More

    ಮೀನು ಖರೀದಿಗೆ ಮುಗಿಬಿದ್ದ ಜನ

    ಹುಬ್ಬಳ್ಳಿ: ಸರಿ ಸುಮಾರು 2 ತಿಂಗಳ ಬಳಿಕ ಗಣೇಶಪೇಟ ಮೀನು ಮಾರುಕಟ್ಟೆಗೆ ಭಾನುವಾರದ ವೈಭವ ಮರಳಿ ಬಂದಿತ್ತು. ಜನ ಮುಗಿಬಿದ್ದು ಖರೀದಿಸಿದರು. ಪರಸ್ಪರ ಅಂತರ ಕಾಯ್ದುಕೊಳ್ಳಬೇಕೆಂಬ ನಿಯಮ ಪಾಲನೆಯಾಗಿಲ್ಲ.

    ದಾದಾ ಫಿಶ್ ಪ್ಯಾರಡೈಸ್ ಹಾಗೂ ಬಿಎಚ್​ಕೆ ಫಿಶ್ ಮಾಲ್​ನ ಮಾಲೀಕರು ಜನದಟ್ಟಣೆಯಾಗದಂತೆ ನೋಡಿಕೊಂಡಿದ್ದರು. ಗ್ರಾಹಕರಿಗೆ ಸ್ಯಾನಿಟೈಸರ್ ವ್ಯವಸ್ಥೆ ಮಾಡಿದ್ದರು. ಥರ್ಮಲ್ ಸ್ಕ್ರೀನಿಂಗ್ ಮಾಡಿ ಒಳಗೆ ಕಳುಹಿಸುತ್ತಿದ್ದರು. ಗ್ರಾಹಕರು ಸರದಿ ಸಾಲಿನಲ್ಲಿ ನಿಲ್ಲುವಂತೆ ನೋಡಿಕೊಂಡಿದ್ದರು.

    ಉಳಿದಂತೆ ಕಟ್ಟೆ (ಕಟ್ಟಾ) ಮೇಲಿನ ವ್ಯಾಪಾರಿಗಳ ಬಳಿ ಇಂಥ ವ್ಯವಸ್ಥೆ ಇರಲಿಲ್ಲ. ಜನರೂ ಮೈಮರೆತಿದ್ದರು. ಗಣೇಶಪೇಟ ಮೀನು ಮಾರುಕಟ್ಟೆಗೆ ಭಾನುವಾರ ರಾಜಕಳೆ ಇರುತ್ತದೆ. ಅಪಾರ ಪ್ರಮಾಣದಲ್ಲಿ ಮೀನು ಹಾಗೂ ಖರೀದಿಗೆ ಸಾಕಷ್ಟು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಉಳಿದ ದಿನಗಳಿಗೆ ಹೋಲಿಸಿದರೆ ಭಾನುವಾರ 8-10 ಪಟ್ಟು ಹೆಚ್ಚು ವ್ಯಾಪಾರವಾಗುತ್ತದೆ. ಸರ್ಕಾರಿ ರಜೆ ಎಂಬುದು ಇದಕ್ಕೆ ಮುಖ್ಯ ಕಾರಣ.

    ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ 2 ತಿಂಗಳಿಂದ ಗಣೇಶಪೇಟ ಮೀನು ಮಾರುಕಟ್ಟೆ ಬಂದ್ ಇತ್ತು. ಲಾಕ್​ಡೌನ್​ನಲ್ಲಿ ಸಡಿಲಿಕೆ ನೀಡಿದ್ದರೂ ಕಳೆದ ಭಾನುವಾರ ಮಾರಾಟಗಾರರು ಹೆಚ್ಚಿನ ಪ್ರಮಾಣದಲ್ಲಿ ಮೀನು ತಂದಿರಲಿಲ್ಲ. ಈ ಭಾನುವಾರ ಎಲ್ಲ ಬಗೆಯ ಮೀನುಗಳು ಸಾಕಷ್ಟು ಬಂದಿದ್ದವು. ಬಂಗುಡೆ, ತಾರ್ಲೆ, ಸುರ್ವ, ಸಂವದಾಳೆ, ಪಾಂಪ್ಲೆಟ್, ಚಟ್ಲಿ, ಇತ್ಯಾದಿ ಮೀನುಗಳು ಇದ್ದವು.

    ಬೆಲೆ ಹೆಚ್ಚು

    ಸಾಮಾನ್ಯ ದಿನಗಳಿಗಿಂತ ದರ ಏರಿಕೆಯಾಗಿತ್ತು. ದೊಡ್ಡ ಬಂಗುಡೆ ಪ್ರತಿ ಕೆಜಿಗೆ 350 ರೂ., ತಾರ್ಲೆ 240 ರೂ., ಚಟ್ಲಿ 450ರಿಂದ 500 ರೂ., ಸಂವದಾಳೆ 320ರಿಂದ 340 ರೂ., ದೊಡ್ಡ ಪಾಂಪ್ಲೆಟ್ 1000-1200 ರೂ., ಸುರ್ವ 900 ರೂ. ಬೆಲೆ ಪಡೆದುಕೊಂಡಿತ್ತು.

    ನಗರದಲ್ಲಿ ಚಿಕನ್ ಪ್ರತಿ ಕೆಜಿಗೆ 280 ರೂ. ಹಾಗೂ ಕುರಿ ಮಟನ್ 700 ರೂ. ಗೆ ಮಾರಾಟವಾಗಿದೆ. ಹಿಂದಿನ ಭಾನುವಾರ ಚಿಕನ್ ಬೆಲೆ 240 ರೂ. ಇತ್ತು. ಹಠಾತ್​ನೇ 40 ರೂ. ಜಿಗಿತ ಕಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಸಂಚಾರಿ ಮಾಂಸ ಮಾರಾಟ ಮಳಿಗೆಯೂ ಚಿಕನ್ ಪ್ರತಿ ಕೆಜಿಗೆ 300 ರೂ. ಹಾಗೂ ಮಟನ್ 700 ರೂ. ನಂತೆ ಮನೆ ಬಾಗಿಲಿಗೆ ತಲುಪಿಸಿದೆ. ಸಂಚಾರಿ ಮಾಂಸ ಮಾರಾಟ ಮಳಿಗೆ ನಗರದ ಎಲ್ಲ ಕಡೆ ಹೋಗುವುದಿಲ್ಲ.

    ಪಾಲಿಕೆ ದರಕ್ಕೆ ಮನ್ನಣೆ ಇಲ್ಲ

    ಏಪ್ರಿಲ್​ನಲ್ಲಿ ಪಾಲಿಕೆ ಅಧಿಕಾರಿಗಳು ಮಾಂಸ ಮಾರಾಟಗಾರರ ಸಭೆ ನಡೆಸಿ ಚಿಕನ್ ಹಾಗೂ ಮಟನ್ ಮಾರಾಟಕ್ಕೆ ದರ ನಿಗದಿ ಪಡಿಸಿದ್ದರು. ಮಟನ್ ಪ್ರತಿ ಕೆಜಿ ಗೆ 650 ರೂ. ಹಾಗೂ ಚಿಕನ್ 160ರಿಂದ 180 ರೂ. ಗೆ ಮಾರಾಟ ಮಾಡಬೇಕು. ಯಾರೂ ಮನ ಬಂದಂತೆ ದರ ನಿಗದಿ ಮಾಡಬಾರದು ಎಂದು ಪಾಲಿಕೆ ಆಯುಕ್ತರು ಸೂಚಿಸಿದ್ದರು. ಆದರೆ, ಮಾರಾಟಗಾರರು ಇದನ್ನು ಪಾಲನೆ ಮಾಡುತ್ತಿಲ್ಲ. ಲಾಕ್​ಡೌನ್ ಸಮಯದಲ್ಲಿ ಅಂಗಡಿ ತೆರೆಯಲು ಅವಕಾಶ ಪಡೆದು ಪಾಲಿಕೆ ನಿಗದಿಪಡಿಸಿದ್ದ ದರ ಒಪ್ಪಿಕೊಂಡಿದ್ದ ಮಾಂಸ ಮಾರಾಟಗಾರರು ಈಗ ವರಸೆ ಬದಲಾಯಿಸಿದ್ದಾರೆ. ಮಾಂಸದ ಕೊರತೆ ಉಂಟಾಗಿದೆ ಎಂದು ಸಬೂಬು ಹೇಳಿ ಮನಬಂದಂತೆ ದರ ಏರಿಕೆ ಮಾಡಿದ್ದಾರೆ. ಲಾಕ್​ಡೌನ್ ಸಮಯದಲ್ಲಾಗದ ಕೊರತೆ ಈಗ ಹೇಗೆ ಆಗಿದೆ ಎಂಬುದು ಮಾಂಸಪ್ರಿಯರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.

    ಚಿಕನ್ ಹಾಗೂ ಮಟನ್ ಮಾರಾಟ ದರದಲ್ಲಿ ಏರಿಕೆಯಾಗಿರುವುದು ಗಮನಕ್ಕೆ ಬಂದಿಲ್ಲ. ಪರಿಶೀಲಿಸಲು ಅಧಿಕಾರಿಗಳಿಗೆ ಹೇಳುತ್ತೇನೆ. ಮಾರಾಟಗಾರರು ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾಂಸ ಮಾರಾಟ ಮಾಡಿದರೆ ದೂರವಾಣಿ ಸಂಖ್ಯೆ-0836-2213888ಗೆ ಕರೆ ಮಾಡಿ ದೂರು ಸಲ್ಲಿಸಬಹುದು.

    | ಡಾ. ಸುರೇಶ ಇಟ್ನಾಳ, ಹುಧಾಮಪಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts