More

    ಮೇನಲ್ಲಿ ಅನುಭವ ಮಂಟಪ ಕೆಲಸ ಶುರು

    ಬಸವಕಲ್ಯಾಣ(ಬೀದರ್): ಶರಣರ ಕರ್ಮಭೂಮಿ ಬಸವಕಲ್ಯಾಣದಲ್ಲಿ ನಿರ್ಮಿಸಲು ಉದ್ದೇಶಿಸಿದ ನೂತನ ಅನುಭವ ಮಂಟಪದ ಕಾಮಗಾರಿ ಮೇ ಮೊದಲ ವಾರ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಬಸವಕಲ್ಯಾಣ ಕ್ಷೇತ್ರ ಸಮಿತಿ, ವಿಕಾಸ ಅಕಾಡೆಮಿ ಸಹಯೋಗದಡಿ ನಗರದಲ್ಲಿ ಶನಿವಾರ ಆಯೋಜಿಸಿದ್ದ ಬಸವಕಲ್ಯಾಣ-ಕಲ್ಯಾಣ ಕರ್ನಾಟಕ ಯಾತ್ರಾ ಪರ್ವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅನುಭವ ಮಂಟಪ ನಿರ್ಮಾಣಕ್ಕಿದ್ದ ಎಲ್ಲ ಅಡೆತಡೆ ನಿವಾರಣೆಯಾಗಿವೆ. ಟೆಂಡರ್ ಪ್ರಕ್ರಿಯೆ ಸಹ ಕೊನೇ ಹಂತದಲ್ಲಿದ್ದು, ಮೇ ಮೊದಲ ವಾರ ಕಾಮಗಾರಿ ಶುರುವಾಗಲಿದೆ ಎಂದರು.

    ಅನುಭವ ಮಂಟಪ ಜತೆಗೆ ವೈಚಾರಿಕ ಕ್ರಾಂತಿ ಆಗಬೇಕಿದೆ. 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಪರಿವರ್ತನೆ ಇದೀಗ ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅನುಭವ ಮಂಟಪ ದೊಡ್ಡ ಪ್ರೇರಣಾ ಶಕ್ತಿಯಾಗಿ ಜಗತ್ತಿಗೆ ಮಾರ್ಗದರ್ಶನ ನೀಡುವ ಕೇಂದ್ರವಾಗಬೇಕಿದೆ. ಅಂದಾಗಲೇ ಬಸವಣ್ಣನವರಿಗೆ ನಿಜವಾದ ಗೌರವ ಸಿಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.
    12ನೇ ಶತಮಾನ ಭಾರತದ ಪಾಲಿಗೆ ಪರಿವರ್ತನೆ ಕಾಲ. ದೇಶ-ವಿದೇಶದಿಂದ ಜನ ಕಲ್ಯಾಣದ ಕಡೆಗೆ ಬಂದು ಸಾಮಾಜಿಕ ಕ್ರಾಂತಿ ಮಾಡಿದರು. ಬಸವಣ್ಣನವರ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ ಎಂಬ ಮಾತು ಸರ್ವಕಾಲಕ್ಕೂ ಪ್ರಸ್ತುತ. ಅವರು ಕಾಯಕಕ್ಕೆ ಪೂಜೆ, ದೈವತ್ವ ಸ್ವರೂಪ ನೀಡಿದ್ದರು. ನಮ್ಮ ಕಾಯಕ ಪ್ರಾಮಾಣಿಕವಾಗಿದ್ದರೆ ಅದುವೇ ಕೈಲಾಸ ಎಂದು ಸಾರಿದ್ದಾರೆ ಎಂದರು.

    ಸಮಾನತೆ, ಲಿಂಗಭೇದ, ಮೂಢನಂಬಿಕೆ ವಿರುದ್ಧ ಬಸವಣ್ಣನವರು ಹೋರಾಟ ಮಾಡಿದರು. ಆದರೆ ಈಗಲೂ ಚಾಲ್ತಿಯಲ್ಲಿರುವ ಇಂಥ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ ವೈಚಾರಿಕತೆ ಮೂಡಿಸುವುದು ಯಾತ್ರಾ ಪರ್ವ ಉದ್ದೇಶವಾಗಿದೆ ಎಂದು ತಿಳಿಸಿದರು.

    ಕೊಪ್ಪಳದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಶ್ರೀ ಡಾ.ಶಿವಾನಂದ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ರಾಜೇಶ್ವರ ಶಿವಾಚಾರ್ಯ, ಶ್ರೀ ಬಸವಲಿಂಗ ಅವಧೂತರು, ಶ್ರೀ ಪ್ರಣಾವನಂದ ಸ್ವಾಮೀಜಿ, ಶ್ರೀ ಸಿದ್ರಾಮೇಶ್ವರ ಸ್ವಾಮೀಜಿ, ಶ್ರೀ ಸದಾಶಿವ ಸ್ವಾಮೀಜಿ, ಶ್ರೀ ಪಂಚಾಕ್ಷರಿ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಶರಣು ಸಲಗರ, ದತ್ತಾತ್ರೇಯ ಪಾಟೀಲ್ ರೇವೂರ, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಮರಾಠ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಜಿ. ಮುಳೆ, ವಿಧಾನ ಪರಿಷತ್ ಸದಸ್ಯರಾದ ರಘುನಾಥರಾವ ಮಲ್ಕಾಪುರೆ, ಶಶೀಲ್ ನಮೋಶಿ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ರಾಜಕುಮಾರ ಪಾಟೀಲ್ ಸಿರಗಾಪುರ, ಬಸವೇಶ್ವರ ಪಂಚ ಕಮಿಟಿ ಅಧ್ಯಕ್ಷ ಅನೀಲಕುಮಾರ ರಗಟೆ, ಗುರುನಾಥ ಕೊಳ್ಳುರ್, ಸೂರ್ಯಕಾಂತ ನಾಗಮಾರಪಳ್ಳಿ, ಧನರಾಜ ತಾಳಂಪಳ್ಳಿ ಇತರರಿದ್ದರು.

    ವಿಕಾಸ ಅಕಾಡೆಮಿ ಸಂಸ್ಥಾಪಕ ಡಾ.ಬಸವರಾಜ ಪಾಟೀಲ್ ಸೇಡಂ ಪ್ರಾಸ್ತಾವಿಕ ಮಾತನಾಡಿದರು. ಪೂಜ್ಯ ಅಕ್ಕ ಗಂಗಾಂಬಿಕೆ ಸ್ವಾಗತಿಸಿದರು. ರೇವಣಸಿದ್ದಪ್ಪ ಜಲಾದೆ ನಿರೂಪಣೆ ಮಾಡಿದರು. ಮಾರ್ತಂಡ ಶಾಸ್ತ್ರಿ ವಂದಿಸಿದರು.

    ಐದು ವರ್ಷದಲ್ಲಿ ಯೋಜನೆ ಪೂರ್ಣ: ಬಸವಕಲ್ಯಾಣದಲ್ಲಿ ಸಾಮಾಜಿಕ, ಧಾರ್ಮಿಕ ಕಳಕಳಿ ಮೂಡಿಸುವ ಹಾಗೂ ನಿತ್ಯವೂ ಐದು ಸಾವಿರ ಪ್ರವಾಸಿಗರು ಆಗಮಿಸುವ ನಿಟ್ಟಿನಲ್ಲಿ ಬಸವಕಲ್ಯಾಣ-ಕಲ್ಯಾಣ ಕರ್ನಾಟಕ ಯಾತ್ರಾ ಪರ್ವ ಯೋಜನೆ ಹಾಕಿಕೊಂಡಿದ್ದು, ಐದು ವರ್ಷಗಳಲ್ಲಿ ಇದನ್ನು ಸಾಕಾರಗೊಳಿಸುವ ಉದ್ದೇಶ ಹೊಂದಲಾಗಿದೆ ಎಂದು ವಿಕಾಸ ಅಕಾಡೆಮಿ ಸಂಸ್ಥಾಪಕ ಡಾ.ಬಸವರಾಜ ಪಾಟೀಲ್ ಸೇಡಂ ಹೇಳಿದರು.

    ಕಲ್ಯಾಣದಲ್ಲಿರುವ ಒಂದೊಂದು ಜಾಗ, ಸ್ಥಳ ಐತಿಹಾಸಿಕ. ಶರಣರು ನಡೆದಾಡಿದ ಈ ಪುಣ್ಯ ಭೂಮಿಯಲ್ಲಿ ಧಾರ್ಮಿಕ, ಸಾಮಾಜಿಕ ಕಳಕಳಿ ತರಬೇಕಾಗಿದೆ. ಆದರೆ ಈಗಿನ ಸ್ಥಿತಿ ಹಾಗಿಲ್ಲ. ಹೀಗಾಗಿ ಈ ಭಾಗದಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವ ಹಾಗೂ ದೇಶ-ವಿದೇಶದ ಜನ ಇಲ್ಲಿಗೆ ಬರುವಂತೆ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.

    ಇಲ್ಲಿ ಏನೇನು ಕೆಲಸ ಮಾಡಬೇಕು ಎಂದು ಹಲವು ಬಾರಿ ಚರ್ಚಿಸಲಾಗಿದೆ. ವಿಜಯಪುರ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಾಲ್ಕಿಯಲ್ಲಿ ರಾಜ್ಯದ ವಿವಿಧ ಮಠಾಧೀಶರ, ಪೂಜ್ಯರ ಸಭೆ ನಡೆದಿದ್ದು, ಇಲ್ಲಿ ಮೂಡಿಬಂದ ಒಮ್ಮತದಂತೆ ಮತ್ತೊಂದು ಸಭೆ ಬಸವಕಲ್ಯಾಣದಲ್ಲಿ ನಡೆಯಿತು. ಎರಡು ಸಭೆ ತೀರ್ಮಾನದಂತೆ ಬಸವಕಲ್ಯಾಣ ಕ್ಷೇತ್ರ ಸಮಿತಿ ರಚಿಸಲಾಯಿತು. ಈ ಸಮಿತಿಯಲ್ಲಿ ಪೂಜ್ಯರು, ಶಿಕ್ಷಣ ಸಂಸ್ಥೆ, ಶರಣ ಸಾಹಿತ್ಯ ಪರಿಷತ್, ಬಸವ ಸಮಿತಿ ಪ್ರಮುಖರು, ಜಗತ್ತಿನ ಐದು ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ 60 ಜನರ ಕಮಿಟಿ ರಚಿಸಲಾಗಿದೆ ಎಂದು ತಿಳಿಸಿದರು.

    ಐದು ವರ್ಷದೊಳಗೆ ನಿತ್ಯ ಸರಾಸರಿ 5000 ಜನ ಕಲ್ಯಾಣಕ್ಕೆ ಬರುವಂತೆ ಮಾಡುವ ಗುರಿ ಇದೆ. ನಾಡಿನ ಹಲವು ಪೂಜ್ಯರು ವರ್ಷದಲ್ಲಿ 10 ದಿನ ಇಲ್ಲಿ ವಾಸ ಮಾಡಲಿದ್ದಾರೆ. ಪ್ರತಿವರ್ಷ ಮೂರು ರೀತಿಯ ಸಮ್ಮೇಳನ, ಬಸವೇಶ್ವರ ಜಾತ್ರೆ ವೈಭವದಿಂದ ಮಾಡುವುದು, ಶರಣ ಕಮ್ಮಟ-ಅನುಭವ ಮಂಟಪಕ್ಕೆ ಒತ್ತು ನೀಡಿ ರಾಷ್ಟ್ರಮಟ್ಟದ ಕಾರ್ಯಕ್ರಮ, ಕಲ್ಯಾಣ ಪರ್ವ ಇನ್ನಷ್ಟು ವೈಭವದಿಂದ ಮಾಡುವ ಆಶಯ ಯೋಜನೆಯಲ್ಲಿದೆ. 5 ಕೋಟಿ ಶರಣ ಸಾಹಿತ್ಯ ಮಾರಾಟ, ಒಂದು ಲಕ್ಷ ಮನೆಯಲ್ಲಿ ವಚನ ಪಠಣ ನಡೆಯಬೇಕು. ಐದು ವರ್ಷಗಳ ನಂತರ ಮೂರು ದಿನ ಕಲ್ಯಾಣದಲ್ಲಿ ಬೃಹತ್ ಕಾರ್ಯಕ್ರಮ ಹಮ್ಮಿಕೊಂಡು ಐದು ಲಕ್ಷ ಜನ ಸೇರಿಸುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

    ಮುಸ್ಲಿಂ ಸಮುದಾಯದವರು ಮನೆ ಬಿಟ್ಟು ಜಾಗ ಕೊಟ್ಟರು: ಶರಣ ಸ್ಮಾರಕಗಳಲ್ಲಿ ಪ್ರಮುಖವಾದ ಪರುಷ ಕಟ್ಟೆಗೆ ಇದೀಗ ಹೊಸ ಕಳೆ ಬರಲಿದೆ. ಸದ್ಯದ 4100 ಚದರಡಿ ಜತೆಗೆ ಮುಂದಿನ ದಿನಗಳಲ್ಲಿ 70 ಸಾವಿರ ಚದರಡಿ ಜಾಗ ಸೇರ್ಪಡೆಯಾಗಲಿದೆ. ಪರುಷ ಕಟ್ಟೆ ಸಂಬಂಧ ಮುಸ್ಲಿಂ ಸಮುದಾಯದವರು 52 ಮನೆ ಬಿಟ್ಟುಕೊಡಲು ಒಪ್ಪಿದ್ದಾರೆ. ಅಲ್ಲಿನ ಶಾಲೆ ಸಹ ಬಿಕೆಡಿಬಿ ಆಸ್ತಿಯಾಗಿರುತ್ತದೆ. ಐವರು ಮುಸ್ಲಿಂ ಮುಖಂಡರು ಮುಂದೆ ಬಂದು ತಮ್ಮ ಸಮಾಜದವರ ಜತೆ ಚಚರ್ಿಸಿ 70 ಸಾವಿರ ಚದರಡಿ ಜಮೀನು ನೀಡಲಿದ್ದಾರೆ ಎಂದು ಡಾ.ಸೇಡಂ ತಿಳಿಸಿದರು. ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಮುಸ್ಲಿಂ ಬಾಂಧವರಾದ ಮುಜಾಹಿದ್ ಪಾಶಾ ಖುರೇಶಿ, ಅಬ್ದುಲ್ ಗಫಾರ್, ಮಸ್ತಾನ್ ಖಾದ್ರಿ ಇತರರನ್ನು ಸಿಎಂ ಸನ್ಮಾನಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts