More

    ಮೆಕ್ಕೆಜೋಳ ತೂಕದಲ್ಲಿ ಮೋಸ

    ಆನಂದಪುರ: ಈ ವರ್ಷ ಅತಿವೃಷ್ಟಿಯಿಂದ ನಿರೀಕ್ಷೆಯಷ್ಟು ಮೆಕ್ಕೆಜೋಳದ ಫಸಲು ಸಿಗದೆ ರೈತರು ಕಂಗಾಲಾಗಿದ್ದು ಲಾಕ್​ಡೌನ್​ನಿಂದ ಮಾರುಕಟ್ಟೆ ಇಲ್ಲದೆ ಅನ್ನದಾತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಕಷ್ಟದ ಕಾಲದಲ್ಲೂ ರೈತರಿಗೆ ಖರೀದಿದಾರರು ತೂಕದಲ್ಲಿ ಮೋಸ ಮಾಡಿದರೆ ಪರಿಸ್ಥಿತಿ ಹೇಗಾಗಬಹುದು?

    ಇಂತಹ ಘಟನೆ ಕಳೆದ 4-5 ದಿನಗಳಿಂದ ಆಚಾಪುರ ಗಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ನಡೆಯುತ್ತಿದ್ದು ಗುರುವಾರ ಸ್ಪಷ್ಟವಾಗಿ ಬೆಳಕಿಗೆ ಬಂದಿದೆ. ತೂಕದಲ್ಲಿ ಆದ ಮೋಸದಿಂದ ಕೆರಳಿದ ರೈತರು ಲಾರಿಗಳನ್ನು ತಡೆದು ಹಮಾಲರನ್ನು ಮರಕ್ಕೆ ಕಟ್ಟಿ ಹಾಕಿ ಆಕ್ರೋಶ ವ್ಯಕ್ಯಪಡಿಸಿದರು.

    ಪ್ರತಿ ಚೀಲಕ್ಕೆ 25 ಕೆಜಿ ಮೋಸ: ಗಡಿಕಲ್ಲು ಸಮೀಪದ ಪತ್ರೆಹೊಂಡದ ರೈತರು ಮೆಕ್ಕೆಜೋಳ ಮಾರುವಾಗ ಅವರ ಅಂದಾಜಿನಷ್ಟು ತೂಕ ಬರದೆ ಇದ್ದಾಗ ಸಂಶಯ ಬಂದಿದೆ. ರೈತರೊಬ್ಬರು 70 ಚೀಲ(1 ಚೀಲ =60 ಕೆಜಿ) ಮೆಕ್ಕೆಜೋಳ ಫಸಲು ಸಿಕ್ಕಿದೆ ಎಂದು ಲೆಕ್ಕಾಚಾರ ಮಾಡಿಕೊಂಡಿದ್ದರು. ಆದರೆ ಗುರುವಾರ ದಲ್ಲಾಳಿಗಳು ಮತ್ತು ಹಮಾಲರು ಬಂದು ಚೀಲದಲ್ಲಿ ತುಂಬಿದಾಗ ಕೇವಲ 50 ಚೀಲ ಜೋಳ ಬಂತು. ಸಂಶಯ ಬಂದು ಚೀಲವನ್ನು ಸುರಿದು ಮತ್ತೆ ತುಂಬುವಂತೆ ಹೇಳಿದಾಗ ವ್ಯತ್ಯಾಸ ಕಂಡು ಬಂದಿತು. ಚೀಲದೊಳಗೆ ಚೀಲ ಸೇರಿಸಿ ಪ್ರತಿ ಚೀಲದಿಂದ 22ರಿಂದ 25 ಕೆಜಿ ಜಾಸ್ತಿ ಜೋಳ ಹಿಡಿಸುವಂತೆ ದಲ್ಲಾಳಿಗರು ಮೋಸದ ಜಾಲ ಹಣೆದಿದ್ದು ಗೊತ್ತಾಯಿತು.

    ಪತ್ರೆಹೊಂಡದ ಜನಾರ್ದನ ಮತ್ತು ಮೂಡಹಾಗಲು ಗ್ರಾಮದ ಗುಂಡ ಎಂಬುವವರು ದಲ್ಲಾಳಿಗಳಾಗಿ ಕಳೆದ 4-5 ವರ್ಷಗಳಿಂದ ದಾವಣಗೆರೆ ವ್ಯಾಪಾರಿಯೊಬ್ಬರಿಗೆ ಇಲ್ಲಿಂದ ಜೋಳ ಖರೀದಿಸಿ ಕಳುಹಿಸುತ್ತಿದ್ದರು. ಕಳೆದ 4-5 ದಿನಗಳಿಂದ ಮಾದಾಪುರ, ಮೂಡಹಾಗಲು, ಲಕ್ಕವಳ್ಳಿ, ಗಿಳಾಲಗುಂಡಿ ಇನ್ನಿತರ ಗ್ರಾಮಗಳಲ್ಲಿ ಮೆಕ್ಕೆಜೋಳ ಖರೀದಿಸಿ ಲಾರಿಗಳ ಮೂಲಕ ಕಳುಹಿಸಲಾಗಿದೆ.

    ಚಿಲ್ಲದೊಳಗೆ ಚೀಲ ಇಟ್ಟು ತೂಕ: ತೂಕದ ಮೋಸದ ಜಾಲ ಬೆಳಕಿಗೆ ಬರುತ್ತಿದ್ದಂತೆ ಎಲ್ಲ ರೈತರು ಪತ್ರೆಹೊಂಡದಲ್ಲಿ ಜಮಾಯಿಸಿ ಪ್ರತಿಭಟಿಸಿದರು. ಲಾರಿಯನ್ನು ತಡೆದು ನಿಲ್ಲಿಸಿ ವ್ಯಾಪಾರಿಗೆ ಕರೆ ಮಾಡಿ ಬರಲು ತಿಳಿಸಿದರು. ಆದರೆ ವ್ಯಾಪಾರಿ ತನಗೂ ಇದಕ್ಕೆ ಸಂಬಂಧವಿಲ್ಲ, ದಲ್ಲಾಳಿಗಳ ಮೋಸದ ಜಾಲ ಇರಬಹುದು. ಸೂಕ್ತ ಕ್ರಮಕೈಗೊಳ್ಳುವಂತೆ ಹೇಳಿದನು.

    ಆಗ ದಲ್ಲಾಳಿಗಳಿಗೂ ರೈತರಿಗೂ ವಾಗ್ವಾದವಾಗಿದೆ. ಹಮಾಲರನ್ನು ಮರಕ್ಕೆ ಕಟ್ಟಿ ಹಾಕಿ ಸತ್ಯ ಹೇಳುವಂತೆ ಗ್ರಾಮಸ್ಥರು ಒತ್ತಾಯಿಸಿದಾಗ, ಹಮಾಲರು ಕಳೆದ 4-5 ದಿನಗಳಿಂದ ದಲ್ಲಾಳಿಗಳು ಮಾಡಿದ ಮೋಸ ವಿವರಿಸಿದರು. ಚೀಲದೊಳಗೆ ಚೀಲ ಇಟ್ಟು ಅದಿಕ ಜೋಳ ತುಂಬುವಂತೆ ಮಾಡಲಾಗಿದೆ. ಚೀಲವೊಂದಕ್ಕೆ 60 ಕೆಜಿ ಲೆಕ್ಕದಲ್ಲಿ ರೈತರಿಗೆ ಹಣ ನೀಡಲಾಗುತ್ತಿದೆ. ಜೋಳ ತುಂಬಿದ ಚೀಲವನ್ನು ತೂಕ ಮಾಡಿದಾಗ 78ರಿಂದ 80 ಕೆಜಿ ತೂಕ ಕಂಡು ಬಂದಿದೆ. ಈವರೆಗೆ ಜೋಳ ಮಾರಿದ ರೈತರು ಹಣ ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು. ರೈತರು ಪೊಲೀಸರಿಗೂ ವಿಷಯ ತಿಳಿಸಿದ್ದು ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ಆನಂದಪುರ ಹೊರಠಾಣೆಯ ಪೊಲೀಸರು ಪತ್ರಹೊಂಡಕ್ಕೆ ತೆರಳಿ ಪ್ರಕರಣ ದಾಖಲಿಸಿದ್ದಾರೆ.

    ತಾಪಂ ಅಧ್ಯಕ್ಷರ ಸಂಧಾನ: ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೊಸನಗರ ತಾಪಂ ಅಧ್ಯಕ್ಷ ವೀರೇಶ್ ಆಲುವಳ್ಳಿ ರೈತರು ಹಾಗೂ ದಲ್ಲಾಳಿಗಳ ಜತೆ ಸಂಧಾನ ನಡೆಸಿದರು. ಅದರಂತೆ ಕಳೆದ 3-4 ದಿನದಲ್ಲಿ ಜೋಳ ಖರೀದಿಸಿದ ರೈತರಿಗೆ ಒಟ್ಟು 1.60 ಲಕ್ಷ ರೂ. ಹೆಚ್ಚುವರಿ ಹಣ ನೀಡುವಂತೆ ತಿಳಿಸಿ ಪ್ರಕರಣ ಮುಕ್ತಾಯಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts