More

    ಮುಂಡರಗಿ ಎಪಿಎಂಸಿಗೆ ಉಪ್ಪಿನಬೆಟಗೇರಿ ಅಧ್ಯಕ್ಷ

    ಮುಂಡರಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮಂಗಳವಾರ ಜರುಗಿತು. ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರವೀಂದ್ರ ಉಪ್ಪಿನಬೆಟಗೇರಿ, ಉಪಾಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ನೀಲಪ್ಪ ದೊಡ್ಡಮನಿ ಆಯ್ಕೆಯಾಗಿದ್ದಾರೆ.

    ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ರವೀಂದ್ರ ಉಪ್ಪಿನಬೆಟಗೇರಿ ಹಾಗೂ ಕಾಂಗ್ರೆಸ್ ಬೆಂಬಲಿತ ಶಿವಕುಮಾರಗೌಡ ಪಾಟೀಲ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಹೇಮಾವತಿ ಅಬ್ಬಿಗೇರಿ ಹಾಗೂ ಕಾಂಗ್ರೆಸ್ ಬೆಂಬಲಿತ ನೀಲಪ್ಪ ದೊಡ್ಡಮನಿ ಅವರು ನಾಮಪತ್ರ ಸಲ್ಲಿಸಿದ್ದರು.

    11 ಕೃಷಿ ಮತದಾರರ ಕ್ಷೇತ್ರದ ಸದಸ್ಯರು, ಓರ್ವ ಸಹಕಾರಿ ಸಂಸ್ಕರಣ ಸಂಘದ ಸದಸ್ಯ, ಓರ್ವ ಮಾರಾಟ ಸಹಕಾರಿ ಸಂಘದ ಸದಸ್ಯ, ಓರ್ವ ವರ್ತಕರ ಪ್ರತಿನಿಧಿ ಹಾಗೂ ಮೂವರು ನಾಮ ನಿರ್ದೇಶಿತ ಸದಸ್ಯರು ಸೇರಿ ಒಟ್ಟು 17 ಮತದಾರರಿದ್ದರು. ಅಧ್ಯಕ್ಷ ಸ್ಥಾನಕ್ಕೆ ರವೀಂದ್ರ ಉಪ್ಪಿನಬೆಟಗೇರಿ 9 ಮತ ಪಡೆದು ಜಯಶಾಲಿಯಾದರು. ಶಿವಕುಮಾರಗೌಡ ಪಾಟೀಲ ಅವರಿಗೆ 8 ಮತ ದೊರೆತವು. ಇನ್ನು ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಾದ ನೀಲಪ್ಪ ದೊಡ್ಡಮನಿ 9 ಮತಗಳನ್ನು ಪಡೆದು ಗೆಲವು ಸಾಧಿಸಿದರೆ, ಹೇಮಾವತಿ ಅಬ್ಬಿಗೇರಿ ಅವರು 8 ಮತಗಳನ್ನು ಪಡೆದು ಪರಾಭವಗೊಂಡರು.

    ಕಾರ್ಯಕರ್ತರ ಸಂಭ್ರಮ: ಅಧ್ಯಕ್ಷ ಸ್ಥಾನಕ್ಕೆ ರವೀಂದ್ರ ಉಪ್ಪಿನಬೆಟಗೇರಿ ಅವರು ಆಯ್ಕೆಯಾದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೂಮಾಲೆ ಹಾಕಿ, ಸಿಹಿ ಹಂಚಿ ಸಂಭ್ರಮಿಸಿದರು. ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ ರವೀಂದ್ರ ಅವರಿಗೆ ಹೂಮಾಲೆ ಹಾಕಿ ಶುಭಹಾರೈಸಿದರು.

    ಈ ವೇಳೆ ಮಾತನಾಡಿದ ಸಂಸದ ಶಿವಕುಮಾರ ಉದಾಸಿ, ‘ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲವಾಗಲಿದೆ. ಇದರಿಂದ ರೈತರು ತಮ್ಮ ಬೆಳೆಯನ್ನು ಬೇರೆ ಕಡೆಗಳಿಗೆ ಮಾರಾಟ ಮಾಡಬಹುದು. ಹೀಗಾಗಿ,ಸ ರೈತರ ಬೆಳೆಗೆ ಉತ್ತಮ ಬೆಲೆ ದೊರೆಯಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರವು ರೈತರ ಪರವಾಗಿದೆ’ ಎಂದರು.

    ಶಾಸಕ ಕಳಕಪ್ಪ ಬಂಡಿ ಮಾತನಾಡಿ, ‘ಇದುವರೆಗೂ ಕೆಲ ಪಟ್ಟಬದ್ಧ ಹಿತಾಸಕ್ತಿಗಳಿಂದ ಎಪಿಎಂಸಿಗೆ ಕರಿಛಾಯೆ ಆವರಿಸಿತ್ತು. ರವೀಂದ್ರ ಉಪ್ಪಿನಬೆಟಗೇರಿ ಅಧ್ಯಕ್ಷರಾಗುವ ಮೂಲಕ ಕರಿನೆರಳು ದೂರವಾಗಿದೆ. ರವೀಂದ್ರ ರೈತರ ಪರವಾಗಿ ಕಾರ್ಯನಿರ್ವಹಿಸುವರು’ ಎಂದರು.

    ಶಾಸಕ ರಾಮಣ್ಣ ಲಮಾಣಿ, ಎಪಿಎಂಸಿ ನೂತನ ಅಧ್ಯಕ್ಷ ರವೀಂದ್ರ ಉಪ್ಪಿನಬೆಟಗೇರಿ ಮಾತನಾಡಿದರು. ಕರಬಸಪ್ಪ ಹಂಚಿನಾಳ, ಹೇಮಗಿರೀಶ ಹಾವಿನಾಳ, ರವಿ ಕರಿಗಾರ, ಎಸ್.ವಿ. ಪಾಟೀಲ, ಭೀಮಸಿಂಗ್ ರಾಠೋಡ, ರಜನಿಕಾಂತ ದೇಸಾಯಿ, ದೇವಪ್ಪ ಕಂಬಳಿ, ಕೊಟ್ರೇಶ ಬಳ್ಳೊಳ್ಳಿ, ಡಾ.ಕುಮಾರಸ್ವಾಮಿ ಹಿರೇಮಠ, ಬೀರಪ್ಪ ಬಂಡಿ, ವೆಂಕನಗೌಡ ಪಾಟೀಲ, ಫಕನಗೌಡ ರಡ್ಡೇರ, ಶ್ರೀನಿವಾಸ ಅಬ್ಬಿಗೇರಿ, ಅಂದಪ್ಪ ಉಳ್ಳಾಗಡ್ಡಿ, ಯಲ್ಲಪ್ಪ ಗಣಾಚಾರಿ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts