More

    ಮೂರೂವರೆ ವರ್ಷಗಳಾದರೂ ಕಾಂಕ್ರೀಟ್ ರಸ್ತೆಗೆ ಸಿಕ್ಕಿಲ್ಲ ಮುಕ್ತಿ

    ಹುಬ್ಬಳ್ಳಿ: ವಿವಿಧ ಇಲಾಖೆಗಳ ನಡುವಿನ ಸಮನ್ವಯತೆ ಕೊರತೆ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಹುಬ್ಬಳ್ಳಿಯ ಕಮರಿಪೇಟೆ-ಉಣಕಲ್ ರಸ್ತೆ ಕಾಮಗಾರಿ ಉತ್ತಮ ನಿದರ್ಶನವಾಗಿದೆ.
    2018ರ ಜನವರಿಯಲ್ಲಿ ಪ್ರಾರಂಭಗೊಂಡಿದ್ದ ಈ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಯು 2019ರ ಜನವರಿಯಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ, ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಘಟಕ, ಮಹಾನಗರ ಪಾಲಿಕೆ, ಜಲಮಂಡಳಿ, ಹೆಸ್ಕಾಂ ಅಧಿಕಾರಿಗಳ ಮಧ್ಯದ ಸಮನ್ವಯತೆಯ ಕೊರತೆಯಿಂದಾಗಿ ಕಾಮಗಾರಿ ಇನ್ನೂ ಕುಂಟುತ್ತ ಸಾಗಿದೆ. ಕೇಂದ್ರೀಯ ರಸ್ತೆ ನಿಧಿ (ಸಿಆರ್​ಎಫ್) ಅನುದಾನದ 25 ಕೋಟಿ ರೂ. ವೆಚ್ಚದಲ್ಲಿ ಅಂದಾಜು 4 ಕಿಮೀ ಉದ್ದದ ರಸ್ತೆ ನಿರ್ವಿುಸಲು ಮೂರೂವರೆ ವರ್ಷಗಳಾದರೂ ಸಾಧ್ಯವಾಗದಿರುವುದು ವಿವಿಧ ಇಲಾಖೆಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
    ಗೋಕುಲ ರಸ್ತೆಯ ವಾಣಿ ವಿಲಾಸ ಜಂಕ್ಷನ್ ಬಳಿಯ ಕೆಲ ಮನೆಗಳನ್ನು ಸ್ಥಳಾಂತರಿಸುವ ಕಾರ್ಯವು ಮಹಾನಗರ ಪಾಲಿಕೆಯಿಂದ ಇನ್ನೂ ಆಗಿಲ್ಲ. ಪಾಲಿಕೆಯಿಂದ ಒಳಚರಂಡಿ ಪೈಪ್​ಗಳನ್ನು ಸಹ ಸ್ಥಳಾಂತರಿಸಬೇಕಿದೆ. ಹೆಸ್ಕಾಂನಿಂದ ವಿದ್ಯುತ್ ಕಂಬ, ವಿದ್ಯುತ್ ತಂತಿಗಳನ್ನು, ಜಲಮಂಡಳಿಯಿಂದ ನೀರಿನ ಪೈಪ್​ಗಳನ್ನು, ಅದಾನಿ ಕಂಪನಿಯವರು ಹಾಕಿರುವ ಗ್ಯಾಸ್ ಪೈಪ್​ಗಳನ್ನು ಸ್ಥಳಾಂತರಿಸಬೇಕಿದೆ. ಕಮರಿಪೇಟೆಯಿಂದ ಹೊಸೂರು ಸೇರುವ ರಸ್ತೆಯವರೆಗೆ ಈ ಸೌಲಭ್ಯಗಳ ಸ್ಥಳಾಂತರವಾಗಿದೆ. ಆದರೆ, ವಾಣಿ ವಿಲಾಸ ರಸ್ತೆಯಿಂದ ಶಿರೂರ ಪಾರ್ಕ್ ಸೇರುವ ರಸ್ತೆಯಲ್ಲಿ ಈ ಸೌಲಭ್ಯಗಳ ಸ್ಥಳಾಂತರ ಇನ್ನೂ ಆಗಿಲ್ಲ. ಈ ಮಧ್ಯೆ 3.4 ಕಿಮೀವರೆಗೆ ಸಿಮೆಂಟ್ ರಸ್ತೆ ನಿರ್ವಿುಸಿರುವ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ಘಟಕ, ಸೌಲಭ್ಯಗಳನ್ನು ಸ್ಥಳಾಂತರಿಸುವ ಸ್ಥಳದಲ್ಲಿ ಕಾಮಗಾರಿಯನ್ನು ಹಾಗೆಯೇ ಉಳಿಸಿದೆ.
    ರಸ್ತೆ ನಿರ್ವಿುಸುತ್ತಿರುವ ಗುತ್ತಿಗೆದಾರರಿಗೂ ಸರಿಯಾಗಿ ಹಣ ಸಂದಾಯ ಮಾಡದಿರುವುದು ಸಹ ಕಾಮಗಾರಿ ವಿಳಂಬಗೊಳ್ಳಲು ಮತ್ತೊಂದು ಪ್ರಮುಖ ಕಾರಣ. ಈ ರಸ್ತೆಯಲ್ಲಿ ಏಷಿಯಾದಲ್ಲಿಯೇ ಮಾದರಿಯಾದ ತಾಲೂಕು ಮಟ್ಟದ ಬೃಹತ್ ಕೋರ್ಟ್ ಕಟ್ಟಡ ನಿರ್ವಣವಾಗಿದೆ. ಆದರೆ, ಈ ಮಾರ್ಗದ ಅರೆಬರೆ ಕಾಮಗಾರಿಯಿಂದಾಗಿ ಕೋರ್ಟ್​ಗೆ ಬರುವ ವಕೀಲರು, ಕಕ್ಷಿದಾರರು ಪರದಾಡುವಂತಾಗಿದೆ. ಕಮರಿಪೇಟೆಯಿಂದ ನೇರವಾಗಿ ಧಾರವಾಡಕ್ಕೆ ತೆರಳುವವರು, ಶಾಲೆ-ಕಾಲೇಜುಗಳಿಗೆ ಹೋಗುವವರು ಈ ರಸ್ತೆ ಮೂಲಕವೇ ಸಂಚರಿಸುತ್ತಿದ್ದರು. ಇವರೆಲ್ಲ ಕಳೆದ ಮೂರೂವರೆ ವರ್ಷಗಳಿಂದ ಈ ಮಾರ್ಗದ ಮೂಲಕ ಸರಳವಾಗಿ ಸಂಚರಿಸಲು ಸಾಧ್ಯವಾಗದಾಗಿದೆ.

    ಗುತ್ತಿಗೆದಾರರಿಗೆ ಹಣ ಪಾವತಿ ಆಗದ ಕಾರಣ ಕಾಮಗಾರಿ ವಿಳಂಬ ಆಗಿದೆ. ಹಣ ಪಾವತಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇವೆ. ಗುತ್ತಿಗೆದಾರರಿಗೆ ಹಣ ಪಾವತಿಯಾದ ತಕ್ಷಣ ಬಾಕಿ ಇರುವ ವಿವಿಧ ಸೌಲಭ್ಯಗಳನ್ನು ಸ್ಥಳಾಂತರಿಸಿ, ಕಾಮಗಾರಿಗೆ ವೇಗ ನೀಡಲಾಗುವುದು.
    | ಜಗದೀಶ ಶೆಟ್ಟರ್ ಜಿಲ್ಲಾ ಉಸ್ತುವಾರಿ ಸಚಿವ

    ಸೌಲಭ್ಯಗಳ ಸ್ಥಳಾಂತರದಲ್ಲಿ ಆಗಿರುವ ಅಡಚಣೆಯಿಂದಾಗಿ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಂಡಿಲ್ಲ. ಸೌಲಭ್ಯಗಳ ಸ್ಥಳಾಂತರ ಇಲ್ಲದ ಸ್ಥಳದಲ್ಲಿ ಇನ್ನೂ ಅಂದಾಜು 500-600 ಮೀಟರ್​ನಷ್ಟು ಉದ್ದದ ಮಾರ್ಗದಲ್ಲಿ ಸಿಮೆಂಟ್ ರಸ್ತೆ ನಿರ್ವಿುಸಬೇಕಿದೆ.
    | ರಮೇಶ ಹವಳೆ ಪಿಡಬ್ಲ್ಯುಡಿ ಎನ್​ಎಚ್ ಘಟಕದ ಸಹಾಯಕ ಇಂಜಿನಿಯರ್, ಹುಬ್ಬಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts