More

    ಮಾಸಾಂತ್ಯಕ್ಕೆ ಮಾದಿಗ ಜಾಗೃತಿ ಸಮಾವೇಶ: ನರೇಂದ್ರಬಾಬು – ಮಾದಿಗ ದಂಡೋರ ಸಭೆ

    ದಾವಣಗೆರೆ: ಹೈದರಾಬಾದ್‌ನಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಮಾದಿಗ ಜಾಗೃತಿ ಸಮಾವೇಶ ನಡೆಯಲಿದ್ದು ದೇಶದ ವಿವಿಧ ರಾಜ್ಯಗಳಲ್ಲಿ ಮಾದಿಗ ಸಮಾಜಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ಸರ್ಕಾರಕ್ಕೆ ಒತ್ತಡ ತರಲಾಗುವುದು ಎಂದು ರಾಷ್ಟ್ರೀಯ ಮಾದಿಗ ದಂಡೋರದ ರಾಷ್ಟ್ರೀಯ ಕಾರ್ಯದರ್ಶಿ, ಕರ್ನಾಟಕ ಉಸ್ತುವಾರಿ ಎಸ್. ನರೇಂದ್ರಬಾಬು ಹೇಳಿದರು.
    ನಗರದ ಶಾಂತಿ ರಾಯಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ, ದಾವಣಗೆರೆ-ಚಿತ್ರದುರ್ಗ ಜಿಲ್ಲೆಗಳ ಮಾದಿಗ ದಂಡೋರ ಕಾರ್ಯಕಾರಿ ಸಭೆ ಉದ್ಘಾಟಿಸಿ ಮಾತನಾಡಿದರು.
    ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಮಾದಿಗ ನೇತೃತ್ವದಲ್ಲಿ ಈ ಸಮಾವೇಶ ನಡೆಯಲಿದೆ. ಉಭಯ ಜಿಲ್ಲೆಗಳ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೈದರಾಬಾದ್ ಚಲೋ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
    ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಹೆಚ್ಚಿನ ಜನಸಂಖ್ಯೆ ಹೊಂದಿರುವ ಮಾದಿಗ ಸಮಾಜವು ಅತ್ಯಂತ ಹಿಂದುಳಿದಿದೆ. ಶತಮಾನಗಳಿಂದ ಶೋಷಣೆಗೆ ಸಿಲುಕಿ ಆರ್ಥಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಸಮಾಜ ಹಿಂದುಳಿದಿದೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಯಿಂದ ಮಾತ್ರವೇ ಕಲ್ಯಾಣ ಸಾಧ್ಯವಾಗಲಿದೆ ಎಂದರು.
    ಹಾಗಾಗಿ ಆಯೋಗದ ವರದಿ ಜಾರಿಗಾಗಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಂಘಟನೆ ಬಲಪಡಿಸಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಚಿತ್ರದುರ್ಗ-ದಾವಣಗೆರೆ ಜಿಲ್ಲೆಯ ಪದಾಧಿಕಾರಿಗಳು ತಾಲೂಕು ಮಟ್ಟಗಳಲ್ಲಿ ಸಭೆಗಳನ್ನು ನಡೆಸಿ ಹೋರಾಟ ರೂಪಿಸಬೇಕು ಎಂದು ಹೇಳಿದರು.
    ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಎಚ್.ಸಿ. ಗುಡ್ಡಪ್ಪ, ಜಿಲ್ಲೆಯಲ್ಲಿ ಮಾದಿಗ ಸಮಾಜವು ಹೆಚ್ಚಿನ ಜನಸಂಖ್ಯೆ ಹೊಂದಿದ್ದರೂ ರಾಜಕೀಯ ಕ್ಷೇತ್ರದಲ್ಲಿ ತೀರ ಹಿಂದುಳಿದಿದೆ. ಸರ್ಕಾರವು ಮಾದಿಗ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಿ, ನ್ಯಾಯ ದೊರಕಿಸಿ ಕೊಡಬೇಕೆಂದು ಕೋರಿದರು.
    ಹೊಳಲ್ಕೆರೆ ಕ್ಷೇತ್ರದ ಮಾಜಿ ಶಾಸಕ ಎಚ್. ಆಂಜನೇಯ ಅವರು ಸಮಾಜದ ಪ್ರಭಾವಿ ನಾಯಕರಾಗಿದ್ದಾರೆ. ನಾಲ್ಕು ದಶಕದಿಂದ ಒಳ ಮೀಸಲು ವರ್ಗೀಕರಣಕ್ಕಾಗಿ ಹೋರಾಟಗಳನ್ನು ಮಾಡುತ್ತ ಬಂದಿದ್ದಾರೆ. ಇವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ನೇಮಕ ಮಾಡಿಕೊಂಡು ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಿ ಕೊಡಬೇಕೆಂದು ಒತ್ತಾಯಿಸಿದರು.
    ಜಿಲ್ಲೆಯಲ್ಲಿ ಕೆಲವರು ಪರಿಶಿಷ್ಟ ಜಾತಿ ಹೆಸರಲ್ಲಿ ಸುಳ್ಳು ಜಾತಿಪ್ರಮಾಣ ಪತ್ರ ಪಡೆದು ನಿಜವಾದ ಎಸ್ಸಿ ಜನಾಂಗಗಳಿಗೆ ಅನ್ಯಾಯ ಮಾಡುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಇಂತವರ ವಿರುದ್ಧ ಕ್ರಮ ಕೈಗೊಂಡು ನೈಜ ಪರಿಶಿಷ್ಟರಿಗೆ ನ್ಯಾಯ ಒದಗಿಸಬೇಕೆಂದು ಕೋರಿದರು.
    ಸಭೆಯಲ್ಲಿ ರಾಜ್ಯ ಸಮಿತಿಯ ಪದಾಧಿಕಾರಿಗಳಾದ ಎ.ಕೆ ಹುಲುಗಪ್ಪ ಬಳ್ಳಾರಿ, ಎಚ್. ರವಿಚಂದ್ರ ಚಿತ್ರದುರ್ಗ, ಬಿ. ತಿಪ್ಪೇಸ್ವಾಮಿ, ಎಚ್.ಚಿದಾನಂದಪ್ಪ, ಹಿಂಡಸಘಟ್ಟದ ಹನುಮಂತಪ್ಪ, ತಾಲೂಕು ಅಧ್ಯಕ್ಷರಾದ ಎ.ಕೆ.ನಾಗೇಂದ್ರಪ್ಪ, ಈಚಘಟ್ಟ ಕೆಂಚಪ್ಪ, ಜಿ.ಎಚ್. ಮಹೇಶ್, ಎಂ.ಆಂಜನೇಯ, ಬಿ.ಎಸ್.ಕೃಷ್ಣಮೂರ್ತಿ ಆನಗೋಡು, ಬಾಡದ ಕೆಂಚವೀರಪ್ಪ, ಕಳವೂರು ರಂಗಪ್ಪ, ಮುಡೇನಹಳ್ಳಿ ಶಿವಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts