More

    ಮೀನುಗಾರರಿಗೆ ಶೂನ್ಯ ಬಡ್ಡಿ ದರ ಸಾಲ

    ಕಾರವಾರ/ಅಂಕೋಲಾ: ಮೀನುಗಾರರ ಸಾಲ ಮನ್ನಾ ಮಾಡುವ ಯೋಜನೆ ಇಲ್ಲ. ರೈತರಿಗೆ ನೀಡುವ ಮಾದರಿಯಲ್ಲಿ ಶೂನ್ಯ ಬಡ್ಡಿ ಹಾಗೂ ಶೇ. 2 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡುವ ಬಗ್ಗೆ ಲೀಡ್ ಬ್ಯಾಂಕ್ ಅಧಿಕಾರಿಗಳ ಜತೆ ರ್ಚಚಿಸಿ ಕ್ರಮ ವಹಿಸಲಾಗುವುದು ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಅಂಕೋಲಾದ ಬೆಳಂಬಾರ, ಬೇಲೆಕೇರಿ ಬಂದರು, ಕಾರವಾರದ ಮೀನು ಮಾರುಕಟ್ಟೆ ಸ್ಥಳ ವೀಕ್ಷಿಸಿ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. 50 ಸಾವಿರ ರೂ. ಮಿತಿಗೆ ಒಳಪಡಿಸಿ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಮೀನುಗಾರರು ಪಡೆದ ಸಾಲ ಮನ್ನಾ ಜಾರಿ ಮಾಡಿ ಹಣ ಬಿಡುಗಡೆಯಾಗಿದೆ. ಇದರಿಂದ 23 ಸಾವಿರ ಮೀನುಗಾರರಿಗೆ 65 ಕೋಟಿ ರೂ. ಅನುಕೂಲವಾಗಿದೆ. ಆದರೆ, ಇದರಲ್ಲಿ ಶೇ. 80 ರಷ್ಟು ಉಡುಪಿ ಜಿಲ್ಲೆಯವರಿಗೆ ಹಾಗೂ ಶೇ. 20 ರಷ್ಟು ಮಾತ್ರ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯವರಿಗೆ ಅನುಕೂಲವಾದ ಮಾಹಿತಿ ಇದೆ ಎಂದು ಹೇಳಿದರು.

    ಮೀನುಗಾರರಿಗೆ ಯಾವುದೇ ವಿಶೇಷ ಪ್ಯಾಕೇಜ್ ಕೊಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಆದರೆ, ಕಳೆದ ಮಾರ್ಚ್​ನಿಂದ ಬಿಡುಗಡೆಯಾಗದ ಡೀಸೆಲ್ ಸಬ್ಸಿಡಿಯನ್ನು ವಾರದಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸಲಾಗುವುದು. 2016ರಿಂದ ಬಿಡುಗಡೆಯಾಗದ ಮೀನುಗಾರಿಕೆ ಉಳಿತಾಯ ಪರಿಹಾರ ಯೋಜನೆಯ 500 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ತನ್ನ ಪಾಲನ್ನು ಬಿಡುಗಡೆ ಮಾಡಿದ್ದು, ಶೀಘ್ರ ರೈತರಿಗೆ ಪರಿಹಾರ ಸಿಗಲಿದೆ ಎಂದರು.

    ರಾಜ್ಯಕ್ಕೆ 4 ಸಾವಿರ ಕೋಟಿ: ಕೇಂದ್ರ ಸರ್ಕಾರ ಮೀನುಗಾರಿಕೆಯನ್ನು ಕೃಷಿ ಎಂದು ಪರಿಗಣಿಸಿ ಸುತ್ತೋಲೆ ಹೊರಡಿಸಿದೆ. ನೀಲಿ ಕ್ರಾಂತಿ ಯೋಜನೆಯಲ್ಲಿ 20 ಸಾವಿರ ಕೋಟಿ ರೂ.ಗಳನ್ನು ಐದು ವರ್ಷಗಳಲ್ಲಿ ಹೂಡಿಕೆ ಮಾಡುತ್ತಿದೆ. ಇದರಲ್ಲಿ ರಾಜ್ಯಕ್ಕೆ 3.5 ರಿಂದ 4 ಸಾವಿರ ಕೋಟಿ ರೂ. ಹಣ ಬರುವ ನಿರೀಕ್ಷೆ ಇದೆ ಎಂದು ಪೂಜಾರಿ ಹೇಳಿದರು.

    ಕೇಂದ್ರ ಸರ್ಕಾರದಿಂದ ಬರುವ ಅನುದಾನದಲ್ಲಿ ಯಾವ ರೀತಿ ಅಭಿವೃದ್ಧಿ ಮಾಡಬೇಕು ಎಂಬ ಬಗೆಗೆ ಮೀನುಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿಗಳು, ಮೀನುಗಾರಿಕೆಯ ಬಗ್ಗೆ ಮಾಹಿತಿ ಇರುವ ಶಾಸಕರು, ಮೀನುಗಾರರ ಮುಖಂಡರನ್ನು ಹಂತ ಹಂತವಾಗಿ ಕರೆಸಿ ಸಭೆ ನಡೆಸಲಾಗುತ್ತಿದೆ. ಒಳನಾಡು ಮೀನುಗಾರಿಕೆ, ಪಂಜರ ಕೃಷಿ, ಶೀತಲೀಕರಣ ಘಟಕಗಳು, ಮೀನು ಸಂಸ್ಕರಣ ಘಟಕಗಳ ಅಭಿವೃದ್ಧಿ ಬಗ್ಗೆ ಯೋಜಿಸಲಾಗುವುದು ಎಂದರು.

    ಕೊಚ್ಚಿ ಹೋದ ರಸ್ತೆ, ಶಾಶ್ವತ ಪರಿಹಾರಕ್ಕೆ ಚಿಂತನೆ:

    ರಾಜ್ಯದ ಕಡಲ ತೀರದ ಗುಂಡ ನಬಾರ್ಡ್ ನೆರವಿನಲ್ಲಿ ನಡೆಯುತ್ತಿರುವ 925 ಕೋಟಿಗಳ ಅಲೆ ತಡೆಗೋಡೆ ಕಾಮಗಾರಿ ಅಸಮರ್ಪಕವಾಗಿರುವ ಆರೋಪವಿದೆ. ಕಡಲ ತೀರದಲ್ಲಿ ಬರೀ ಕಲ್ಲು ಹಾಕುವ ಬದಲು ಶಾಶ್ವತ ಯೋಜನೆ ರೂಪಿಸುವ ಚಿಂತನೆ ನಡೆದಿದೆ ಎಂದು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಗಾಬೀತ ಕೇಣಿಯಲ್ಲಿ ಕಡಲ ಕೊರೆತಕ್ಕೆ ರಸ್ತೆ, ಮನೆಗಳು, ದೇವಸ್ಥಾನ ಸಂಪೂರ್ಣ ಕೊಚ್ಚಿ ಹೋಗುತ್ತಿವೆ. ಮೀನುಗಾರರ ಮನೆಗಳಿಗೆ ನುಗ್ಗುವ ಆತಂಕವಿದೆ ಎಂದು ಸ್ಥಳೀಯ ಪ್ರಮುಖ ಶ್ರೀಕಾಂತ ದುರ್ಗೆಕರ್​ಅವರಿಂದ ಸಮಸ್ಯೆ ಆಲಿಸಿ ಮಾತನಾಡಿದರು.

    140 ಕೋಟಿ ವೆಚ್ಚದಲ್ಲಿ ಬೆಳಂಬಾರ ಮೀನುಗಾರಿಕೆ ಜಟ್ಟಿ ನಿರ್ಮಾಣ ಸಂಬಂಧ ಸಚಿವ ಸಂಪುಟ ಅನುಮೋದನೆಯನ್ನು ಶೀಘ್ರ ಪಡೆಯಲಾಗುವುದು. ಗಾಬೀತ ಕೇಣಿ ಅಲೆ ತಡೆಗೋಡೆ ಕಾಮಗಾರಿಗೆ 5.50 ಕೋಟಿ ರೂ. ಸೇರಿ ವಿವಿಧ 17.50 ಕೋಟಿ ರೂ.ಗಳ ಕಾಮಗಾರಿಗಳಿಗೆ ಮೀನುಗಾರಿಕೆ ಇಲಾಖೆಯಿಂದ ಮಂಜೂರಾತಿ ಆದೇಶ ದೊರಕಿದೆ ಎಂದರು. ಶಾಸಕಿ ರೂಪಾಲಿ ನಾಯ್ಕ, ಎಂಎಲ್​ಸಿ ಎಸ್.ವಿ. ಸಂಕನೂರು ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

    ದೇವಸ್ಥಾನಗಳನ್ನು ತೆರೆಯಲು ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತದಿಂದ ಪ್ರತ್ಯೇಕ ಆದೇಶ ಬೇಕಿಲ್ಲ.ಹಲವು ಭಕ್ತರ ಬಹು ದಿನದ ಬೇಡಿಕೆ ಈಡೇರಿಸಿದ ಸಂತೋಷವಿದೆ. ಆವರಣದಲ್ಲಿ ಶುಚಿತ್ವ ಕಾಪಾಡಲು ಸೂಚಿಸಲಾಗಿದೆ. ಹಂತ, ಹಂತವಾಗಿ ವಿವಿಧ ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಚಿಂತನೆ ನಡೆದಿದೆ.
    ಕೋಟ ಶ್ರೀನಿವಾಸ ಪೂಜಾರಿ ಮುಜರಾಯಿ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts