಗುಲಿಲ್ಲವಾದರೂ ಅವರಿಗೆ ಕೆಲವು ಬಂಕ್ ಸಿಬ್ಬಂದಿ ಪೆಟ್ರೋಲ್ ಹಾಕಲು ಹಿಂಜರಿದಿರುವುದು ಸಾಕ್ಷಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

    ಆರಂಭದಲ್ಲಿ ಕಿಮ್ಸ್ನಲ್ಲಿ ಬೆಡ್ ಖಾಲಿಯಿಲ್ಲದಾಗ ಸೋಂಕು ತಗುಲಿದ ನನ್ನ ಕುಟುಂಬದ ಒಬ್ಬರನ್ನು ಸುಚಿರಾಯು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಜಿಲ್ಲಾಡಳಿತದ ನಿರ್ದೇಶನವಿದ್ದರೂ ಅಲ್ಲಿನ ವೈದ್ಯರು 2 ದಿನ ಕಳೆದರೂ ಚಿಕಿತ್ಸೆ ನೀಡಲಿಲ್ಲ. ಅಲ್ಲದೇ, ದುಬಾರಿ ಬಿಲ್ ನೀಡಿದ್ದರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ರ್ಚಚಿಸಿ ಚಿಕಿತ್ಸೆ ನಿರಾಕರಿಸುವ ಹಾಗೂ ನಿರ್ಲಕ್ಷ್ಯ ತೋರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದೇನೆ. ಕಿಮ್ಸ್ನಲ್ಲಿ ಬೆಡ್​ಗಳು ಲಭ್ಯವಾದಾಗ ಪುನಃ ಕುಟುಂಬ ಸದಸ್ಯರನ್ನು ಕಿಮ್ಸ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು ಎಂದು ತಿಳಿಸಿದರು.

    1 ತಿಂಗಳ ಅಂತರ ಕಾಯ್ದುಕೊಳ್ಳುತ್ತೇನೆ

    15 ದಿನಗಳ ಕಾಲ ಹೋಮ್ ಕ್ವಾರಂಟೈನ್​ನಲ್ಲಿ ಇರುವಂತೆ ವೈದ್ಯರು ಸೂಚಿಸಿದ್ದಾರೆ. ನಾನು 1 ತಿಂಗಳು ಕಾಲ ಜನರಿಂದ ಅಂತರ ಕಾಯ್ದುಕೊಳ್ಳಲು ನಿರ್ಧರಿಸಿದ್ದೇನೆ. ಈ ಅವಧಿಯಲ್ಲಿ ಫೋನ್ ಕರೆಯ ಮೇರೆಗೆ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಪ್ರಸಾದ ಅಬ್ಬಯ್ಯ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts