More

    ಮೂರು ಸಾವಿರ ಶಾಲೆಯಲ್ಲಿಲ್ಲ ಕ್ಷೀರಭಾಗ್ಯ

    ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕ್ಷೀರಭಾಗ್ಯದಿಂದ ಜಿಲ್ಲೆಯ ಲಕ್ಷಾಂತರ ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಜಿಲ್ಲಾದ್ಯಂತ ಬಹುತೇಕ ಎಲ್ಲ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೆನೆಭರಿತ ಹಾಲು ವಿತರಣೆ ಸ್ಥಗಿತಗೊಂಡಿದೆ.

    ಜಿಲ್ಲೆಯ ಒಟ್ಟು 4010 ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪೈಕಿ ಕೇವಲ 1,089 ಶಾಲೆಗಳಲ್ಲಿ ಮಾತ್ರ ಕ್ಷೀರಭಾಗ್ಯ ಯೋಜನೆಯಡಿ ವಾರದ ಐದು ದಿನ ಮಕ್ಕಳಿಗೆ ಕುಡಿಯಲು ಕೆನೆಭರಿತ ಹಾಲು ವಿತರಿಸಲಾಗುತ್ತಿದ್ದು, 2,921 ಶಾಲೆಗಳಲ್ಲಿ ಮಕ್ಕಳಿಗೆ ಹಾಲು ತಯಾರಿಸಿ ವಿತರಿಸಲು ಹಾಲಿನ ಪುಡಿಯೇ ಇಲ್ಲದಿರುವುದು ಅಧಿಕಾರಿಗಳಿಗೆ ತಲೆ ಬಿಸಿ ತಂದಿದೆ.

    2022ರ ಡಿಸೆಂಬರ್‌ನಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 2,244 ಶಾಲೆಗಳ ಪೈಕಿ ಕೇವಲ 300 ಶಾಲೆಗಳಲ್ಲಿ ಕೆನೆಭರಿತ ಹಾಲು ವಿತರಿಸಲಾಗಿತ್ತು. ಜನವರಿಯಲ್ಲಿ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಿಂದ ಹಾಲಿನ ಪುಡಿ ಪೂರೈಕೆ ಮಾಡಿದ್ದರಿಂದ, ಇದೀಗ 844 ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಹಾಲು ನೀಡಲಾಗುತ್ತಿದೆ. ಆದರೆ, ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 1,766 ಸರ್ಕಾರಿ ಶಾಲೆಗಳ ಪೈಕಿ ಕೇವಲ 245 ಶಾಲೆಗಳ ಮಕ್ಕಳಿಗೆ ಮಾತ್ರ ಹಾಲು ಒದಗಿಸಲಾಗುತ್ತಿದ್ದು, ಇನ್ನುಳಿದ ಶಾಲೆಗಳ ಸುಮಾರು 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಬೆಳಗಾವಿ ತಾಲೂಕಿನ 560, ಖಾನಾಪುರದ 185, ಬೈಲಹೊಂಗಲದ 266, ಸವದತ್ತಿಯ 271, ರಾಮದುರ್ಗದ 239, ಚಿಕ್ಕೋಡಿಯ 266, ಗೋಕಾಕನ 355, ಅಥಣಿಯ 445, ಹುಕ್ಕೇರಿಯ 45 ಹಾಗೂ ರಾಯಬಾಗದ 289 ಶಾಲೆಗಳಲ್ಲಿ ಹಾಲು ವಿತರಣೆ ಸ್ಥಗಿತಗೊಂಡಿದೆ.

    ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ಪಾಲಕರು, ಶಾಲೆಗಳಲ್ಲಿ ಮಕ್ಕಳಿಗೆ ಒಂದು ಗ್ಲಾಸ್ ಹಾಲು ಕೊಡುವಲ್ಲಿಯೂ ನಿರ್ಲಕ್ಷೃ ವಹಿಸುವುದು ಸರಿಯಲ್ಲ. ಬೆಳಗಾವಿಯಲ್ಲೇ ಇರುವ ಕೆಎಂಎಫ್ ಘಟಕದಿಂದ ತ್ವರಿತವಾಗಿ ಪಡೆಯಲು ಕ್ರಮ ವಹಿಸಬೇಕು. ಸಾಧ್ಯವಾಗದಿದ್ದಲ್ಲಿ ರಾಜ್ಯದ ಇನ್ನಿತರ ಹಾಲು ಉತ್ಪಾದಕ ಒಕ್ಕೂಟಗಳಿಂದ ಅಥವಾ ಹೊರರಾಜ್ಯಗಳ ಘಟಕಗಳಿಂದಾದರೂ ಹಾಲಿನ ಪುಡಿ ಪಡೆದು, ವಿತರಿಸಲು ಕ್ರಮ ಕೈಗೊಳ್ಳಬೇಕು. ಸಂಗ್ರಹ ಖಾಲಿಯಾಗುತ್ತಿದ್ದಂತೆಯೇ ಮುಂಬರುವ ತಿಂಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಲ್ಲವೇ? ಯಾವುದೇ ಕಾರಣಕ್ಕೂ ಒಂದು ಶಾಲೆಗೆ ಕೊಡುವುದು ಮತ್ತೊಂದಕ್ಕೆ ಬಿಡುವ ತಾರತಮ್ಯ ಮಾಡಕೂಡದು ಎಂದು ಸರ್ಕಾರನ್ನು ಒತ್ತಾಯಿಸಿದರು. ಮಧ್ಯಾಹ್ನ ಬಿಸಿಯೂಟ ಯೋಜನೆ, ಪ್ರಧಾನಮಂತ್ರಿ ಪೋಷಣ್ ಅಭಿಯಾನದ ಅಕ್ಷರ ದಾಸೋಹ ಘಟಕದ ವತಿಯಿಂದ ಜಿಲ್ಲಾ ಪಂಚಾಯಿತಿಯಡಿ ಜಿಲ್ಲೆಯ ಎಲ್ಲ ಸರ್ಕಾರಿ ಶಾಲೆಗಳಿಗೆ ವಾರದ 5 ದಿನ ಪ್ರತಿ ಮಗುವಿಗೆ ಕುಡಿಯಲು ಕೆನೆಭರಿತ ಹಾಲು ವಿತರಣೆ ಮಾಡಬೇಕು.

    ಹೀಗೆ ಹಾಲು ವಿತರಿಸಲು ಪ್ರತಿ ಮಗುವಿಗೂ 18 ಗ್ರಾಂ ಹಾಲಿನ ಪುಡಿ ಅವಶ್ಯಕತೆ ಇದೆ. ಈಗಾಗಲೇ ಹಾಲಿನ ಪುಡಿ ಸಂಗ್ರಹ ಇರುವ ಶಾಲೆಗಳಲ್ಲಿನ ಎಲ್ಲ ಮಕ್ಕಳಿಗೂ ವಿತರಿಸಲಾಗುತ್ತಿದೆ ಎನ್ನುತ್ತಾರೆ ಅಕ್ಷರ ದಾಸೋಹ ಘಟಕದ ಅಧಿಕಾರಿಗಳು.

    ಮಿಲ್ಕ್ ಪೌಡರ್ ಒದಗಿಸಲು ಒಪ್ಪಂದ ಇಲ್ಲ

    ಸರ್ಕಾರಿ ಶಾಲಾ ಮಕ್ಕಳಿಗೆ ಹಾಲು ವಿತರಿಸಲು ಜಿಲ್ಲೆಯಲ್ಲಿ ಕೆಎಂಎಫ್‌ನಿಂದ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತದೆ. ಅದಕ್ಕೆ ಯಾವುದೇ ಗುತ್ತಿಗೆ ಹಾಗೂ ಟೆಂಡರ್ ಒಪ್ಪಂದ ಮಾಡಿಕೊಂಡಿರುವುದಿಲ್ಲ. ಆಯಾ ತಿಂಗಳ ಬೇಡಿಕೆಗೆ ತಕ್ಕಂತೆ ಪೂರೈಸಿ, ಹಣ ಪಡೆಯುತ್ತಾರೆ. ಪುಡಿ ಪೂರೈಸಿದರೆ ಅನುದಾನ, ಇಲ್ಲವಾದರೆ ಇಲ್ಲ ಎಂಬಂತಾಗಿದೆ. ಹೀಗಾಗಿ ಪುಡಿ ಪೂರೈಕೆದಾರರ ಮೇಲೆ ಯಾವುದೇ ಒತ್ತಡ ಹಾಕಲು ಸಾಧ್ಯವಾಗುತ್ತಿಲ್ಲ. ಆದರೆ, ಪೂರೈಕೆ ಸ್ಥಗಿತಗೊಂಡಿದ್ದರಿಂದ ಮಕ್ಕಳಿಗೆ ಹಾಲು ವಿತರಿಸಲು ಆಗುತ್ತಿರುವ ತೊಂದರೆ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎನ್ನುತ್ತಾರೆ ಬೆಳಗಾವಿ ಜಿಪಂ ಅಧಿಕಾರಿಗಳು.

    ಜಿಲ್ಲೆಯ ಶಾಲೆಗಳಲ್ಲಿ ಹಾಲು ವಿತರಿಸಲು ಅಗತ್ಯವಿರುವ ಹಾಲಿನ ಪುಡಿ ಪೂರೈಕೆ ಸ್ಥಗಿತಗೊಂಡಿದ್ದರಿಂದ ಮೂರು ಸಾವಿರ ಶಾಲೆಗಳಲ್ಲಿ ಹಾಲು ವಿತರಣೆ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಶೀಘ್ರ ವ್ಯವಸ್ಥೆ ಮಾಡುವ ಸಾಧ್ಯತೆ ಇದೆ.
    | ಲಕ್ಷ್ಮಣರಾವ್ ಯಕ್ಕುಂಡಿ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ

    | ಶಿವಾನಂದ ಕಲ್ಲೂರ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts