More

    ಮೇಯರ್, ಉಪಮೇಯರ್ ಆಯ್ಕೆಗೆ ಆಗ್ರಹ

    ಬೆಳಗಾವಿ: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಆಯ್ಕೆ ಚುನಾವಣೆ ನಡೆಸುವಂತೆ ಆಗ್ರಹಿಸಿ ಸೋಮವಾರ ಪಾಲಿಕೆಯ ಕಾಂಗ್ರೆಸ್, ಪಕ್ಷೇತರ ಸದಸ್ಯರು ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

    ಪಾಲಿಕೆಯ ಸದಸ್ಯರು ಆಯ್ಕೆಗೊಂಡು ಒಂದು ವರ್ಷ ಕಳೆಯುತ್ತ ಬಂದರೂ ಸರ್ಕಾರವು ಮೇಯರ್, ಉಪಮೇಯರ್ ಚುನಾವಣೆ ನಡೆಸುತ್ತಿಲ್ಲ. ಅಲ್ಲದೆ, ನೂತನ ಸದಸ್ಯರು ಇಲ್ಲಿಯವರೆಗೆ ಸದಸ್ಯತ್ವ ಸ್ವೀಕರಿಸಿಲ್ಲ. ಇದರಿಂದಾಗಿ ವಾರ್ಡ್‌ಗಳಲ್ಲಿನ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಜನರಿಂದ ಆಯ್ಕೆಗೊಂಡಿದ್ದರೂ ಅಧಿಕೃತವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಈಗಾಗಲೇ ರಾಜ್ಯ ಸರ್ಕಾರವು ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಘೋಷಣೆ ಮಾಡಿ ಒಂದು ವರ್ಷ ಕಳೆದಿದೆ. ಆದರೆ, ಮೇಯರ್ ಆಯ್ಕೆ ಪ್ರಕ್ರಿಯೆಗಳು ಆರಂಭಗೊಂಡಿಲ್ಲ. ಯಾವ ಉದ್ದೇಶಕ್ಕಾಗಿ ವಿಳಂಬ ಮಾಡಲಾಗುತ್ತಿದೆ ಎಂಬುದು ಸದಸ್ಯರಿಗೆ ಗೊತ್ತಾಗುತ್ತಿಲ್ಲ. ಪ್ರಾದೇಶಿಕ ಆಯುಕ್ತರು ಮಧ್ಯೆ ಪ್ರವೇಶಿಸಿ ಕೂಡಲೇ ಚುನಾವಣೆ ಘೋಷಣೆ ಮಾಡಬೇಕು. ಇಲ್ಲದಿ ದ್ದರೆ ಹೋರಾಟ ನಡೆಸುವುದು ಅನಿವಾರ್ಯ ಎಂದು ಸದಸ್ಯರು ಎಚ್ಚರಿಸಿದರು.

    ಚುನಾಯಿತರಾಗಿ ಒಂದು ವರ್ಷ ಅವಧಿಯಲ್ಲಿ ವಾರ್ಡ್‌ಗಳಲ್ಲಿ ಸಣ್ಣ ಪುಟ್ಟ ಸಮಸ್ಯೆಗಳನ್ನು ಪರಿಹರಿಸಲು ನಮ್ಮಿಂದ ಸಾಧ್ಯವಾಗಿಲ್ಲ. ಪಾಲಿಕೆಯು ಇಲ್ಲಿಯವರೆಗೆ ಸಾಮಾನ್ಯ ಸಭೆ ಕರೆದಿಲ್ಲ. ಅಧಿಕಾರಿಗಳು ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ನಾವೆಲ್ಲ ಸದಸ್ಯರಾಗಿ ಆಯ್ಕೆಗೊಂಡು ಪ್ರಯೋಜನ ಇಲ್ಲದಂತಾಗಿದೆ. ಕೂಡಲೇ ಸಾರ್ವಜನಿಕ ಸಭೆ ಕರೆಯಬೇಕು. ಮೇಯರ್, ಉಪಮೇಯರ್ ಆಯ್ಕೆ ಚುನಾವಣೆ ದಿನಾಂಕ ನಿಗದಿ ಮಾಡಬೇಕು ಎಂದು ಮನವಿ ಮೂಲಕ ಸದಸ್ಯರು ವಿನಂತಿಸಿದರು. ಶಿವಾಜಿ ಮಂಡೋಳ್ಕರ್, ಶಾಹೀದಖಾನ್ ಪಠಾಣ, ಸಿದ್ದಿಕಿ ಪಠಾಣ, ಪೂಜಾ ಪಾಟೀಲ, ವೈಶಾಲಿ ಭಾತಕಂಡೆ, ರಿಯಾಜ್ ಕಿಲ್ಲೇದಾರ, ಲಕ್ಷ್ಮೀ ಲೊಕರಿ, ಆಸ್ಮಿಲಾ ಬಿ.,ಬಸವರಾಜ ಎಂ., ಮುಜಮ್ಮಿಲ್ ಡೋಣಿ, ಕೆ.ಮುಲ್ಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts