More

    ಮೂಡಲಗಿಗೆ ಬಾರದ ಅಗ್ನಿಶಾಮಕ ಠಾಣೆ

    ಮಲ್ಲು ಬೋಳನವರ ಮೂಡಲಗಿ: ಮೂಡಲಗಿ ತಾಲೂಕು ಕೇಂದ್ರ 2018ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ತಾಲೂಕಾಗಿ 5 ವರ್ಷ ಕಳೆದರೂ ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಗಿಲ್ಲ. ನ್ಯಾಯಾಲಯ, ತಹಸೀಲ್ದಾರ್, ತಾಪಂ ಇಒ, ಕಾರ್ಮಿಕ ಇಲಾಖೆ, ಬಿಇಒ ಮತ್ತು ಸಿಡಿಪಿಒ ಇಲಾಖೆ, ಉಪನೋಂದಣಿ ಕಚೇರಿ ಹೊರತುಪಡಿಸಿದರೆ ಇತರ ಯಾವುದೇ ಇಲಾಖೆಯ ತಾಲೂಕು ಕಚೇರಿಗಳು ಇಲ್ಲಿಲ್ಲ.

    ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಅಬಕಾರಿ ನಿರೀಕ್ಷಕರ ಕಚೇರಿ, ಜಿಪಂ ಉಪವಿಭಾಗ ಸೇರಿ ಅನೇಕ ಕಚೇರಿಗಳು ಪ್ರಾರಂಭಗೊಂಡಿಲ್ಲ. ಈ ಭಾಗದ ಜನರ ಅನುಕೂಲಕ್ಕಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಮೂಡಲಗಿ ಪಟ್ಟಣದ ಸುಣಧೋಳಿ ರಸ್ತೆಯ ದನಗಳ ಪೇಟಿ ಪಕ್ಕದಲ್ಲಿ ಅಗ್ನಿಶಾಮಕ ದಳ ಠಾಣೆಗೆ ಸ್ಥಳ ಪರಿಶೀಲಿಸಿ, ಜಾಗವನ್ನೂ ಸಹ ನೀಡಲಾಗಿತ್ತು. ಆದರೆ, 2021 ಜೂನ್ 1 ರಂದು ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಹೊಸ ತಾಲೂಕಿಗೆ ಅಗ್ನಿಶಾಮಕ ಠಾಣೆಯನ್ನು ಸ್ಥಾಪಿಸುವ ಬಗ್ಗೆ ಹೊರಡಿಸಿದ ಆದೇಶ ಪತ್ರದಲ್ಲಿ ಮೂಡಲಗಿ ತಾಲೂಕು ಹೆಸರು ಮಾತ್ರ ಕಾಣೆಯಾಗಿತ್ತು.

    ಮೂಡಲಗಿ ತಾಲೂಕಿನ ಆಡಳಿತ ವ್ಯಾಪ್ತಿಗೆ 20 ಗ್ರಾಪಂಗಳ 48 ಗ್ರಾಮಗಳು ಬರುತ್ತವೆ. ವಿದ್ಯುತ್ ಹಾಗೂ ಬೆಂಕಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಗೋಕಾಕ ಅಥವಾ ಪಕ್ಕದ ಜಿಲ್ಲೆಯ ಗೋದಾವರಿ ಶುಗರ್ಸ್‌ ಕಾರ್ಖಾನೆಯಿಂದ ಅಗ್ನಿಶಾಮಕ ದಳ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹಿಂದೆ ಅನೇಕ ವಿದ್ಯುತ್ ಅವಘಡ ಹಾಗೂ ಗ್ಯಾಸ್ ಅವಘಡ ಸಂಭವಿಸಿ ಸಾಕಷ್ಟು ಹಾನಿ ಉಂಟಾಗಿತ್ತು. ಆದ್ದರಿಂದ ಅಗ್ನಿಶಾಮಕ ಠಾಣೆಯನ್ನು ನಿರ್ಮಿಸಬೇಕಿದೆ.

    ಮೂಡಲಗಿ ತಾಲೂಕಿಗೆ ಬರಬೇಕಾದ ಕಚೇರಿಗಳನ್ನು ತ್ವರಿತವಾಗಿ ಕಾರ್ಯಾರಂಭ ಮಾಡಬೇಕು. ಅಲ್ಲಿ ಪ್ರತ್ಯೇಕ ಅಧಿಕಾರಿಗಳ ನೇಮಕವಾಗಬೇಕಾಗಿದೆ. ರಾಜ್ಯ ಸರ್ಕಾರವು ಕೂಡಲೇ ಸಂಬಂಧಿಸಿದ ಕಚೇರಿಗಳನ್ನು ಆರಂಭಿಸಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಜನರ ಆಗ್ರಹವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts