More

    ಮಾ.೩ ರಿಂದ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮ

    ಬಾಗಲಕೋಟೆ: ಜಿಲ್ಲೆಯಾದ್ಯಂತ ಮಾರ್ಚ ೩ ರಿಂದ ನಾಲ್ಕು ದಿನಗಳ ಕಾಲ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿದ್ದು, ೫ ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್ ಪಾಲಕರಲ್ಲಿ ಮನವಿ ಮಾಡಿಕೊಂಡರು.

    ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಶುಕ್ರವಾರ ಜರುಗಿದ ಪಲ್ಸ್ ಪೊಲೀಯೋ ಲಸಿಕಾ ಕಾರ್ಯಕ್ರಮದ ಕುರಿತು ಜಿಲ್ಲಾ ಮಟ್ಟದ ಕಾರ್ಯಪಡೆಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮಾರ್ಚ ೩ ರಂದು ಬೂತ್ ಮಟ್ಟದಲ್ಲಿ ನಡೆಸಲಾಗುತ್ತಿದ್ದು, ನಂತರದ ಮೂರು ದಿನ ಮನೆ ಮನೆಗೆ ತೆರಳಿ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ ಎಂದು ತಿಳಿಸಿದರು.

    ಪೊಲಿಯೋ ಒಂದು ಮಾರಕ ರೋಗವಾಗಿದ್ದು, ೫ ವರ್ಷದೊಳಗಿನ ಯಾವುದೇ ಮಗು ಈ ಕಾರ್ಯಕ್ರಮದಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು. ಈ ಲಸಿಕಾ ಕಾರ್ಯಕ್ರಮಕ್ಕೆ ಗ್ರಾ.ಪಂ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಿ, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಬರತಕ್ಕದ್ದು. ನಗರ, ಸ್ಲಂ ಪ್ರದೇಶಗಳಲ್ಲಿ ವಿಶೇಷ ಗಮನ ಹರಿಸಬೇಕು. ಅಲ್ಲದೇ ಜಿಲ್ಲೆಯ ಕಬ್ಬು ಕಡೆಯುವ ಗ್ಯಾಂಗ್‌ನ ಮತ್ತು ಇಟ್ಟಂಗಿ ಬಟ್ಟಿಯಲ್ಲಿನ ಮಕ್ಕಳು ಸಹ ಲಸಿಕೆಯಿಂದ ವಂಚಿತರಾಗದAತೆ ಕ್ರಮವಹಿಸಬೇಕು. ಸಂಘ ಸಂಸ್ಥೆಗಳ ಸಹಕಾರ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸಲು ಸಿಇಓ ಹೇಳಿದರು.

    ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಸುವರ್ಣ ಕುಲಕರ್ಣಿ ಮಾತನಾಡಿ ನಗರ ಪ್ರದೇಶದಲ್ಲಿ ೭೬೩೪೮ ಹಾಗೂ ಗ್ರಾಮೀಣ ಪ್ರದೇಶದಲ್ಲಿ ೧೪೯೬೬೧ ಸೇರಿ ಒಟ್ಟು ೨೨೬೦೦೯ ಮಕ್ಕಳಿದ್ದು, ೪೧೮೪೫೮ ಕುಟುಂಬಗಳಿವೆ. ಲಸಿಕಾ ಕಾರ್ಯಕ್ಕೆ ಒಟ್ಟು ೧೩೦೨ ಬೂತ್‌ಗಳನ್ನು ಸ್ಥಾಪಿಸಲಾಗಿದೆ. ಅಲ್ಲದೇ ೮೦ ಮೊಬೈಲ್ ಟೀಮ್‌ಗಳನ್ನೂ ಕೂಡ ಸ್ಥಾಪಿಸಲಾಗಿದೆ. ಪ್ರತಿ ಬೂತ್‌ಗೆ ಇಬ್ಬರು ಸದಸ್ಯರು, ಐದು ತಂಡಕ್ಕೆ ಒಬ್ಬ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದು, ಪ್ರತಿ ಬೂತ್ ಮಟ್ಟದ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ತೆರಳಿ ತಪ್ಪದೇ ಪೋಲಿಯೊ ಹನಿ ಹಾಕಲಿದ್ದಾರೆ ಎಂದರು.

    ಲಸಿಕಾ ಕಾರ್ಯಕ್ರಮಕ್ಕೆ ೨೮೪೨ ಸಿಬ್ಬಂದಿಗಳು, ೨೬೩ ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಬಾಗಲಕೋಟ ೪೦೨೬೬, ಬಾದಾಮಿ, ೪೦೯೪೬, ಬೀಳಗಿ ೨೩೧೩೬, ಹುನಗುಂದ ೪೩೨೫೬, ಮುಧೋಳ ೪೯೫೯೨ ಹಾಗೂ ಜಮಖಂಡಿ ೭೬೩೫೨ ಸೇರಿ ಜಿಲ್ಲೆಯಾದ್ಯಂತ ಒಟ್ಟು ೨೭೩೫೪೮ ಹನಿ ಪೋಲಿಯೋ ಹನಿ ಹಾಕಲಾಗುತ್ತದೆ. ಈ ಕಾರ್ಯಕ್ರಮಕ್ಕೆ ೭೭ ವಾಹನಗಳು ಅವಶ್ಯವಿದ್ದು, ಈಗಾಗಲೇ ೨೮ ಇಲಾಖೆ ವಾಹನಗಳಿದ್ದು, ಹೆಚ್ಚುವರಿ ೪೯ ವಾಹನಗಳು ಅವಶ್ಯಕತೆ ಇದರುವುದಾಗಿ ಸಭೆಗೆ ತಿಳಿಸಿದರು.

    ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಕುಮಾರ ಯರಗಲ್ಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಡಿ.ಬಿ.ಪಟ್ಟಣಶೆಟ್ಟಿ, ವಿಶ್ವ ಆರೋಗ್ಯ ಸಂಸ್ಥೆಯ ಡಾ.ಮುಕುಂದ ಗಲಗಲಿ, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಕುಸುಮಾ ಮಾಗಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ದಯಾನಂದ ಕರೆನ್ನವರ, ರೋಟರಿ ಕ್ಲಬ್‌ನ ಪ್ರತಿನಿಧಿ ಪರಾಂಡೆ, ಚಿಕ್ಕ ಮಕ್ಕಳ ತಜ್ಞ ಡಾ.ರಮೇಶ ಪೋಳ ಸೇರಿದಂತೆ ಆಯಾ ತಾಲೂಕಾ ಆರೋಗ್ಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts