More

    ಮಾಸ್ಕ್ ಧರಿಸದಿದ್ದರೆ 100 ರೂ. ದಂಡ

    ಹಾವೇರಿ: ಕರೊನಾ ತಡೆಗಟ್ಟಲು ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪರಸ್ಪರ ಅಂತರ ಕಾಪಾಡಿಕೊಳ್ಳಬೇಕು. ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಹೇಳಿದರು.

    ನಗರದಲ್ಲಿ ಕರೊನಾ ನಿಯಂತ್ರಣ ಕುರಿತು ಮಾಸ್ಕ್ ಜಾಗೃತಿ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು ಈ ಮೊದಲು ಕಡ್ಡಾಯವಾಗಿ ಮಾಸ್ಕ್ ಧರಿಸುತ್ತಿದ್ದರು. ಪರಸ್ಪರ ಅಂತರ ಕಾಪಾಡಿಕೊಂಡಿದ್ದರು. ಹಾಗಾಗಿ ಕೋವಿಡ್ ನಿಯಂತ್ರಣದಲ್ಲಿತ್ತು. ಈಗ ಅಜಾಗರೂಕತೆ ತೋರುತ್ತಿದ್ದಾರೆ. ಇದರಿಂದ ಜಿಲ್ಲೆಯ ಆರೋಗ್ಯ ವ್ಯವಸ್ಥೆ ಒತ್ತಡದಲ್ಲಿದೆ. ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ ಎಂದರು.

    ಸೋಂಕಿತರು ಹೋಂ ಐಸೊಲೇಷನ್​ನಲ್ಲಿರಲು ಅನುಮತಿ ನೀಡಲಾಗಿತ್ತು. ಚಿಕಿತ್ಸೆ ಪಡೆಯಲು ನಿರ್ಲಕ್ಷ್ಯಹಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಿಸದೇ ಮರಣ ಪ್ರಮಾಣ ಅಧಿಕವಾಗಿತ್ತು. ಈಗ ಮರಣ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯ ಪ್ರಮಾಣ ಶೇ.1.18ರಷ್ಟಿದೆ. ಈ ಹಿಂದೆ ಮಾಸ್ಕ್ ಧರಿಸದೇ ನಿರ್ಲಕ್ಷ್ಯ ವಹಿಸಿದವರಿಂದ ಈವರೆಗೆ 6 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಮತ್ತೆ ದಂಡ ವಿಧಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಾಸ್ಕ್ ಧರಿಸದೇ ಇದ್ದವರಿಗೆ 100ರೂ. ದಂಡ ವಿಧಿಸುವ ಪ್ರಕ್ರಿಯೆ ಗುರುವಾರದಿಂದಲೇ ತೀವ್ರಗೊಳಿಸಲಾಗಿದೆ ಎಂದರು.

    ಮಾಸ್ಕ್ ಜಾಗೃತಿಯ ಮೊದಲ ದಿನ 3 ಸಾವಿರ ರೂ. ದಂಡ ವಸೂಲಿ ಮಾಡಲಾಯಿತು. ಸಾರ್ವಜನಿಕರಲ್ಲಿ ಕೋವಿಡ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರಸಭೆ, ಕಂದಾಯ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಎಸ್​ಪಿ ಕೆ.ಜಿ. ದೇವರಾಜ್, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಸಿ ಡಾ. ದಿಲೀಪ್ ಶಶಿ, ನಗರಸಭೆ ಪೌರಾಯುಕ್ತ ಬಸವರಾಜ ಜಿದ್ದಿ, ಡಿವೈಎಸ್​ಪಿ ವಿಜಯಕುಮಾರ ಸಂತೋಷ, ತಹಸೀಲ್ದಾರ್ ಶಂಕರ ಜಿ.ಎಸ್., ಸಿಪಿಐಗಳಾದ ಟಿ. ಮಂಜು, ಕಾವ್ಯಾ ಕೆ., ಸಂತೋಷ ಪವಾರ, ಪಿಎಸ್​ಐಗಳಾದ ಗಂಗಾಧರ ಎನ್., ಮಂಜು ಬಿ.ಎನ್., ಇತರರು ಪಾಲ್ಗೊಂಡು ಮಾಸ್ಕ್ ಧರಿಸದವರಿಗೆ ದಂಡಹಾಕಿ ಎಚ್ಚರಿಕೆ ನೀಡಿದರು.

    ದಂಡದ ರಸೀದಿ ಬರೆದ ಡಿಸಿ

    ಜಾಗೃತಿ ಜಾಥಾದಲ್ಲಿ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣನವರ ಕ್ಯಾಂಟೀನ್ ಒಂದರಲ್ಲಿ ಮಾಸ್ಕ್ ಧರಿಸದೇ ಕುಳಿತಿದ್ದ ಯುವಕನಿಗೆ ಎಚ್ಚರಿಕೆ ನೀಡಿ 100ರೂ. ದಂಡದ ರಸೀದಿಯನ್ನು ತಾವೇ ಬರೆದು ಪ್ರತಿಯನ್ನು ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts