More

    ಮುಕ್ತ ವಿವಿಯ 95 ಸಾವಿರ ವಿದ್ಯಾರ್ಥಿಗಳು ನಿರಾಳ!

    ಮಂಜುನಾಥ ಟಿ.ಭೋವಿ ಮೈಸೂರು
    ಒಂದು ಕಡೆ ಯುಜಿಸಿ ಮಾನ್ಯತೆ ಇಲ್ಲ, ಮತ್ತೊಂದೆಡೆ ಅಧಿಕೃತ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರವೂ ಇಲ್ಲದೆ 6 ವರ್ಷಗಳಿಂದ ಡೋಲಾಯಮಾನ ಸ್ಥಿತಿಯಲ್ಲಿ ಹೊಯ್ದಡಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ 95 ಸಾವಿರ ವಿದ್ಯಾರ್ಥಿಗಳು ಈಗ ನಿರಾಳರಾಗಿದ್ದಾರೆ!

    ಹೈಕೋರ್ಟ್ ಆದೇಶದಿಂದ ಈ ವಿದ್ಯಾರ್ಥಿಗಳ ಸಮಸ್ಯೆ ಬಗೆಹರಿಯುವ ಹಂತಕ್ಕೆ ಬಂದಿದೆ. ಚಾತಕಪಕ್ಷಿಯಂತೆ ಕಾಯುವಿಕೆಯು ಕೊನೆಗೊಳ್ಳುತ್ತಿರುವುದರಿಂದ ಸಂತಸಗೊಂಡಿದ್ದಾರೆ.

    ಮುಕ್ತ ವಿವಿಯ 2013-14 ಮತ್ತು 2014-15ನೇ ಶೈಕ್ಷಣಿಕ ಸಾಲಿನ ಕೋರ್ಸ್‌ಗಳ ಮಾನ್ಯತೆಯನ್ನು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ರದ್ದುಪಡಿಸಿದೆ. 2018ರಿಂದ ಮುಕ್ತ ವಿವಿಯ ಮಾನ್ಯತೆ ನವೀಕರಣಗೊಂಡಿದ್ದರೂ ಈ ಉಭಯ ಸಾಲಿನ ಕೋರ್ಸ್‌ಗಳಿಗೆ ಮಾನ್ಯತೆ ಇಲ್ಲವಾಗಿದ್ದು, ಸತತ ಪ್ರಯತ್ನಗಳ ನಡುವೆಯೂ ಮಾನ್ಯತೆ ಕೊಡಲು ಯುಜಿಸಿ ಸತಾಯಿಸುತ್ತಿದೆ. ಹೀಗಾಗಿ, ಸ್ನಾತಕ, ಸ್ನಾತಕೋತ್ತರ ಪದವಿಗಳನ್ನು ಪೂರ್ಣಗೊಳಿಸಿದ್ದರೂ ಈ ಸಾಲಿನ ವಿದ್ಯಾರ್ಥಿಗಳಿಗೆ ಆರೇಳು ವರ್ಷಗಳಿಂದ ಅಂಕಪಟ್ಟಿ ಮತ್ತು ಪದವಿ ಪ್ರಮಾಣ ಪತ್ರ ನೀಡಿಲ್ಲ. ಇದರಿಂದ ಸಹಸ್ರಾರು ವಿದ್ಯಾರ್ಥಿಗಳು ಅತಂತ್ರರಾಗಿದ್ದಾರೆ.

    ಆದರೆ ಇದೀಗ ಹೈಕೋರ್ಟ್ ಮಧ್ಯಪ್ರವೇಶದಿಂದಾಗಿ ಬಿಕ್ಕಟ್ಟಿಗೆ ಪರಿಹಾರ ದೊರೆತಿದೆ. ಮಾನ್ಯತೆ ರದ್ದುಗೊಂಡ ಅವಧಿಯಲ್ಲಿ ಮುಕ್ತ ವಿವಿಯ ಇನ್‌ಹೌಸ್ ವಿದ್ಯಾರ್ಥಿಗಳಾಗಿ ವಿವಿಧ ತಾಂತ್ರಿಕೇತರ ಕೋರ್ಸ್‌ಗಳಲ್ಲಿ ಉತ್ತೀರ್ಣರಾದವರಿಗೆ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರ ಅಥವಾ ಘಟಿಕೋತ್ಸವ ಪ್ರಮಾಣಪತ್ರವನ್ನು ಎರಡು ತಿಂಗಳ ಒಳಗಾಗಿ ನೀಡುವಂತೆ ಹೈಕೋರ್ಟ್ ಆದೇಶಿಸಿದೆ.ಇದರ ಫಲವಾಗಿ 2013-14ನೇ ಸಾಲಿನಲ್ಲಿ 49,675 ಮತ್ತು 2014-15ನೇ ಸಾಲಿನಲ್ಲಿ 46,178 ಸೇರಿದಂತೆ ಒಟ್ಟು 95,853 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಅಂಕಪಟ್ಟಿ, ಪದವಿಪ್ರಮಾಣ ಪತ್ರ ಪಡೆದುಕೊಳ್ಳಲು ಕಾತರರಾಗಿದ್ದಾರೆ. ಈ ನಿಟ್ಟಿನಲ್ಲಿ ಮುಕ್ತ ವಿವಿ ಕೂಡ ಸಿದ್ಧತೆ ಮಾಡಿಕೊಂಡಿದೆ. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಯುಜಿಸಿ ಕೂಡ ಇದಕ್ಕೆ ಅನುಮತಿ ನೀಡುವುದು ಅನಿವಾರ್ಯವಾಗಿದೆ.

    2 ಲಕ್ಷ ವಿದ್ಯಾರ್ಥಿಗಳು ಇನ್ನೂ ಸಮಸ್ಯೆಯಲ್ಲಿ:
    ಇನ್‌ಹೌಸ್ ಕೋರ್ಸ್ ವಿದ್ಯಾರ್ಥಿಗಳಿಗೆ ಮಾತ್ರ ಹೈಕೋರ್ಟ್ ಆದೇಶ ಅನ್ವಯವಾಗಲಿದ್ದು, ವಿವಿಯ ನೇರ ವಿದ್ಯಾರ್ಥಿಗಳಿಗೆ ಪ್ರಯೋಜನ ದೊರೆಯಲಿದೆ. ಅಂತೆಯೆ, ಬಿಎ, ಬಿಕಾಂ, ಬಿಎಸ್ಸಿ ಇನ್ನಿತರ ತಾಂತ್ರಿಕೇತರ ಕೋರ್ಸ್‌ಗಳನ್ನು ಮಾತ್ರ ಪರಿಗಣಿಸಲಾಗಿದೆ.
    ಆದರೆ ಪಾಲುದಾರಿಕೆ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವದ ಬಾಹ್ಯ ವಿದ್ಯಾರ್ಥಿಗಳ ಕಷ್ಟಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಬಿಇ, ವೈದ್ಯಕೀಯ, ಅರೆ-ವೈದ್ಯಕೀಯ, ನರ್ಸಿಂಗ್, ಆಯುಷ್ ಸೇರಿದಂತೆ ವಿವಿಧ ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳ ಸಮಸ್ಯೆಯೂ ಹಾಗೆಯೇ ಮುಂದುವರಿದೆ. ಬಾಹ್ಯ ವಿದ್ಯಾರ್ಥಿಗಳು ಮತ್ತು ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳ ಸಂಖ್ಯೆ ಅಂದಾಜು 2 ಲಕ್ಷದಷ್ಟು ಇದೆ. ಬಹಳ ಸಂಕೀರ್ಣ ಮತ್ತು ಜಟಿಲವಾಗಿರುವ ಇವರ ಸಮಸ್ಯೆ ಬಗೆಹರಿಯುವ ಯಾವ ಲಕ್ಷಣಗಳೂ ಗೋಚರವಾಗುತ್ತಿಲ್ಲ. ಬಾಹ್ಯ ವಿದ್ಯಾರ್ಥಿಗಳು ಹಾಗೂ ತಾಂತ್ರಿಕ ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ ದೊರೆಯುವುದು ಕಷ್ಟಕರವಾಗಿದೆ. ಕೋರ್ಟ್ ಕೂಡ ಇವರ ನೆರವಿಗೆ ಬಂದಿಲ್ಲ ಎಂದು ಮುಕ್ತ ವಿವಿ ಮೂಲಗಳು ತಿಳಿಸಿವೆ. ಇವರಲ್ಲಿ ಬಹುತೇಕರು ಹೊರ ರಾಜ್ಯಗಳು ಮತ್ತು ವಿದೇಶದಲ್ಲಿರುವ ವಿದ್ಯಾರ್ಥಿಗಳೇ ಆಗಿದ್ದಾರೆ.

    ತ್ರಿಶಂಕು ಸ್ಥಿತಿ:
    220 ಪಾಲುದಾರಿಕೆ ಶೈಕ್ಷಣಿಕ ಸಂಸ್ಥೆಗಳ ಸಹಭಾಗಿತ್ವವನ್ನು ಈಗಾಗಲೇ ಮುಕ್ತ ವಿವಿ ರದ್ದುಪಡಿಸಿದ್ದು, ಅಂತಹ ಸಂಸ್ಥೆಗಳೊಂದಿಗೆ ವಿವಿ ಸಂಬಂಧವನ್ನು ಕಡಿದುಕೊಂಡಿದೆ. ಮುಕ್ತ ವಿವಿ ಮತ್ತು ಬಾಹ್ಯ ವಿದ್ಯಾರ್ಥಿಗಳ ನಡುವೆ ಸಂಪರ್ಕ ಸೇತುವೆಯಾಗಿ ಈ ಪಾಲುದಾರಿಕೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೀಗ ಈ ಸಂಪರ್ಕ ಸೇತುವೆಯೇ ಕುಸಿದುಹೋಗಿದೆ. ಪರಿಣಾಮ, ಅತ್ತ ವಿವಿ ಮತ್ತು ಇತ್ತ ಪಾಲುದಾರಿಕೆ ಸಂಸ್ಥೆಗಳ ಸಂಬಂಧ ಮತ್ತು ನೆರವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿಗೆ ಸಿಲುಕಿಕೊಂಡಿದ್ದಾರೆ.

    ದವಿ ಪ್ರಮಾಣಪತ್ರ ವಿತರಣೆ
    2013-14 ಮತ್ತು 2014-15ನೇ ಸಾಲಿನಲ್ಲಿ ಇನ್‌ಹೌಸ್ ಕೋರ್ಸ್‌ನ 95 ಸಾವಿರ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ಅಂಕಪಟ್ಟಿ ನೀಡಲಾಗಿದೆ. ಇದೀಗ ಅಧಿಕೃತ ಅಂಕಪಟ್ಟಿ ಮತ್ತು ಪದವಿ ಪ್ರಮಾಣಪತ್ರ ನೀಡಬೇಕಾಗಿದೆ.
    ಈ ವಿದ್ಯಾರ್ಥಿಗಳ ಕೋರ್ಸ್‌ಗಳಿಗೆ ಯುಜಿಸಿ ಮಾನ್ಯತೆ ಇಲ್ಲದಿದ್ದರೂ ರಾಜ್ಯ ಸರ್ಕಾರ ಈಗಾಗಲೇ ಮಾನ್ಯತೆ ಕೊಟ್ಟಿದೆ. ಈ ಅನುಕೂಲದಿಂದ ವಿದ್ಯಾರ್ಥಿಗಳು ಸರ್ಕಾರದ ಅಧೀನದ ಯಾವುದೇ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಬಡ್ತಿ ಪ್ರಯೋಜನವನ್ನೂ ಪಡೆದುಕೊಳ್ಳಬಹುದು. ಜತೆಗೆ, ರಾಜ್ಯದ ಯಾವುದೇ ವಿವಿಯಲ್ಲಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು. ಆದರೆ, ಹೊರ ರಾಜ್ಯದ ಸರ್ಕಾರಿ ನೇಮಕಾತಿ, ಬಡ್ತಿ ಮತ್ತು ಶೈಕ್ಷಣಿಕ ಚಟುವಟಿಕೆಗಳ ಪ್ರವೇಶಕ್ಕೆ ಅವಕಾಶ ಇರಲಿಲ್ಲ. ಯುಜಿಸಿ ಮಾನ್ಯತೆ ಬಳಿಕ ಇದಕ್ಕೂ ಪರಿಹಾರ ದೊರೆಯಲಿದೆ.

    2013-14 ಮತ್ತು 2014-15ನೇ ಸಾಲಿನ ಇನ್‌ಹೌಸ್ ವಿದ್ಯಾರ್ಥಿಗಳಿಗೆ ಈಗಾಗಲೇ ತಾತ್ಕಾಲಿಕ ಅಂಕಪಟ್ಟಿ ನೀಡಲಾಗಿದೆ. ಪದವಿ ಪ್ರಮಾಣಪತ್ರ ನೀಡುವುದು ಮಾತ್ರ ಬಾಕಿ ಇದೆ. ಯುಜಿಸಿಗೆ ಹೈಕೋರ್ಟ್ 2 ತಿಂಗಳ ಗಡುವು ನೀಡಿದೆ. ಅಲ್ಲಿಂದ ಅನುಮತಿ ಸಿಕ್ಕ ತಕ್ಷಣ ಅಂಕಪಟ್ಟಿ, ಪ್ರಮಾಣಪತ್ರ ನೀಡಲಾಗುವುದು.
    ಡಾ.ಎಸ್.ವಿದ್ಯಾಶಂಕರ್, ಕುಲಪತಿ, ಕರಾಮುವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts