More

    ಮೀಸಲು ಶಿಫಾರಸು ಮಾಡದಿದ್ದರೆ ಹೋರಾಟ – ಪುರುಷೋತ್ತಮಾನಂದ ಪುರಿ ಶ್ರೀ -ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಗೆ ಸ್ವಾಗತ

    ದಾವಣಗೆರೆ: ಕುಲಶಾಸ್ತ್ರೀಯ ಅಧ್ಯಯನ ಆಧರಿಸಿ ರಾಜ್ಯ ಸರ್ಕಾರ ಉಪ್ಪಾರ ಸಮಾಜಕ್ಕೆ ಮಾಸಾಂತ್ಯದೊಳಗೆ ಪ. ಜಾತಿ ಅಥವಾ ಪ. ಪಂಗಡ ಮೀಸಲಿಗೆ ಶಿಫಾರಸು ಮಾಡಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಇಲ್ಲವಾದಲ್ಲಿ ಮುಂದಿನ ಹಂತದ ಹೋರಾಟ ರೂಪಿಸಲಾಗುವುದು ಎಂದು ಭಗೀರಥ ಪೀಠದ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
    ದಾವಣಗೆರೆಗೆ ಭಾನುವಾರ ಆಗಮಿಸಿದ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆಯನ್ನು ಜಿಲ್ಲಾ ಭಗೀರಥ ಉಪ್ಪಾರ ಸಮಾಜದಿಂದ ಸ್ವಾಗತಿಸಿದ ಬಳಿಕ, ಇಲ್ಲಿನ ನಾಟ್ಯಾಚಾರ್ಯ ಕುಲಕರ್ಣಿ ರಸ್ತೆಯಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
    ಹಿಂದುಳಿದ ಉಪ್ಪಾರ ಸಮಾಜಕ್ಕೆ ಮೀಸಲಾತಿ ಅಗತ್ಯವಿದೆ ಎಂಬುದನ್ನು ಎಲ್.ಜಿ. ಹಾವನೂರು, ವೆಂಕಟಪ್ಪ, ಚಿನ್ನಪ್ಪರೆಡ್ಡಿ, ಮಂಡಳ ಆಯೋಗ ಸಮಿತಿಗಳು ವರದಿ ನೀಡಿದ್ದರೂ ಇದುವರೆಗೆ ಯಾರೂ ಕಲ್ಪಿಸಿಲ್ಲ. ಅಭಿವೃದ್ಧಿ ನಿಗಮ ಸ್ಥಾಪನೆ, ಭಗೀರಥ ಜಯಂತಿ ಆಚರಣೆಗೆ ಕ್ರಮ ವಹಿಸಿದ್ದ ಸಿದ್ದರಾಮಯ್ಯ ಮೀಸಲಾತಿ ಶಿಫಾರಸು ಮಾಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
    ಈಗಾಗಲೆ ಕುಲಶಾಸ್ತ್ರೀಯ ಅಧ್ಯಯನದ ಪ್ರಥಮ ಹಂತದ ವರದಿ ಸಲ್ಲಿಕೆಯಾಗಿದೆ. ಅಂತಿಮ ವರದಿ ಸಲ್ಲಿಸಬೇಕಿದೆ. ಉಪ್ಪಾರ ಸಮಾಜ ಮೀಸಲಾತಿ ಹೆಸರಲ್ಲಿ ಯಾರೊಬ್ಬರ ಅನ್ನ ಕಸಿಯುತ್ತಿಲ್ಲ. ಮೀಸಲು ದೊರೆತರೆ ಸಮಾಜದ ಮುಂದಿನ ಪೀಳಿಗೆಗೆ ಶಿಕ್ಷಣ, ಉದ್ಯೋಗ, ರಾಜಕೀಯ ಸ್ಥಾನಮಾನದ ಸೌಲಭ್ಯಗಳು ಸಿಗಲಿವೆ ಎಂದರು.
    ಉಪ್ಪಾರ ಸಮಾಜ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಭಿವೃದ್ಧಿ ದಿಸೆಯಿಂದ ಬಿಹಾರ ರಾಜ್ಯದಿಂದ ಆರಂಭವಾದ ಶ್ರೀ ಭಗೀರಥ ಭಾರತ ಜನಕಲ್ಯಾಣ ರಥಯಾತ್ರೆ ವಿವಿಧ ರಾಜ್ಯಗಳಲ್ಲಿ ಸಂಚರಿಸಿ, ಕರ್ನಾಟಕದಲ್ಲಿ ಬೀದರ್ ಮೂಲಕ ವಿವಿಧ ಜಿಲ್ಲೆಗಳಲ್ಲಿ ಹಾದು ದಾವಣಗೆರೆ ತಲುಪಿದೆ.
    ಫೆ. 29ರಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಈ ಯಾತ್ರೆ ಅಂತಿಮಗೊಂಡು ಸಮಾವೇಶಗೊಂಡು ಕೇಂದ್ರ ಸರ್ಕಾರಕ್ಕೆ ಹಲವು ಬೇಡಿಕೆಗಳನ್ನು ಆಗ್ರಹಿಸುವ ಉದ್ದೇಶವಿದೆ. ಖುಷಿಕೇಷ, ಹರಿದ್ವಾರದಲ್ಲಿ ಮಹರ್ಷಿ ಭಗೀರಥ ಮೂರ್ತಿ ಸ್ಥಾಪಿಸಬೇಕು. ಎಲ್ಲ ರಾಜ್ಯಗಳಲ್ಲೂ ಭಗೀರಥ ಜಯಂತ್ಯುತ್ಸವ ಆಚರಣೆಗೆ ಕ್ರಮವಾಗಬೇಕು. ರಾಷ್ಟ್ರ ಮಟ್ಟದಲ್ಲೂ ಅಭಿವೃದ್ಧಿ ನಿಗಮ ಸ್ಥಾಪಿಸಿ 2 ಸಾವಿರ ಕೋಟಿ ರೂ.ಗಳನ್ನು ತೆಗೆದಿರಿಸಬೇಕು ಎಂದು ಆಗ್ರಹಿಸಲಾಗುವುದು ಎಂದು ತಿಳಿಸಿದರು.
    ಭಗೀರಥ ಪೀಠದಿಂದ ಭಗೀರಥ ಮಹರ್ಷಿಗಳ 60 ಅಡಿ ಎತ್ತರದ ಏಕಶಿಲಾಮೂರ್ತಿ ಹಾಗೂ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುತ್ತಿದೆ. ಸಮಾಜದವರು ನೆರವು ನೀಡಬೇಕೆಂದರು.
    ಬೇರೆ ಬೇರೆ ರಾಜ್ಯಗಳಲ್ಲಿ ಉಪ್ಪಲಿ ಶೆಟ್ಟರು, ಉಪ್ಪಲಿ ನಾಯಕರು, ಲೋನಾರಿ ಕೊಂಟಿ ಇನ್ನಿತರೆ ಹೆಸರುಗಳಲ್ಲಿ ಉಪ್ಪಾರ ಸಮಾಜ ಕರೆಯಲ್ಪಡುತ್ತಿದ್ದು ದೇಶದಲ್ಲಿ 10 ಕೋಟಿ ಜನಸಂಖ್ಯೆ ಹೊಂದಿದೆ. ಬಡತನ, ಅನಕ್ಷರತೆ ಜತೆಗೆ ಮೌಢ್ಯವೂ ಹೆಚ್ಚಿದೆ. ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಕಾರ್ಯಕ್ರಮಗಳನ್ನು ಸಮಾಜ ಪಾಲಿಸಬೇಕಿದೆ ಎಂದರು.
    ಕಾರ್ಯಕ್ರಮದಲ್ಲಿ ನವದೆಹಲಿಯ ಶಿವಜಿ ಮಹತೋ ಚವ್ಹಾಣ್, ಪೂನಾದ ನಾರಾಯಣಶೆಟ್ಟಿ, ಡಾ.ಉಮೇಶ್‌ಬಾಬು, ಉಪ್ಪಾರ ಸಮಾಜದ ರಾಜ್ಯ ಗೌರವಾಧ್ಯಕ್ಷ ತುರ್ಚಘಟ್ಟ ಎಸ್. ಬಸವರಾಜಪ್ಪ, ದಾವಣಗೆರೆ ಜಿಲ್ಲಾಧ್ಯಕ್ಷ ಎಂ.ಸಿ. ರಮೇಶ್, ಎಚ್. ತಿಪ್ಪಣ್ಣ, ಮತ್ತಿ ಹನುಮಂತಪ್ಪ, ಜಿಲ್ಲಾ ಉಪಾಧ್ಯಕ್ಷ ಆರ್. ಪರಮೇಶ್ವರಪ್ಪ, ಬೆಂಗಳೂರು ಸಮಿತಿ ಜಿಲ್ಲಾ ಉಪಾಧ್ಯಕ್ಷೆ ಕವಿತಾ ರಾಜೇಶ್, ಸ್ಥಳೀಯ ಮುಖಂಡರಾದ ಎ.ಎಸ್. ಬಸವರಾಜಪ್ಪ, ಉಮಾಪ್ರಕಾಶ್, ಪ್ರಕಾಶ್, ಮಂಜಮ್ಮ, ಎನ್.ಎಸ್. ಚಂದ್ರಣ್ಣ, ಲೋಕೇಶ್, ಗಂಗಾಧರಪ್ಪ, ಡಾ. ನಾಗರಾಜ್, ಕೆ.ಬಿ. ಗಿರೀಶ್, ನಲ್ಕುಂದ ಹಾಲೇಶ್, ದಿವ್ಯಾ ಉಪ್ಪಾರ್, ರೇವಣಸಿದ್ದಪ್ಪ, ಬಂಗಾರಪ್ಪ ಇತರರಿದ್ದರು.
    ಕಾರ್ಯಕ್ರಮಕ್ಕೂ ಮುನ್ನ ನಗರಕ್ಕೆ ಆಗಮಿಸಿದ, ಮಹರ್ಷಿ ಭಗೀರಥ ಮೂರ್ತಿ ಇರಿಸಿದ ರಥಕ್ಕೆ ಅಭಿನವ ರೇಣುಕ ಮಂದಿರ ಆವರಣದಲ್ಲಿ ಸ್ವಾಗತಿಸಲಾಯಿತು. ಅಲ್ಲಿಂದ ಜಯದೇವ ವೃತ್ತದವರೆಗೆ ಮೆರವಣಿಗೆ ಮೂಲಕ ಕರೆತರಲಾಯಿತು. ಕುಂಭ ಹೊತ್ತ ಮಹಿಳೆಯರು, ಕಲಾತಂಡಗಳು ಭಾಗವಹಿಸಿದ್ದವು. ಪುರುಷರು ಬೈಕ್ ರ‌್ಯಾಲಿ ನಡೆಸಿದರು.
    ರಾಜಸ್ಥಾನದ ಜಾನಾಬಾಯಿ, ನಾರಾಯಣ್ ಮಾಳೆ, ಅಮೀರ್‌ಬಾಯಿ, ಪೂನಾದ ನಾರಾಯಣಶೆಟ್ಟಿ, ಅಹ್ಮದಾಬಾದ್‌ನ ಮದನ್‌ಬಾಯಿ, ಅನಿಲ್ ಇತರರು ಯಾತ್ರೆ ಮೂಲಕ ದಾವಣಗೆರೆ ಪ್ರವೇಶಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts