More

    ಮುಗಿಯದ ಮತ್ಸೃಕ್ಷಾಮ

    – ಪ್ರಕಾಶ್ ಮಂಜೇಶ್ವರ ಮಂಗಳೂರು

    ಪದೇಪದೆ ಸಂಭವಿಸಿದ ಚಂಡಮಾರುತ, ನಿರಂತರ ಕಾಡಿದ ಅತಿವೃಷ್ಟಿ ಬಳಿಕ ಕೂಡ ಕರಾವಳಿಯ ಮೀನುಗಾರಿಕೆ ಚೇತರಿಕೆ ಕಂಡಿಲ್ಲ. ಕರಾವಳಿಯ ದಕ್ಷಿಣಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಸುಮಾರು 75ರಷ್ಟು ಬೋಟ್‌ಗಳು ಕಡಲಿಗೆ ಇಳಿಯುತ್ತಿಲ್ಲ.
    ಕಡಲಿಗೆ ಇಳಿದ ಬೋಟುಗಳ ಪೈಕಿ ಶೇ.10 ಬೋಟುಗಳು ಮಾತ್ರ ಒಂದಷ್ಟು ಆದಾಯ ಗಳಿಸುತ್ತಿವೆ. ಉಳಿದವುಗಳ ಆದಾಯ ಡೀಸೆಲ್ ಖರ್ಚು ನೌಕರರ ವೇತನ, ಭರಿಸಲಿಕ್ಕೂ ಸಾಕಾಗುವುದಿಲ್ಲ. ಮಂಗಳೂರು, ಮಲ್ಪೆ ಮೀನು ಮಾರುಕಟ್ಟೆಗಳು ಎಂದಿನ ಲವಲವಿಕೆಯಿಲ್ಲದೆ ಬಣಗುಡುತ್ತಿವೆ. ಮಂಗಳೂರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳುವ ಬೋಟ್‌ಗಳಲ್ಲಿ ದುಡಿಯುವ ಕಾರ್ಮಿಕರಲ್ಲಿ ಬಹುಪಾಲು ಜನರು ತಮಿಳುನಾಡು ಹಾಗೂ ಆಂಧ್ರಪ್ರದೇಶದವರು. ಇವರ ಪೈಕಿ ಪೊಂಗಲ್ ಹಬ್ಬಕ್ಕೆ ಊರಿಗೆ ತೆರಳಿದ ಕಾರ್ಮಿಕರು ಆರಾಮವಾಗಿಯೇ ಕೆಲಸಕ್ಕೆ ಮರಳುವಂತೆ ಬೋಟ್ ಮಾಲೀಕರು ತಿಳಿಸಿದ್ದಾರೆ. ಯಾಕೆಂದರೆ ಹಿಡಿಯುವ ಮೀನುಗಳಲ್ಲಿ ಮೀನುಗಾರಿಕೆಗೆ ತಗಲುವ ವೆಚ್ಚವನ್ನೇ ಭರಿಸಲು ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ. ಮೀನುಗಳಿಗೆ ಇರುವ ಬೇಡಿಕೆಯ ಅತ್ಯಂತ ಒಂದು ಸಣ್ಣ ಪ್ರಮಾಣವಷ್ಟೇ ಪೂರೈಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಮೀನಿನ ದರ ಗಗನಕ್ಕೇರಿದೆ. ಸಾಮಾನ್ಯವಾಗಿ ಕೆಜಿಗೆ 80 ರೂ.ಇರುವ ಬೂತಾಯಿ ದರ 240 ರೂ.ವಿಗೆ ತಲುಪಿದೆ. ಮಾರುಕಟ್ಟೆಯಲ್ಲಿ ಲಭ್ಯವಾಗುತ್ತಿರುವ ತಮಿಳುನಾಡು, ಆಂಧ್ರಪ್ರದೇಶದ ಬೂತಾಯಿ ಮೀನುಗಳ ಗುಣಮಟ್ಟ ಒಳ್ಳೆಯದಿಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಸುಮಾರು 400 ರೂ.ಗೆ ದೊರೆಯುತ್ತಿದ್ದ ಅಂಜಲ್ ಮೀನು ದರ 700 ರೂ.ತನಕ ಏರಿಕೆಯಾಗಿದೆ.

    ಸಾಮಾನ್ಯವಾಗಿ ಮಳೆಗಾಲದ ಮೀನುಗಾರಿಕಾ ರಜೆ ಬಳಿಕ ಉತ್ತಮ ಮೀನು ಬೇಟೆ ಸಾಧ್ಯವಾಗುತ್ತದೆ. ಡಿಸೆಂಬರ್ ಕೊನೆ ಅಥವಾ ಜನವರಿಯಿಂದ ಕೆಲ ಕಾಲ ಹಿಡಿಯಲು ಸಾಧ್ಯವಾಗುವ ಮೀನುಗಳ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಆದರೂ ಇತ್ತೀಚಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಮೀನುಗಾರರಿಗೆ ತುಂಬ ನಷ್ಟವಾಗಿದೆ. ಹೆಚ್ಚಿನ ಮೀನುಗಾರರು, ಬೋಟ್ ಮಾಲೀಕರು ನಷ್ಟ ಅನುಭವಿಸಿದ್ದಾರೆ.
    – ನಿತಿನ್‌ಕುಮಾರ್, ಮೀನುಗಾರಿಕಾ ಮುಖಂಡರು, ಮಂಗಳೂರು

    ಇದು ಉತ್ತಮ ಮೀನುಗಾರಿಕೆಯ ಕಾಲವಲ್ಲ. ಆದರೂ ಪದೇಪದೆ ಕಾಣಿಸಿಕೊಂಡ ಚಂಡಮಾರುತದ ಪ್ರಭಾವವೂ ಮೀನಿನ ಕೊರತೆಗೆ ಒಂದು ಕಾರಣ ಇರಬಹುದು. ಸಮುದ್ರದ ಒಳಗಿನ ಆಂತರಿಕ ಪಲ್ಲಟಗಳು, ಒಳ ಪ್ರವಾಹದಿಂದ ಕೆಲವೊಮ್ಮೆ ಮೀನುಗಳ ಆಹಾರ, ಸಹಜ ಜೀವನಕ್ಕೆ ಧಕ್ಕೆ ತರುತ್ತದೆ. ಎಲ್‌ನಿನೋ(ಸಮುದ್ರದಲ್ಲಿ ತಾಪಮಾನ ವ್ಯತ್ಯಯದಿಂದ ಉಂಟಾಗುವ ಸ್ಥಿತಿ) ಪ್ರಭಾವದಿಂದ ಕರಾವಳಿಯಲ್ಲಿ ಬೂತಾಯಿ ಮೀನು ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ನಮ್ಮ ಸಂಸ್ಥೆ ಮುನ್ಸೂಚನೆ ನೀಡಿತ್ತು.
    – ಪ್ರತಿಭಾ ರೋಹಿತ್, ಪ್ರಧಾನ ವಿಜ್ಞಾನಿ, ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್‌ಆರ್‌ಐ)

    ಮಲ್ಪೆಯಲ್ಲಿ ಕೂಡ ಈ ಅವಧಿಯಲ್ಲಿ ಮೀನುಗಾರಿಕೆ ನಷ್ಟದಲ್ಲಿದೆ. ಶೇ.70 ಬೋಟ್‌ಗಳು ಕಡಲಿಗೆ ಇಳಿಯಲೇ ಇಲ್ಲ. ಇಳಿದಿರುವ ಬೋಟ್‌ಗಳಿಗೂ ಆದಾಯವಿಲ್ಲ. ಆದ್ದರಿಂದ ಸಹಜವಾಗಿಯೇ ಮಾರುಕಟ್ಟೆಗೆ ಬಂದಿರುವ ಮೀನುಗಳು ತುಸು ದುಬಾರಿಯಾಗಿದೆ.
    – ಸತೀಶ್ ಕುಂದರ್, ಮಾಜಿ ಅಧ್ಯಕ್ಷ, ಮಲ್ಪೆ ಮೀನುಗಾರರ ಸಂಘ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts