More

    ಮೇಲ್ವರ್ಗ ಎಂಬ ಹೊಗಳಿಕೆಯಿಂದ ಪ್ರಗತಿ ಅಸಾಧ್ಯ: ಅಶೋಕ್ ಹಾರನಹಳ್ಳಿ

    ಸೊರಬ: ಬದಲಾದ ಕಾಲಘಟದಲ್ಲಿ ಬ್ರಾಹ್ಮಣ ಸಮಾಜ ಆತ್ಮಾವಲೋಕನ ಮಾಡಿಕೊಂಡು, ಸಾಮಾಜಿಕ ಸ್ಥಿತಿಗತಿಗಳನ್ನು ಯೋಚಿಸಿ ಸಂಘಟನೆಯನ್ನು ಬಲ ಪಡಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಅಶೋಕ್ ಹಾರನಹಳ್ಳಿ ತಿಳಿಸಿದರು.
    ಭಾನುವಾರ ಗಿರಿಜಾ ಶಂಕರ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಬ್ರಾಹ್ಮಣ ಸಮಾವೇಶದ ಉದ್ಘಾಟನೆ ನೇರವೇರಿಸಿ ಅವರು ಮಾತನಾಡಿದರು.
    ಬ್ರಾಹ್ಮಣರು ಸಂಘಟನೆಗೊಳ್ಳುವುದರಿಂದ ಸಮಾಜದಲ್ಲಿ ದೂರೆಯಬಹುದಾದ ಅಧಿಕಾರ ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಬಹುದಾಗಿದೆ. ಕೇವಲ ಮೇಲ್ವರ್ಗ ಎಂಬ ಹೊಗಳಿಕೆಗೆ ತೃಪ್ತಿಪಟ್ಟುಕೊಂಡರೆ ಬ್ರಾಹ್ಮಣ ಸಮಾಜ ಮುಂದೆ ಬರಲು ಸಾಧ್ಯವಿಲ್ಲ. ನಾವು ಈಗಾಗಲೇ ರಾಜ್ಯ ಸರ್ಕಾರಕ್ಕೆ ಸಂವಿಧಾನ ಬದ್ಧ ಶೇ.10 ಮೀಸಲಾತಿಯನ್ನು ಆರ್ಥಿಕವಾಗಿ ಹಿಂದುಳಿದ ಹಾಗೂ ಬಡವರಿಗೆ ನೀಡುವಂತೆ ಕೋರಿಕೊಂಡರೂ ಸರ್ಕಾರ ಅದಕ್ಕೆ ಮನ್ನಣೆ ನೀಡಿಲ್ಲ. ನಮಗೆ ಈಗ ಉಳಿದಿರುವುದು ಕಾನೂನಿನ ಮೊರೆ ಮಾತ್ರ ಎಂದರು.
    ಬ್ರಾಹ್ಮಣರು ಹೆಚ್ಚಾಗಿ ಇರುವ ಕಡೆ ಚುನಾವಣೆಗೆ ಸ್ಪರ್ಧಿಸಲು ರಾಜಕೀಯ ಪಕ್ಷಗಳು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಬೇಕು. ಈ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಬೇಕಿದೆ. ರಾಜಕೀಯದಲ್ಲಿ ನಮಗೆ ಪ್ರಾತಿನಿಧ್ಯ ಇಲ್ಲ ಎಂದರೆ ನಮ್ಮನ್ನು ಯಾರು ಪರಿಗಣಿಸುವುದಿಲ್ಲ ಎಂಬುದನ್ನು ಮೊದಲು ಅರಿಯಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತರುವುದರ ಮೂಲಕ ವಿದ್ಯಾವಂತರಿಗೆ ಸೂಕ್ತ ಅವಕಾಶ ದೂರೆಯುವಂತೆ ಆಗಬೇಕಿದೆ. ಎಲ್ಲರಿಗೂ ಒಳ್ಳೆಯದಾಗಲಿ ಎನ್ನುವ ನಮ್ಮ ಸಮಾಜ ನಮಗೂ ಒಳ್ಳೆಯದಾಗಲಿ ಎನ್ನುವುದನ್ನು ತಿಳಿದುಕೊಳ್ಳಬೇಕಿದೆ ಎಂದರು.
    ಸಹಕಾರಿ ಧುರೀಣ ಎಚ್.ಎಸ್.ಮಂಜಪ್ಪ ಮಾತನಾಡಿ, ಕಳೆದ 60 ವರ್ಷಗಳಿಂದೀಚೆಗೆ ಸಂಘಟನೆಯಲ್ಲಿ ಹಲವು ಏಳುಬೀಳುಗಳನ್ನು ಕಂಡ ನಮ್ಮ ತಾಲೂಕಿನಲ್ಲಿ ಇದೇ ಮೊಟ್ಟಮೊದಲಿಗೆ ಸಂಘಟನೆಯ ಸಾಧನೆ ಎದ್ದು ಕಾಣುತ್ತಿದೆ. ತಾಲೂಕಿನಲ್ಲಿ 1500 ಬ್ರಾಹ್ಮಣ ಕುಟುಂಬಗಳಿವೆ. ಮೊದಲು ಆನವಟ್ಟಿಯ ಬ್ರಾಹ್ಮಣ ಸಮಾಜ ಸ್ಥಾಪನೆಗೊಂಡು ಬಹಳಷ್ಟು ಸಂಘಟನೆ ಮಾಡಿತ್ತು. ಅಖಿಲ ಭಾರತ ಬ್ರಾಹ್ಮಣ ಸಮಾಜ ಸ್ಥಾಪನೆಗೊಂಡ ಬಳಿಕ ಹಲವು ಸಂಘಟನೆಯನ್ನು ಮುಂದುವರೆಸಿಕೊಂಡು ಬರುವುದರ ಮೂಲಕ ಸಮಾಜದ ಉನ್ನತಿಗೆ ತಮ್ಮದೇ ಆದ ಸೇವೆಗಳನ್ನು ಸಲ್ಲಿಸಿವೆ. ಆದರೆ ಇದ್ಯಾವುದು ಕೂಡಾ ದೊಡ್ಡಮಟ್ಟದಲ್ಲಿ ಆಗಿರಲಿಲ್ಲ. ಇನ್ನಾದರೂ ಸಮಾಜದ ಏಳಿಗೆಗೆ ಎಲ್ಲರೂ ಸಂಘಟನೆಗೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts