More

    ಮೈಸೂರು: ಬಾಲಕನನ್ನು ಗಾಯಗೊಳಿಸಿದ್ದ ಚಿರತೆ ಸೆರೆ

    ಮೈಸೂರು: 12 ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ್ದ ಚಿರತೆ ಬೋನಿನಲ್ಲಿ  ಸೆರೆಯಾಗಿದ್ದು, ಆತಂಕಗೊಂಡಿದ್ದ ಕಡಕೊಳ, ಬೀರೇಗೌಡನಹುಂಡಿ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.
    ಮೈಸೂರು ತಾಲೂಕು ಕಡಕೊಳ ಸಮೀಪದ ಬೀರೇಗೌಡನಹುಂಡಿಯ ನಿವಾಸಿ ರವಿ ಅವರ ಪುತ್ರ 12 ವರ್ಷ ನಂದನ್ ಮೇಲೆ ಫೆ.20ರ ಸಂಜೆ 6.30ರಲ್ಲಿ ದಾಳಿ ನಡೆಸಿ ಹೊತ್ತೊಯ್ಯುವ ಪ್ರಯತ್ನ ಮಾಡಿತ್ತು. ಆಗ ಓಡಿ ಬಂದ ತಂದೆ ಮಗನ ಕಾಲು ಹಿಡಿದು ಚಿರತೆ ಬಾಯಿಂದ ರಕ್ಷಿಸಿದ್ದರು. ಆದರೂ ಚಿರತೆ ಬಾಲಕನನ್ನೇ 3-4 ನಿಮಿಷ ದಿಟ್ಟಿಸಿ ನೋಡುತ್ತಾ ಹೊಂಚು ಹಾಕುತ್ತಿತ್ತು. ಬಳಿಕ ಹೆಚ್ಚು ಜನರು ಸೇರಿದಾಗ ಪರಾರಿಯಾಗಿತ್ತು.
    ಗಾಯಗೊಂಡಿದ್ದ ಬಾಲಕನನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ಘಟನೆಯ ಪರಿಣಾಮ ಕಡಕೊಳ, ಬೀರೇಗೌಡನಹುಂಡಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಸೆಸ್ಕ್‌ಗೆ ಸೇರಿದ ಜಾಗದಲ್ಲಿ ದಟ್ಟ ಪೊದೆ ಬೆಳೆದಿರುವುದೇ ಚಿರತೆ ಹಾವಳಿ ಹೆಚ್ಚಾಗಲು ಕಾರಣ ಎಂದು ಆರೋಪಿಸಿದ್ದರು.
    ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಸ್ಥಳೀಯರ ಕೋರಿಕೆ ಮೇರೆಗೆ ಎರಡು ಕಡೆ ಬೋನು ಇಟ್ಟು ಚಿರತೆ ಸೆರೆಗೆ ಕ್ರಮ ಕೈಗೊಂಡಿತ್ತು. ಬಾಲಕನ ಮೇಲೆ ದಾಳಿ ನಡೆಸಿದ್ದ ತೋಟದಲ್ಲಿ ಒಂದು, ಮತ್ತೊಂದು ಜಮೀನಿನಲ್ಲಿ ಇನ್ನೊಂದು ಬೋನು ಇಡಲಾಗಿತ್ತು. ಸೋಮವಾರ ಮಧ್ಯರಾತ್ರಿ ಬಾಲಕನ ಮನೆ ಸಮೀಪ ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವುದು ಸ್ಥಳೀಯರಲ್ಲಿ ಸಮಾಧಾನ ಮೂಡಿಸಿದೆ.
    ಬಂಡೀಪುರಕ್ಕೆ ರವಾನೆ:
    ‘ದಾಳಿ ನಡೆಸಿದ್ದು ಇದೇ ಚಿರತೆ’ ಎಂದು ಬಾಲಕ ನಂದನ್ ಹಾಗೂ ಆತನ ತಂದೆ ಗುರುತಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆರ್‌ಎಫ್‌ಒ ಗಿರೀಶ್, ಡಿಆರ್‌ಎಫ್‌ಒ ಮೋಹನ್ ಕುಮಾರ್ ಹಾಗೂ ಸಿಬ್ಬಂದಿ ತೆರಳಿ ಚಿರತೆಯನ್ನು ಬಂಡೀಪುರ ಅಭಯಾರಣ್ಯಕ್ಕೆ ಕೊಂಡೊಯ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts