More

    ಮುಶಿಗೇರಿ ಶಾಲೆಯಲ್ಲಿ ಶಿಕ್ಷಕರ ಕೊರತೆ

    ಗಜೇಂದ್ರಗಡ: ತಾಲೂಕಿನ ಮುಶಿಗೇರಿ ಗ್ರಾಮದ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿದೆ. ಆನ್​ಲೈನ್ ಪಾಠಕ್ಕೂ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಬರಬೇಕು ಅಂದು ಕೊಂಡಿರುವ ಮಕ್ಕಳು ಸೌಕರ್ಯ ಕೊರತೆಯಿಂದ ಸಮಸ್ಯೆ ಅನುಭವಿಸಲಿದ್ದಾರೆ.
    ಈ ಶಾಲೆಯಲ್ಲಿ ವಿಶಾಲವಾದ ಮೈದಾನವಿದೆ. ನೂರಾರು ವಿದ್ಯಾರ್ಥಿಗಳು ಓದುತ್ತಾರೆ. ಆದರೆ, ಶಿಕ್ಷಕರ ಕೊರತೆಯಿಂದ ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು 277 ವಿದ್ಯಾರ್ಥಿಗಳಿಗೆ ಐವರು ಶಿಕ್ಷಕರಿದ್ದಾರೆ. ಅದರಲ್ಲಿಯೂ ಇಬ್ಬರು ಆಗಸ್ಟ್​ನಲ್ಲಿ ನಿವೃತ್ತರಾಗುತ್ತಾರೆ. ಉಳಿದ ಶಿಕ್ಷಕರೂ 50 ವರ್ಷ ಮೇಲ್ಪಟ್ಟ ವಯೋಮಾನದವರೆ ಇದ್ದಾರೆ. ಈ ಶಾಲೆಯಲ್ಲಿ 1 ರಿಂದ 3ನೇ ತರಗತಿವರೆಗೂ ಕನ್ನಡ ಹಾಗೂ ಇಂಗ್ಲಿಷ್ ಮೀಡಿಯಂ ಇದೆ. ಅದರಲ್ಲಿ ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡಲು ಶಿಕ್ಷಕರಿದ್ದಾರೆ. ಆದರೆ, ಕನ್ನಡ ಮಾಧ್ಯಮದ 62 ವಿದ್ಯಾರ್ಥಿಗಳಿಗೆ ಒಬ್ಬರೇ ನಲಿಕಲಿ ಶಿಕ್ಷಕರಿದ್ದು ಮತ್ತೊಬ್ಬ ಶಿಕ್ಷಕರ ಅವಶ್ಯಕತೆ ಇದೆ. 4 ರಿಂದ 7 ತರಗತಿವರೆಗೂ 104 ವಿದ್ಯಾರ್ಥಿಗಳಿದ್ದಾರೆ. ಆದರೆ, ವಿಷಯವಾರು ಶಿಕ್ಷಕರೇ ಇಲ್ಲ.
    ಶೌಚಗೃಹವೂ ಇಲ್ಲ:
    ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಹೊರತುಪಡಿಸಿ, ಮಹಿಳಾ ಹಾಗೂ ಪುರುಷರ ಶೌಚಗೃಹವೇ ಇಲ್ಲ. ಹೀಗಾಗಿ ನಿಸರ್ಗ ಕರೆಗೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಯಲಿಗೆ ಹೋಗಬೇಕಾದ ಅನಿವಾರ್ಯತೆ ಇದೆ.
    ಶಿಕ್ಷಕರ ಹಿಂದೇಟು: ಮುಶಿಗೇರಿ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಗೆ ಬರುವ ಶಿಕ್ಷಕರಿಗೆ ವಸತಿ ಗೃಹಗಳಿವೆ. ಇಲ್ಲಿಗೆ ಬರುವ ಶಿಕ್ಷಕರು ಇಲ್ಲಿನ ವಸತಿ ಗೃಹದಲ್ಲಿಯೇ ವಾಸಿಸಬೇಕು ಎನ್ನುವುದು ಸರ್ಕಾರದ ನಿಯಮವಿದೆ. ಶಿಕ್ಷಕರ ವೇತನದ ಶೇ. 4 ರಿಂದ 5 ರಷ್ಟು ಬಾಡಿಗೆ ಹಣವನ್ನು ಅವರ ವೇತನದಲ್ಲಿ ಕಡಿತಗೊಳಿಸಲಾಗುತ್ತದೆ. ಇದರಿಂದ ಹೆಚ್ಚು ದುಡ್ಡು ನೀಡಿ ಗ್ರಾಮೀಣ ಪ್ರದೇಶದಲ್ಲಿ ಇರುವುದಕ್ಕಿಂತ ತಾಲೂಕು ಕೇಂದ್ರವಾದ ಗಜೇಂದ್ರಗಡದಲ್ಲಿ ಅದೇ ದರದಲ್ಲಿ ಬಾಡಿಗೆ ಮನೆಗಳು ಸಿಗುತ್ತವೆ. ಹಾಗೂ ಎಲ್ಲ ಅನೂಕೂಲಗಳು ಇರುತ್ತವೆ. ಹೀಗಾಗಿ ವಸತಿ ಗೃಹ ಇರದ ಶಾಲೆಗಳಿಗೆ ಹೋಗಲು ಶಿಕ್ಷಕರು ಹೆಚ್ಚು ಆಸಕ್ತಿ ತೋರಿಸುತ್ತಾರೆ.

    ಆನ್​ಲೈನ್ ಪಾಠಕ್ಕೆ ಅಡ್ಡಿ: ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಆನ್​ಲೈನ್ ಪಾಠ ಮಾಡಲು ಸೂಚಿಸಿದೆ. ಆದರೆ, ಈ ಶಾಲೆಯಲ್ಲಿ ಶಿಕ್ಷಕರಿಲ್ಲದೆ ಇರುವುದರಿಂದ ಆನ್​ಲೈನ್ ಪಾಠವೂ ಇಲ್ಲದ ಕಾರಣ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುತ್ತಾರೆ ಎಂದು ಪಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಕರೊನಾದಿಂದ ಮಕ್ಕಳ ಶಿಕ್ಷಣದ ಮೇಲೆ ದೊಡ್ಡ ಪರಿಣಾಮ ಬೀರಿದೆ. ಈ ನಡುವೆ ಶಿಕ್ಷಕರ ಕೊರತೆಯಿಂದ ಮತ್ತಷ್ಟು ತೊಂದರೆ ಅನುಭವಿಸಬೇಕಾಗಿದೆ. ಸರ್ಕಾರ ಶೀಘ್ರವೇ ಈ ಶಾಲೆಗೆ ಅವಶ್ಯ ಇರುವಷ್ಟು ಶಿಕ್ಷಕರನ್ನು ಭರ್ತಿ ಮಾಡಬೇಕು ಅಥವಾ ಅಲ್ಲಿಯವರೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಬೇಕು ಎನ್ನುತ್ತಾರೆ ಪಾಲಕರು.

    ಶಿಕ್ಷಕರ ವರ್ಗಾವಣೆಗಳು ಪ್ರಾರಂಭಗೊಂಡಿವೆ. ಆಗಲೂ ಶಿಕ್ಷಕರು ಈ ಶಾಲೆಗೆ ಬರದೆ ಇದ್ದರೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ತಾತ್ಕಾಲಿಕವಾಗಿ ಬೇರೆ ಶಾಲೆಯ ಶಿಕ್ಷಕರಿಂದ ಈ ಶಾಲೆಯ ವಿದ್ಯಾರ್ಥಿಗಳಿಗೆ ಆನ್​ಲೈನ್ ಪಾಠ ಪ್ರಾರಂಭಿಸಲಾಗುತ್ತದೆ.
    | ಗಾಯತ್ರಿ ಸಜ್ಜನ, ಬಿಇಒ ರೋಣ

    ಮುಶಿಗೇರಿಯ ಶಾಲೆಗೆ ಹೊಸದಾಗಿ ಬರುವ ವಿದ್ಯಾರ್ಥಿಗಳಿಗೇನೂ ಕಡಿಮೆ ಇಲ್ಲ. ಖಾಸಗಿ ಶಾಲೆಗಳಿಂದ ನಮ್ಮ ಶಾಲೆಗೆ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳುತ್ತಿದ್ದಾರೆ. ಆದರೆ, ಶಿಕ್ಷಕರಿಲ್ಲದೆ ಮಕ್ಕಳಿಗೆ ಕಲಿಸುವುದು ಹೇಗೆ ಎನ್ನುವುದು ದೊಡ್ಡ ಚಿಂತೆಯಾಗಿದೆ.
    | ಎ.ವೈ. ಗಜಾಕೋಶ, ಮುಖ್ಯೋಪಾಧ್ಯಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts