More

    ಮೈತ್ರಿ ಸರ್ಕಾರ ಉಳಿಸಲು ಅವರೇ ಕೈಚೆಲ್ಲಿದರು

    ಅರಸೀಕೆರೆ: ಕೊಟ್ಟ ಕುದುರೆಯನ್ನೇರಲರಿಯದವನು ಧೀರನೂ ಅಲ್ಲ, ಶೂರನೂ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದರು.

    ತಾಲೂಕಿನ ಗಂಡಸಿ ಹ್ಯಾಂಡ್‌ಪೋಸ್ಟ್ ಗ್ರಾಮದಲ್ಲಿ ಪಕ್ಷದ ವತಿಯಿಂದ ಶನಿವಾರ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿ, ಜೆಡಿಎಸ್, ಕಾಂಗ್ರೆಸ್ ಮೈತ್ರಿ ಸರ್ಕಾರ ಉಳಿಸಲು ಮುಂಬೈಗೆ ತೆರಳಿ ಇನ್ನಿಲ್ಲದ ಪ್ರಯತ್ನ ನಡೆಸಿದೆವು. ಆದರೆ ಅಧಿಕಾರ ಉಳಿಸಿಕೊಳ್ಳಬೇಕಿದ್ದ ವ್ಯಕ್ತಿಯೇ ಕೈಚೆಲ್ಲಿ ಕುಳಿತರು. ಇದು ಅಲ್ಲಮ ಪ್ರಭುವಿನ ‘ಕೊಟ್ಟ ಕುದುರೆಯನೇರಲರಿಯದವನು ಧೀರನೂ ಅಲ್ಲ, ಶೂರನೂ ಅಲ್ಲ’ ಎನ್ನುವ ವಚನ ನೆನಪಿಸುತ್ತಿದೆ ಎಂದು ಕುಟುಕಿದರು.

    ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್ ಭದ್ರಕೋಟೆಯಂತಿದ್ದ ಜಿಲ್ಲೆಯಲ್ಲಿ ದಿ.ಎಚ್.ಸಿ. ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡ, ಬಿ.ಶಿವರಾಮು, ದೊಡ್ಡೇಗೌಡ ಸೇರಿ ಹಲವರು ಶಾಸಕರಾಗಿ ಆಯ್ಕೆಗೊಂಡು ಉತ್ತಮ ಕೆಲಸ ಮಾಡಿದ್ದಾರೆ. ಇದೀಗ ಇತಿಹಾಸ ಮರುಕಳಿಸಲಿದ್ದು, ಮತ್ತೊಮ್ಮೆ ಎಲ್ಲ ಏಳು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಗೆಲುವು ಸಾಧಿಸಿ ಮೂರನೇ ಮಹಡಿ ಪ್ರವೇಶಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಈಗಾಗಲೇ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ವಸತಿ ಯೋಜನೆಯಡಿ ಮನೆ ವಿತರಣೆ, ಹತ್ತು ಕೆಜಿ ಅನ್ನಭಾಗ್ಯ ಅಕ್ಕಿ ಹೆಚ್ಚಳ, 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರ ಪ್ರಯಾಣಕ್ಕೆ ಉಚಿತ ಬಸ್‌ಪಾಸ್, ಗೃಹಲಕ್ಷ್ಮೀ ಯೋಜನೆಯಡಿ ಎರಡು ಸಾವಿರ ಮಾಸಿಕ ಧನ, ಯುವಕರಿಗೆ ಉದ್ಯೋಗ ಸೇರಿ ಎಲ್ಲ ಗ್ಯಾರಂಟಿಗಳನ್ನು ಈಡೇರಿಸುವ ಭರವಸೆ ನೀಡಿದ್ದೇವೆ. ನುಡಿದಂತೆ ನಡೆಯುವ ಬಯಕೆ ನಮ್ಮದಾಗಿದ್ದು, ಏಳು ಕ್ಷೇತ್ರಗಳಿಗೆ ತೆರಳಿ ಅಭ್ಯರ್ಥಿಗಳ ಪರ ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಂಡು ನಂಬಿಕೆ ಉಳಿಸಿಕೊಳ್ಳಬೇಕು ಎಂದು ಉತ್ಸಾಹ ತುಂಬಿದರು.

    ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲ ಮಾಡಲು ಮುಂದಾಗಿದ್ದ ವೇಳೆ ಮಾಜಿ ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರಿಗೂ ಗಾಳ ಹಾಕಿದ್ದರೂ ಅದು ಪ್ರಯೋಜನವಾಗಲಿಲ್ಲ. ಮೇ 10ರಂದು ರಾಜ್ಯದ ಇತಿಹಾಸ ಬರೆಯವ ಕಾಲ ಹತ್ತಿರವಾಗಿದ್ದು, ಎಚ್ಚರ ತಪ್ಪಬಾರದು. ಪಕ್ಷ ಬಿಟ್ಟು ಹೊರಬಂದರೂ ರಾಜಕೀಯ ವಿರೋಧಿಗಳನ್ನು ಟೀಕಿಸಲು ಹೊರಟಿರುವ ಶಿವಲಿಂಗೇಗೌಡನಿಗೆ ಬುದ್ದಿಯಿಲ್ಲ. ಹೆಣ್ಣುಮಕ್ಕಳ ಖಾತೆಗೆ ಹಣ ಹಾಕಲಿದ್ದು, ಗಂಡಸರಿಗೆ ಇದು ಅನ್ವಯಿಸುವುದಿಲ್ಲ. ಹುಷಾರು ಅಕೌಂಟ್ ನಂಬರ್ ಕೊಡಬೇಡಿ ಎಲ್ಲ ಎಣ್ಣೆ ಅಂಗಡಿಗೆ ಹಣ ಹೋಗುತ್ತದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.
    ಮಾಜಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಹಿಂದುಳಿದ ವರ್ಗಕ್ಕೆ ವಿಧಾನಪರಿಷತ್ ಸ್ಥಾನ ನೀಡುವಂತೆ ಕೇಳಿಕೊಂಡಿದ್ದೆ. ಆದರೆ, ಇದಕ್ಕೆ ಸ್ಪಂದಿಸದ ಎಚ್.ಡಿ.ರೇವಣ್ಣ ತಮ್ಮ ಪುತ್ರನಿಗೆ ಅವಕಾಶ ಮಾಡಿಕೊಟ್ಟರು. ಜತೆಗೆ ಸಾರ್ವಜನಿಕ ಸಭೆಯಲ್ಲಿ ನನಗೆ ಮುಜುಗರವಾಗುವಂತೆ ಮಾತನಾಡಿದ್ದರಲ್ಲದೇ ಟಿಕೆಟ್ ನೀಡುವ ಅನುಮಾನ ಎದುರಾಗಿದ್ದರಿಂದ ಜೆಡಿಎಸ್ ತೊರೆಯುವ ಸನ್ನಿವೇಶ ನಿರ್ಮಾಣಗೊಂಡಿತು. ಪದೇ ಪದೆ ನೀವು ನನ್ನನ್ನು ಕೆಣಕಬೇಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದರು.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಎಚ್. ಲಕ್ಷ್ಮಣ್, ಮಹಿಳಾ ಘಟಕದ ಅಧ್ಯಕ್ಷೆ ತಾರಾಚಂದನ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಣಾವರ ಶ್ರೀನಿವಾಸ್, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋಬಾಬು, ಮುಖಂಡ ಜಿ.ಬಿ.ಶಶಿಧರ್, ಪಟೇಲ್ ಶಿವಪ್ಪ, ನಗರಸಭೆ ಸದಸ್ಯ ಎಂ.ಆರ್. ವೆಂಕಟಮುನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts