More

    ಮಾಸ್ಕ್ ವಿತರಣೆಯಲ್ಲಿ ರಾಷ್ಟ್ರಪ್ರೇಮ

    ಮರಿದೇವ ಹೂಗಾರ ಹುಬ್ಬಳ್ಳಿ

    ಕರೊನಾ ಸೋಂಕು ತಡೆಗೆ ಇಲ್ಲೊಂದು ವಿನೂತನ ಪ್ರಯೋಗ ನಡೆದಿದೆ. ಮನೆಯಲ್ಲಿಯೇ ಇದ್ದು ಕರೊನಾ ಹೊಡೆದೋಡಿಸಲು ರಾಷ್ಟ್ರಪ್ರೇಮದ ಸಂಕೇತವಾದ ಬಟ್ಟೆಗಳ್ನು ಬಳಸಿ ಮಾಸ್ಕ್ ತಯಾರಿಸಲಾಗುತ್ತಿದೆ. ನಿತ್ಯ ಮಾಸ್ಕ್ ತಯಾರಿಸಲು, ಹಂಚಲು ದಂಪತಿ ಶ್ರಮಿಸುತ್ತಿದ್ದಾರೆ.

    ಹಳೇ ಹುಬ್ಬಳ್ಳಿಯ ಜಗದೀಶ ನಗರದ ನಿವಾಸಿಗಳಾದ ಮಂಜುನಾಥ ಬ್ಯಾಡಗಿ ಅವರ ಪತ್ನಿ ಸುನೀತಾ ಬ್ಯಾಡಗಿ ಅವರು ಸದ್ಯ ಇದನ್ನೇ ಕಾಯಕವಾಗಿ ಮಾಡಿಕೊಂಡಿದ್ದಾರೆ. ಮಾಸ್ಕ್ ತಯಾರಿಸಿ ವಿವಿಧ ಬಡಾವಣೆಗಳಿಗೆ ತೆರಳಿ ಉಚಿತವಾಗಿ ಹಂಚುತ್ತಿರುವುದು ವಿಶೇಷ.

    ಟೇಲರಿಂಗ್ ಕೆಲಸ ಮಾಡುವ ಸುನೀತಾ ನಿತ್ಯ 50 ಮಾಸ್ಕ್​ಗಳನ್ನು ಹೊಲಿಯುತ್ತಿದ್ದಾರೆ. ತಲಾ ಎರಡು ಮೀಟರ್ ಬಟ್ಟೆಯಿಂದ ಕೇಸರಿ, ಬಿಳಿ, ಹಸಿರು ಬಣ್ಣದ ಮಾಸ್ಕ್ ಸಿದ್ಧಗೊಳಿಸುತ್ತಿದ್ದಾರೆ. ಪತಿ ಮಂಜುನಾಥ ಅವರು ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಮಾಸ್ಕ್ ಧರಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಅದರಲ್ಲೂ ಮಕ್ಕಳು ಮತ್ತು ವಯಸ್ಸಾದರಿಗೆ ರೋಗ ನಿರೋಧಕ ಶಕ್ತಿಕಡಿಮೆ ಎಂದು ಅರಿತಿರುವ ದಂಪತಿ ಅವರಿಗಾಗಿಯೇ ವಿವಿಧ ಅಳತೆಯ ಮಾಸ್ಕ್​ಗಳನ್ನು ತಯಾರಿಸಿ ಹಂಚುತ್ತಿದ್ದಾರೆ.

    ಮೊದಲು ನಮಗೆ ನ್ಯಾಯ ಸಿಗುವಂತಾಗಲಿ ಎಂದು ನ್ಯಾಯದೇವತೆ ಕಣ್ಣಿಗೆ ಧರಿಸುವ ಕಪ್ಪು ಬಟ್ಟೆಯ ಮಾಸ್ಕ್ ತಯಾರಿಸಲಾಗುತ್ತಿತ್ತು. ಆಕಾಶದಷ್ಟು ಭಾರತೀಯರ ಮನಸ್ಸು ವಿಶಾಲ ಕರೊನಾ ಸೋಂಕಿನಿಂದ ಸಂಕುಚಿತರಾಗದಿರಲಿ ಎಂದು ನೀಲಿ ಬಣ್ಣದ ಮಾಸ್ಕ್ ತಯಾರಿಸಿದರು. ಹಸಿರು ನೆಟ್ಟು ಭಾರತವನ್ನು ಉಸಿರಾಡುವಂತೆ ಮಾಡೋಣ, ಕರೊನಾ ಸೋಂಕಿತರಿಗೆ ಶ್ವಾಸಕೋಶದ ಸಮಸ್ಯೆಯಾಗದಂತೆ ನೋಡಿಕೊಳ್ಳೋಣ ಎಂದು ಹಸಿರು ಬಣ್ಣದ ಮಾಸ್ಕ್ ತಯಾರಿಸಿ ಹಂಚಿದರು. ಈಗ ನಮ್ಮ ದೇಶ ಉಳಿಯಬೇಕೆಂದರೆ ರಾಷ್ಟ್ರಪ್ರೇಮವೊಂದೇ ದಾರಿ ಎಂದು ನಂಬಿರುವ ಈ ದಂಪತಿ ಮೂರು ಬಣ್ಣದಲ್ಲಿ ಮಾಸ್ಕ್​ಗಳನ್ನು ಸಿದ್ಧಪಡಿಸಿ ಹಂಚುತ್ತಿದ್ದಾರೆ.

    ಮಾದರಿ ಕಾರ್ಯ: ಕುಟುಂಬ ಆರ್ಥಿಕವಾಗಿ ಸದೃಢವೇನಲ್ಲ. ಆದರೂ ರಾಷ್ಟ್ರದ ಮೇಲಿನ ಭಕ್ತಿಗೆ ಈ ರೀತಿ ಕಾರ್ಯ ನಡೆಸುತ್ತಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ.

    ದೇಶ ಭಕ್ತಿಯಿಂದ ಮನೆಯಲ್ಲಿರಲಿ ಅಂತ ಈ ರೀತಿ ಪ್ರಯೋಗ ಮಾಡಿದಿವಿ. ನಮ್ಮ ರಾಷ್ಟ್ರ ಉಳಿಯಬೇಕೆಂದರೆ ದೇಶಪ್ರೇಮ ಎಲ್ಲರಲ್ಲೂ ಮೈಗೂಡಬೇಕು. ಹಾಗಾಗಿಯೇ ಕೇಸರಿ, ಬಿಳಿ, ಹಸಿರು ಇರುವ ಮಾಸ್ಕ್ ಧರಿಸಲು ಹೇಳುತ್ತಿದ್ದೇವೆ. -ಸುನೀತಾ ಮಂಜುನಾಥ ಬ್ಯಾಡಗಿ, ಟೈಲರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts